ಗ್ಯಾರಂಟಿ ಪಟ್ಟಿಯಲ್ಲಿ ಶಿಕ್ಷಣವನ್ನೂ ಸೇರಿಸಿ: ಸರ್ಕಾರಕ್ಕೆ ಬರಗೂರು ಸಲಹೆ

ಎಲ್ಲಾ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿವೆ. ಕೇವಲ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವ ಕಡೆ ಗಮನ ಹರಿಸುತ್ತಿವೆಯೇ ಹೊರತು, ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸುವುದನ್ನೇ ಮರೆತಂತಿದೆ.;

Update: 2025-01-24 10:54 GMT
ಡಾ. ಬರಗೂರು ರಾಮಚಂದ್ರಪ್ಪ

ʼಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಬೇಕಾದ ಸರ್ಕಾರಗಳು ಶಿಕ್ಷಣ ಕ್ಷೇತ್ರದ ಮಹತ್ವವನ್ನೇ ಮರೆತಂತಿದೆ. ಸರ್ಕಾರಗಳು ಮೊದಲು ಶಿಕ್ಷಣವನ್ನು ಗ್ಯಾರಂಟಿ ಪಟ್ಟಿಯಲ್ಲಿ ಸೇರಿಸಬೇಕು' ಎಂದು ಸಾಹಿತಿ ಡಾ ಬರಗೂರು ರಾಮಚಂದ್ರಪ್ಪ ಆಗ್ರಹಿಸಿದರು.

ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಕರ ಪರಿಷತ್ತು ವತಿಯಿಂದ ಆಯೋಜಿಸಿದ್ದ 'ಸೇವಾ ನಿವೃತ್ತ ಪ್ರಾಧ್ಯಾಪಕರಿಗೆ ಗೌರವ ಸಮರ್ಪಣೆ ಸಮಾರಂಭ'ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

'ಎಲ್ಲಾ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿವೆ. ಕೇವಲ ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವ ಕಡೆ ಗಮನ ಹರಿಸುತ್ತಿವೆಯೇ ಹೊರತು, ಅವುಗಳಿಗೆ ಮೂಲ ಸೌಕರ್ಯ ಕಲ್ಪಿಸುವುದನ್ನೇ ಮರೆತಂತಿದೆ. ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿಲ್ಲ. ಹೊಸ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ವಾಹನದ ಪೆಟ್ರೋಲ್‌ಗೂ ಹಣವಿಲ್ಲ. ಮೂಲ ಸೌಕರ್ಯ, ಗ್ರಂಥಾಲಯಗಳಿಗೆ ಅನುದಾನವಿಲ್ಲ. ಈ ಬಗ್ಗೆಯೂ ಸಂಘಟನೆಗಳು ಧ್ವನಿ ಎತ್ತಬೇಕು' ಎಂದರು.

'ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳಲ್ಲಿ ಕಾಯಂ ಪ್ರಾಧ್ಯಾಪಕ, ಉಪನ್ಯಾಸಕರ ಕೊರತೆ ಎದ್ದು ಕಾಣುತ್ತಿದೆ. ಕೆಲವೆಡೆ ಬೆರಳೆಣಿಕೆಯಷ್ಟೂ ಕಾಯಂ ಪ್ರಾಧ್ಯಾಪಕರಿಲ್ಲ. ರಾಜ್ಯದಲ್ಲಿ 13,000 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಷ್ಟಾದರೂ ಸಮಸ್ಯೆ ಬಗೆಹರಿದಿಲ್ಲ. ಇದರಿಂದ ಸಂಶೋಧನೆ ಮತ್ತು ಅಧ್ಯಯನದ ಮೇಲೆ ಪರಿಣಾಮ ಬೀರಲಿದೆ' ಎಂದು ಪ್ರತಿಪಾದಿಸಿದರು.

'ಕೇವಲ ಪಾಠ ಮಾಡುವುದೇ ಶಿಕ್ಷಕ ವೃತ್ತಿಯ ಕೆಲಸವಲ್ಲ. ಮುಂದಿನ ಪೀಳಿಗೆಯನ್ನು ಆರೋಗ್ಯಕರವಾಗಿರಿಸಲು ಪ್ರಯತ್ನಿಸಬೇಕು. ಸರ್ಕಾರದಿಂದ ಸೌಲಭ್ಯಕ್ಕೆ ಮತ್ತು ಪ್ರಾಧ್ಯಾಪಕರ ನೇಮಕಾತಿಗೆ ಹಕ್ಕೊತ್ತಾಯ ಮಾಡಬೇಕು. ಪ್ರಾಧ್ಯಾಪಕರು ತಮ್ಮ ನೈತಿಕತೆ ಮತ್ತು ಜವಾಬ್ದಾರಿ ಮೆರೆಯಬೇಕು' ಎಂದು ಆಗ್ರಹಿಸಿದರು.

Tags:    

Similar News