ಕರ್ನಾಟಕದಲ್ಲಿ ಸೆ. 22ರಿಂದ ಜಾತಿ ಗಣತಿ ಆರಂಭ; ಮೊಬೈಲ್ ಆ್ಯಪ್ ಮೂಲಕ ಸರ್ವೇ

ಈ ಸಮೀಕ್ಷೆಯು ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಭೂ ಮಾಲೀಕತ್ವದ ವಿವರಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಿದೆ. ಈ ಸಮೀಕ್ಷೆಯ ವರದಿಯು ಮುಂದಿನ ಬಜೆಟ್ ಸಿದ್ಧಪಡಿಸಲು ಆಧಾರವಾಗಲಿದೆ.;

Update: 2025-07-23 09:05 GMT

ಸಿಎಂ ಸಿದ್ದರಾಮಯ್ಯ 

ರಾಜ್ಯದಲ್ಲಿ ಜಾತಿ ತಾರತಮ್ಯವನ್ನು ನಿವಾರಿಸಿ, ವರ್ಗ ರಹಿತ ಮತ್ತು ಜಾತಿ ರಹಿತ ಸಮಾಜ ನಿರ್ಮಾಣ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ, ರಾಜ್ಯದ ಎಲ್ಲಾ 7 ಕೋಟಿ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಅಂಗೀಕರಿಸಲಾಗಿದ್ದು, ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ 15 ದಿನಗಳ ಕಾಲ ಈ ಬೃಹತ್ ಗಣತಿ ಕಾರ್ಯ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಸಿದ್ದಾರೆ.

ಕಾಂತರಾಜು ಹಾಗೂ ಜಯಪ್ರಕಾಶ್ ಹೆಗಡೆ ಆಯೋಗವು ರಚಿಸಿ ಸಲ್ಲಿಕೆ ಮಾಡಿದ್ದ ಜಾತಿ ಸಮೀಕ್ಷೆಯ ಅಂಗೀಕಾರ ಮಾಡಲು ಸರ್ಕಾರ ಮುಂದಾದಾಗ ಕೆಲವು ಪ್ರಬಲ ಸಮುದಾಯಗಳಿಂದ ಭಾರೀ ವಿರೋಧ ವ್ಯಕ್ತಗೊಂಡ ಬಳಿಕ ಅದನ್ನು ಕೇಂದ್ರ ನಾಯಕರ ಸಮ್ಮುಖದಲ್ಲಿ ರದ್ದು ಮಾಡಲಾಗಿತ್ತು. ಈ ವೇಳೆ ಹೊಸ ಸಮೀಕ್ಷೆ ಮಾಡುವುದಾಗಿ ಘೋಷಿಸಲಾಗಿತ್ತು. ಅದರಂತೆ ಇದೀಗ ದಿನಾಂಕ ಪ್ರಕಟಿಸಲಾಗಿದೆ.

ದೇಶದಲ್ಲೇ ಮಾದರಿಯಾಗಲಿದೆ ಸಮೀಕ್ಷೆ

ಈ ಸಮೀಕ್ಷೆಯು ಪ್ರತಿಯೊಬ್ಬರ ಆರ್ಥಿಕ ಪರಿಸ್ಥಿತಿ, ಭೂ ಮಾಲೀಕತ್ವದ ವಿವರಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಿದೆ. ಈ ಸಮೀಕ್ಷೆಯ ವರದಿಯು ಮುಂದಿನ ಬಜೆಟ್ ಸಿದ್ಧಪಡಿಸಲು ಆಧಾರವಾಗಲಿದ್ದು, ಇದು ದೇಶದಲ್ಲೇ ಒಂದು ಮಾದರಿ ಸಮೀಕ್ಷೆಯಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯ ವ್ಯಕ್ತಪಡಿಸಿದರು.

ಸಮೀಕ್ಷೆಯ ವಿಧಾನ ಮತ್ತು ಮೇಲ್ವಿಚಾರಣೆ

ಹಿಂದೆ ಕಾಂತರಾಜು ಆಯೋಗವು 54 ಪ್ರಶ್ನೆಗಳೊಂದಿಗೆ ಭೌತಿಕವಾಗಿ (manual) ಸಮೀಕ್ಷೆ ನಡೆಸಿತ್ತು. ಆದರೆ ಈ ಬಾರಿ, ಮತ್ತಷ್ಟು ಅಂಶಗಳನ್ನು ಸೇರಿಸಿ, ಮೊಬೈಲ್ ಆ್ಯಪ್ ಬಳಸಿಕೊಂಡು ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಸಮೀಕ್ಷೆಯು ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು, ಕೇಳಬೇಕಾದ ಪ್ರಶ್ನೆಗಳನ್ನು ಅಂತಿಮಗೊಳಿಸಲು ತಜ್ಞರ ಸಮಿತಿಯ ನೆರವು ಪಡೆಯಲಾಗುವುದು. ತೆಲಂಗಾಣದಲ್ಲಿ ಕೈಗೊಂಡಿರುವ ಗಣತಿಯ ಕುರಿತು ಅಧ್ಯಯನ ನಡೆಸಲು ಸೂಚಿಸಿರುವ ಸಿಎಂ, ಸಮೀಕ್ಷಾ ಕಾರ್ಯದ ಮೇಲುಸ್ತುವಾರಿಗೆ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಿದರು.

ದೂರುಗಳಿಗೆ ಅವಕಾಶವಿಲ್ಲದಂತೆ ಮುನ್ನೆಚ್ಚರಿಕೆ

ಸಮೀಕ್ಷೆಯ ಕುರಿತು ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಮತ್ತು ಯಾರೊಬ್ಬರೂ ಸಮೀಕ್ಷೆಯಿಂದ ಹೊರಗುಳಿಯದಂತೆ ಖಾತ್ರಿಪಡಿಸಿಕೊಳ್ಳಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬೃಹತ್ ಸಿದ್ಧತೆ

ಈ ಬೃಹತ್ ಕಾರ್ಯಕ್ಕಾಗಿ ಸುಮಾರು 1.65 ಲಕ್ಷ ಗಣತಿದಾರರ ಅವಶ್ಯಕತೆಯಿದ್ದು, ಶಿಕ್ಷಕರೊಂದಿಗೆ ಇತರ ಇಲಾಖೆಗಳ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುವುದು. ಪೂರ್ವಭಾವಿ ಸಿದ್ಧತೆಗಳನ್ನು ಈಗಿನಿಂದಲೇ ಆರಂಭಿಸುವಂತೆ ಸೂಚಿಸಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸಮೀಕ್ಷೆಯನ್ನು ಯಶಸ್ವಿಗೊಳಿಸಲು ವಿಶೇಷ ಯೋಜನೆ ರೂಪಿಸಬೇಕು ಮತ್ತು ಉಪ ಜಾತಿಗಳನ್ನು ನಿಖರವಾಗಿ ನಮೂದಿಸಬೇಕು ಎಂದು ಸಿಎಂ ಸೂಚಿಸಿದರು.

ಸಮ ಸಮಾಜ ನಿರ್ಮಾಣದ ಗುರಿ

"ವರ್ಗ ರಹಿತ, ಜಾತಿ ರಹಿತ ಸಮಾಜ ನಿರ್ಮಾಣವಾಗಬೇಕು. ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಯುಳ್ಳ ಸಮ ಸಮಾಜ ನಿರ್ಮಾಣವಾಗಬೇಕು ಎಂಬ ಕಾಳಜಿಯಿಂದ ಈ ಸಮೀಕ್ಷೆ ನಡೆಸಲಾಗುತ್ತಿದೆ. ಈ ವರದಿಯನ್ನು ಆಧರಿಸಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸ ಆಗಬೇಕು," ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸಭೆಯಲ್ಲಿ ಸಚಿವ ಶಿವರಾಜ ತಂಗಡಗಿ, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ ಆರ್. ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Similar News