ವಿಶೇಷ ಸಂದರ್ಶನ: ಜಾತಿಗಣತಿ- ಹೇಗಿದೆ ಪ್ರಗತಿ? ಐಎಎಸ್ ಅಧಿಕಾರಿ ದಯಾನಂದ್ ಉತ್ತರ
ಆರಂಭದಲ್ಲಿ ಕೆಲವು ಪರ-ವಿರೋಧ ಚರ್ಚೆಗಳಿದ್ದರೂ, ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷೆ ಉತ್ತಮವಾಗಿ ಸಾಗುತ್ತಿದೆ. ಬೃಹತ್ ಬೆಂಗಳೂರು ಹೊರತುಪಡಿಸಿ, ರಾಜ್ಯದಾದ್ಯಂತ ಭಾನುವಾರದ ವೇಳೆಗೆ ಶೇ. 71ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ.
ʼದ ಫೆಡರಲ್ ಕರ್ನಾಟಕʼ ನಡೆಸಿದ ವಿಶೇಷ ಸಂದರ್ಶನದಲ್ಲಿ ಐಎಎಸ್ ಅಧಿಕಾರಿ ಕೆ.ಎ. ದಯಾನಂದ್ ಪಾಲ್ಗೊಂಡಿದ್ದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಮಹತ್ವಾಕಾಂಕ್ಷೆಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಹಲವು ಚರ್ಚೆ, ವಿವಾದ ಮತ್ತು ನಿರೀಕ್ಷೆಗಳ ನಡುವೆ ಅಂತಿಮ ಹಂತ ತಲುಪಿದೆ. ಈ ಬೃಹತ್ ಕಾರ್ಯದ ಹಿಂದಿನ ಸವಾಲುಗಳು, ವೈಜ್ಞಾನಿಕ ವಿಧಾನ ಮತ್ತು ಮುಂದಿನ ಹಾದಿಯ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಐಎಎಸ್ ಅಧಿಕಾರಿ ಕೆ ಎ. ದಯಾನಂದ್ ಅವರು 'ದ ಫೆಡರಲ್ ಕರ್ನಾಟಕ' ಜೊತೆ ಮಾತನಾಡಿದ್ದಾರೆ.
ದ ಫೆಡರಲ್ ಕರ್ನಾಟಕ: ಪ್ರಸ್ತುತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಹೇಗಿದೆ?
ದಯಾನಂದ್: ಆರಂಭದಲ್ಲಿ ಕೆಲವು ಪರ-ವಿರೋಧ ಚರ್ಚೆಗಳಿದ್ದರೂ, ನ್ಯಾಯಾಲಯದ ನಿರ್ದೇಶನದಂತೆ ಸಮೀಕ್ಷೆ ಉತ್ತಮವಾಗಿ ಸಾಗುತ್ತಿದೆ. ಬೃಹತ್ ಬೆಂಗಳೂರು ಹೊರತುಪಡಿಸಿ, ರಾಜ್ಯದಾದ್ಯಂತ ಭಾನುವಾರದ ವೇಳೆಗೆ ಶೇ. 71ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ವಿಶೇಷವಾಗಿ ಕೊಪ್ಪಳ, ದಾವಣಗೆರೆ, ಮತ್ತು ಗದಗ್ ಜಿಲ್ಲೆಗಳಲ್ಲಿ ಶೇ. 90ಕ್ಕೂ ಹೆಚ್ಚು ಪ್ರಗತಿ ಸಾಧಿಸಲಾಗಿದೆ.
ದ ಫೆಡರಲ್ ಕರ್ನಾಟಕ: ಯಾವ ಜಿಲ್ಲೆಗಳಲ್ಲಿ ಸಮೀಕ್ಷೆ ನಿಧಾನಗತಿಯಲ್ಲಿದೆ?
ದಯಾನಂದ್: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ಶೇ. 50ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಮೈಸೂರು ಜಿಲ್ಲೆಯಲ್ಲಿ ದಸರಾ ಉತ್ಸವದ ಕಾರಣದಿಂದಾಗಿ ಸ್ವಲ್ಪ ನಿಧಾನವಾಗಿತ್ತು, ಆದರೆ ಈಗ ವೇಗ ಪಡೆದುಕೊಂಡಿದೆ.
ದ ಫೆಡರಲ್ ಕರ್ನಾಟಕ: ಸಮೀಕ್ಷೆಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ಸ್ಪಂದನೆ ಹೇಗಿದೆ?
ದಯಾನಂದ್: ಗ್ರಾಮೀಣ ಪ್ರದೇಶಗಳಲ್ಲಿ ಜನರ ಸಹಕಾರ ಅತ್ಯುತ್ತಮವಾಗಿದೆ. ಆದರೆ, ನಗರ ಪ್ರದೇಶಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಜನರ ಸ್ಪಂದನೆ ನಿರುತ್ಸಾಹದಿಂದ ಕೂಡಿದೆ. ಇದು ನಗರ ಪ್ರದೇಶಗಳಲ್ಲಿ ಮತದಾನದ ಸಮಯದಲ್ಲಿಯೂ ಕಂಡುಬರುವ ಸಾಮಾನ್ಯ ಪ್ರವೃತ್ತಿಯಾಗಿದೆ.
ದ ಫೆಡರಲ್ ಕರ್ನಾಟಕ: ನಿಗದಿತ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳ್ಳಲಿದೆಯೇ?
ದಯಾನಂದ್: ದಿನವೊಂದಕ್ಕೆ 10 ರಿಂದ 15 ಲಕ್ಷ ಕುಟುಂಬಗಳ ಸಮೀಕ್ಷೆ ನಡೆಸಿದ ಉದಾಹರಣೆಗಳಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಹೊರತುಪಡಿಸಿ, ಉಳಿದ ಗ್ರಾಮೀಣ ಭಾಗಗಳಲ್ಲಿ ಸಮೀಕ್ಷೆಯು ನಿಗದಿತ ಸಮಯಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ.
ದ ಫೆಡರಲ್ ಕರ್ನಾಟಕ: ಬೆಂಗಳೂರಿನಲ್ಲಿ ಸಮೀಕ್ಷೆಗೆ ಜನರ ಸಹಕಾರ ಯಾಕೆ ಕಡಿಮೆ ಇದೆ?
ದಯಾನಂದ್: ಜನರು ಸರ್ಕಾರದ ಜವಾಬ್ದಾರಿ ಮತ್ತು ಸದುದ್ದೇಶಗಳನ್ನು ಅರ್ಥಮಾಡಿಕೊಳ್ಳಬೇಕು. ಬೆಂಗಳೂರಿನಲ್ಲಿ ಜನರ ಸಹಕಾರ ಕಡಿಮೆ ಇರುವುದಕ್ಕೆ ನಾವು ನಾಲ್ಕು ಪ್ರಮುಖ ಕಾರಣಗಳನ್ನು ಗುರುತಿಸಬಹುದು. ಮೊದಲನೆಯದಾಗಿ, ಹಳ್ಳಿಗಳಿಂದ ವಲಸೆ ಬಂದಿರುವ ಅನೇಕರು ತಮ್ಮ ಊರುಗಳಿಗೆ ಹೋಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಎರಡನೆಯದಾಗಿ, ಹೊರ ರಾಜ್ಯಗಳಿಂದ ಕೇವಲ ಉದ್ಯೋಗಕ್ಕಾಗಿ ಬಂದವರಿಗೆ ಈ ಸಮೀಕ್ಷೆಯಲ್ಲಿ ಆಸಕ್ತಿ ಇರುವುದಿಲ್ಲ. ಮೂರನೆಯದಾಗಿ, ಬೆಂಗಳೂರಿನ ಶಿಫ್ಟ್ ಪದ್ಧತಿಯ ಕೆಲಸದಿಂದಾಗಿ ಗಣತಿದಾರರು ಭೇಟಿ ನೀಡಿದಾಗ ಜನರು ಮನೆಯಲ್ಲಿ ಲಭ್ಯವಿರುವುದಿಲ್ಲ. ಕೊನೆಯದಾಗಿ, ಸುರಕ್ಷತೆಯ ಕಾರಣಕ್ಕಾಗಿ, ವಿಶೇಷವಾಗಿ ವೃದ್ಧರು, ಅಪರಿಚಿತರಿಗೆ ಬಾಗಿಲು ತೆರೆಯಲು ಹಿಂಜರಿಯುತ್ತಾರೆ. ಈ ಬಗ್ಗೆ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು.
ದ ಫೆಡರಲ್ ಕರ್ನಾಟಕ: ಬೆಂಗಳೂರಿನಲ್ಲಿ ಸಮೀಕ್ಷೆ ಮುಗಿಯಲು ಎಷ್ಟು ದಿನ ಬೇಕಾಗಬಹುದು?
ದಯಾನಂದ್: ಬೆಂಗಳೂರಿನಲ್ಲಿ ಸಮೀಕ್ಷೆ ಪೂರ್ಣಗೊಳ್ಳಲು ಇನ್ನೂ ಸುಮಾರು 15 ದಿನಗಳು ಬೇಕಾಗಬಹುದು. ಇದು ಸ್ವಲ್ಪ ಸವಾಲಿನ ಕೆಲಸವಾಗಿದೆ.
ದ ಫೆಡರಲ್ ಕರ್ನಾಟಕ: ಸಮೀಕ್ಷೆಯ ಪ್ರಶ್ನಾವಳಿಯು ಎಷ್ಟು ವೈಜ್ಞಾನಿಕವಾಗಿದೆ? ಅದನ್ನು ಹೇಗೆ ತಯಾರಿಸಲಾಯಿತು?
ದಯಾನಂದ್: ಈ ಪ್ರಶ್ನಾವಳಿಯನ್ನು ನಾವೇ ಕುಳಿತು ತಯಾರಿಸಿದ್ದಲ್ಲ. ಕಾಂತರಾಜ್ ಆಯೋಗದ ಪ್ರಶ್ನೆಗಳನ್ನು ಗಣನೆಗೆ ತೆಗೆದುಕೊಂಡು, ಒಂದು ತಜ್ಞರ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ವಿಶ್ವಬ್ಯಾಂಕ್, ಐಐಎಂ, ಮತ್ತು ಕೆನಡಾದ ತಜ್ಞರೊಂದಿಗೆ ಚರ್ಚಿಸಿ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯನ್ನು ವೈಜ್ಞಾನಿಕವಾಗಿ ಅಳೆಯಲು ಯಾವ ಪ್ರಶ್ನೆಗಳು ಅನಿವಾರ್ಯವೋ ಅವುಗಳನ್ನು ಮಾತ್ರವೇ ಅಂತಿಮಗೊಳಿಸಿ, ಪ್ರಶ್ನಾವಳಿಯನ್ನು ಸಿದ್ಧಪಡಿಸಿದೆ.
ದ ಫೆಡರಲ್ ಕರ್ನಾಟಕ: ಸಮೀಕ್ಷೆಯ ಪ್ರಶ್ನಾವಳಿಯಲ್ಲಿರುವ 60 ಪ್ರಶ್ನೆಗಳು ಹೆಚ್ಚಾದವು ಮತ್ತು ಚಿನ್ನ, ಆಸ್ತಿಯಂತಹ ವೈಯಕ್ತಿಕ ಪ್ರಶ್ನೆಗಳು ಬೇಕಿರಲಿಲ್ಲ ಎಂಬ ಟೀಕೆಗಳಿವೆಯಲ್ಲ?
ದಯಾನಂದ್: ಆರ್ಥಿಕ ಸ್ಥಿತಿಯನ್ನು ಕೇವಲ ಆದಾಯದಿಂದ ಅಳೆಯಲು ಸಾಧ್ಯವಿಲ್ಲ. ಚರಾಸ್ತಿ ಮತ್ತು ಸ್ಥಿರಾಸ್ತಿಯ ವಿವರಗಳೂ ಬೇಕಾಗುತ್ತವೆ. ಈ ಎಲ್ಲಾ ಮಾಹಿತಿಯನ್ನು ನಾವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಾಗಲೂ ನೀಡುತ್ತೇವೆ. ಆದ್ದರಿಂದ, ಈ ಪ್ರಶ್ನೆಗಳು ವೈಜ್ಞಾನಿಕ ವಿಶ್ಲೇಷಣೆಗೆ ಅವಶ್ಯಕ.
ದ ಫೆಡರಲ್ ಕರ್ನಾಟಕ: ಸಮೀಕ್ಷೆಯ ತಂತ್ರಜ್ಞಾನ (ಜಿಯೋ-ಟ್ಯಾಗಿಂಗ್, ಆ್ಯಪ್) ಹೇಗಿತ್ತು? ಆರಂಭದಲ್ಲಿದ್ದ ಸಮಸ್ಯೆಗಳು ಬಗೆಹರಿದಿವೆಯೇ?
ದಯಾನಂದ್: ಪ್ರತಿ ಮನೆಗೂ ಜಿಯೋ-ಟ್ಯಾಗ್ ಅಳವಡಿಸಿರುವುದು ಇದೇ ಮೊದಲು. ಹಾಗಾಗಿ, ಆರಂಭದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಆ್ಯಪ್ ಬಳಕೆಯ ಬಗ್ಗೆಯೂ ಕೆಲವರಿಗೆ ಗೊಂದಲವಿತ್ತು. ಆದರೆ, ಆ ಸಮಸ್ಯೆಗಳನ್ನು ಎರಡು ದಿನಗಳಲ್ಲೇ ಬಗೆಹರಿಸಲಾಗಿದೆ. ಒಂದು ವೇಳೆ ಆ್ಯಪ್‌ನಲ್ಲಿ ಸಮಸ್ಯೆ ಇದ್ದಿದ್ದರೆ, ಇಷ್ಟೊಂದು ಪ್ರಮಾಣದಲ್ಲಿ ಸಮೀಕ್ಷೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ.
ದ ಫೆಡರಲ್ ಕರ್ನಾಟಕ: ಸಮೀಕ್ಷೆಯ ಬಗ್ಗೆ ನಡೆಯುತ್ತಿರುವ ಅಪಪ್ರಚಾರ ಮತ್ತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಡಿ ಎನ್ನುವವರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ದಯಾನಂದ್: ಯಾವುದೇ ಹಿಂದುಳಿದ ವರ್ಗಗಳ ಸಮೀಕ್ಷೆ ಅಥವಾ ವರದಿ ಬಂದಾಗ, ಪರ-ವಿರೋಧ ವಾದಗಳು ಸಹಜವಾಗಿಯೇ ಇರುತ್ತವೆ. ಇದೆಲ್ಲವೂ ಸಾಮಾನ್ಯ.
ದ ಫೆಡರಲ್ ಕರ್ನಾಟಕ: ಸಮೀಕ್ಷೆಗೆ ಮಾಹಿತಿ ನೀಡಲು ನಿರಾಕರಿಸಿದರೆ ವರದಿಯ ಮೇಲೆ ಏನು ಪರಿಣಾಮ ಬೀರುತ್ತದೆ?
ದಯಾನಂದ್: ನ್ಯಾಯಾಲಯದ ಆದೇಶದಂತೆ ನಾವು ಯಾರನ್ನೂ ಬಲವಂತಪಡಿಸುತ್ತಿಲ್ಲ. ಒಂದು ಕುಟುಂಬ ಮಾಹಿತಿ ನೀಡಲು ನಿರಾಕರಿಸಿದರೆ, ಅದನ್ನು 'ನಿರಾಕರಣೆ' ಎಂದು ದಾಖಲಿಸಿ ಕೈಬಿಡಲಾಗುತ್ತದೆ. ಅಲ್ಲದೆ, ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರಿಸಲು ಇಷ್ಟವಿಲ್ಲದಿದ್ದರೆ, 'ಇತರೆ' ಕಾಲಂನಲ್ಲಿ ಅದನ್ನು ನಮೂದಿಸಲು ಅವಕಾಶವಿದೆ. ಆದರೆ, ನಾವು ಅಂದುಕೊಂಡಷ್ಟು ವಿರೋಧ ಸಾರ್ವಜನಿಕರಿಂದ ವ್ಯಕ್ತವಾಗಿಲ್ಲ.
ದ ಫೆಡರಲ್ ಕರ್ನಾಟಕ: ಸಮೀಕ್ಷೆ ಮುಗಿದ ನಂತರ, ವರದಿಯನ್ನು ಹೇಗೆ ಸಿದ್ಧಪಡಿಸಲಾಗುತ್ತದೆ?
ದಯಾನಂದ್: ಇದು ದ್ವಿ-ಹಂತದ ಪ್ರಕ್ರಿಯೆ. ಈಗ ನಡೆಯುತ್ತಿರುವುದು 'ಪ್ರಾಥಮಿಕ' ದತ್ತಾಂಶ ಸಂಗ್ರಹ. ಇದರ ನಂತರ, ಕೆಪಿಎಸ್ಸಿ, ಕೆಇಎ ಮುಂತಾದ ಸರ್ಕಾರಿ ಇಲಾಖೆಗಳಿಂದ 'ಸೆಕೆಂಡರಿ' ದತ್ತಾಂಶವನ್ನು (ಉದ್ಯೋಗ ಮಾಹಿತಿ) ಪಡೆಯುತ್ತೇವೆ. ಈ ಎರಡೂ ದತ್ತಾಂಶಗಳನ್ನು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ಕ್ರೋಢೀಕರಿಸಿ, ಅಂತಿಮ ವರದಿ ಸಿದ್ಧಪಡಿಸಲಾಗುತ್ತದೆ.
ದ ಫೆಡರಲ್ ಕರ್ನಾಟಕ: ಅಂತಿಮ ವರದಿಯನ್ನು ಸರ್ಕಾರಕ್ಕೆ ಯಾವಾಗ ಸಲ್ಲಿಸಬಹುದು?
ದಯಾನಂದ್: ಈ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಕನಿಷ್ಠ ಒಂದೂವರೆಯಿಂದ ಎರಡು ತಿಂಗಳು ಬೇಕಾಗುತ್ತದೆ. ನಂತರ, ನಾವು ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ.