Veera Chandrahasa: ಯಕ್ಷಗಾನದ ಸಾಂಸ್ಕೃತಿಕ ಸೊಗಸು ತೆರೆಗೆ: ‘ವೀರ ಚಂದ್ರಹಾಸ’ನ ರಾಜ್ಯಾದ್ಯಂತ ಬಿಡುಗಡೆ!
Veera Chandrahasa: ಎಸ್.ಎಸ್. ರಾಜಕುಮಾರ್ ನಿರ್ಮಾಣದಲ್ಲಿ ಪ್ರತಿಷ್ಠಿತ ‘ಹೊಂಬಾಳೆ ಫಿಲಂಸ್’ ಬ್ಯಾನರ್‌ನಡಿ ತಯಾರಾದ ಈ ಚಿತ್ರವು ಕರಾವಳಿಯ ಯಕ್ಷಗಾನ ಕಲೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಥೆ ಹೆಣೆದಿದೆ.;
ಪ್ರಾತಿನಿಧಿಕ ಚಿತ್ರ.
ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಸೃಷ್ಟಿಸುವ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನ ಕಲೆಯನ್ನು ಬೆಳ್ಳಿ ಪರದೆಗೆ ತಂದಿರುವ ಮಹತ್ವಾಕಾಂಕ್ಷೆಯ ಚಿತ್ರ ''ವೀರ ಚಂದ್ರಹಾಸ” ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದೆ. ಯಕ್ಷಗಾನ ಪ್ರಸಂಗವನ್ನು ಆಧರಿಸಿದ ವಿಶಿಷ್ಟ ಕಥಾಹಂದರವನ್ನು ಈ ಸಿನಿಮಾ ಹೊಂದಿದ್ದು ಕರಾವಳಿಯ ಸಾಂಸ್ಕೃತಿಕ ಸೊಗಡನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವ ಗುರಿ ಇಟ್ಟುಕೊಂಡಿದೆ.
‘ಕೆಜಿಎಫ್’, ‘ಸಲಾರ್’, ‘ಭೈರತಿ ರಣಗಲ್’, ‘ಉಗ್ರಂ’ನಂತಹ ಬ್ಲಾಕ್‌ಬಸ್ಟರ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ ರವಿ ಬಸ್ರೂರು ಈ ಬಾರಿ ನಿರ್ದೇಶಕರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಎಸ್.ಎಸ್. ರಾಜಕುಮಾರ್ ನಿರ್ಮಾಣದಲ್ಲಿ ಪ್ರತಿಷ್ಠಿತ ‘ಹೊಂಬಾಳೆ ಫಿಲಂಸ್’ ಬ್ಯಾನರ್‌ನಡಿ ತಯಾರಾದ ಈ ಚಿತ್ರವು ಕರಾವಳಿಯ ಯಕ್ಷಗಾನ ಕಲೆಯನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಕಥೆ ಹೆಣೆದಿದೆ. ಚಿತ್ರರಂಗದ ಇತಿಹಾಸದಲ್ಲೇ ಮೊದಲ ಬಾರಿಗೆ ಯಕ್ಷಗಾನವನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ಈ ಚಿತ್ರ ಮಾಡಿದೆ.
ಯಕ್ಷಗಾನ ಕಲಾವಿದರ ಸಮಾಗಮ
“ವೀರ ಚಂದ್ರಹಾಸ” ಚಿತ್ರದ ವಿಶೇಷತೆಯೆಂದರೆ, ಇದರಲ್ಲಿ 400ರಿಂದ 500 ಯಕ್ಷಗಾನ ಕಲಾವಿದರು ಬಣ್ಣ ಹಚ್ಚಿದ್ದಾರೆ. ಚಿತ್ರದ ಶೂಟಿಂಗ್ ಬೆಂಗಳೂರಿನ ಹೆಬ್ಬಾಳದ ಬಳಿಯ ಒಂದು ಗ್ರೌಂಡ್‌ನಲ್ಲಿ 35 ರಿಂದ 40 ದಿನಗಳ ಕಾಲ ನಡೆದಿದ್ದು, ವಿವಿಧ ಸೆಟ್‌ಗಳನ್ನು ನಿರ್ಮಿಸಿ, 8 ರಿಂದ 10 ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಚಿತ್ರ ರೂಪಿಸಲಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜಕುಮಾರ್ ಈ ಚಿತ್ರದಲ್ಲಿ ಯಕ್ಷಗಾನದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸಿನಿಮಾದ ಪ್ರಧಾನ ಆಕರ್ಷಣೆ ಆಗಿದ್ದಾರೆ.
ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ
“ವೀರ ಚಂದ್ರಹಾಸ” ಚಿತ್ರವು ಇಂದು ರಾಜ್ಯಾದ್ಯಂತ 50ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಒಟ್ಟು ಅವಧಿ 2 ಗಂಟೆ 36 ನಿಮಿಷಗಳಾಗಿದ್ದು, ರವಿ ಬಸ್ರೂರು ಅವರ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆದಿವೆ. “ಹಾಡುಗಳು ಬಿಟ್ ಥರ ಇವೆ” ಎಂದು ಚಿತ್ರತಂಡದವರು ಹೇಳಿಕೊಂಡಿದ್ದು, ಯಕ್ಷಗಾನದ ಸಾಂಪ್ರದಾಯಿಕ ರಾಗ-ತಾಳಗಳ ಸಮ್ಮಿಲನವು ಹಾಡುಗಳಿಗೆ ವಿಶಿಷ್ಟ ಸೊಗಸು ತಂದಿದೆ.
ಶಿಕ್ಷಣಕ್ಕೂ ಒಂದು ಕೊಡುಗೆ
ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗದೆ, ಕರಾವಳಿಯ ಸಾಂಸ್ಕೃತಿಕ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವ ಗುರಿಯನ್ನೂ ಹೊಂದಿದೆ. ಈ ನಿಟ್ಟಿನಲ್ಲಿ, ಸರ್ಕಾರಿ ಶಾಲೆಯ ಮಕ್ಕಳಿಗೆ “ವೀರ ಚಂದ್ರಹಾಸ” ಚಿತ್ರವನ್ನು ಉಚಿತವಾಗಿ ಪ್ರದರ್ಶಿಸಲು ಅವಕಾಶ ಕಲ್ಪಿಸಬೇಕೆಂದು ಚಿತ್ರತಂಡವು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ. ಈ ಕ್ರಮವು ಯಕ್ಷಗಾನದಂತಹ ಸಾಂಪ್ರದಾಯಿಕ ಕಲೆಯ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುವ ಜೊತೆಗೆ, ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ಎತ್ತಿಹಿಡಿಯಲಿದೆ.