ಮಾತೃಭಾಷೆಯನ್ನು ಮೂಲೆಗುಂಪಾಗಿಸುವ ಕಾರ್ಯವನ್ನು ಪ್ರಾಧಿಕಾರ ಸಹಿಸುವುದಿಲ್ಲ; ಬಿಳಿಮಲೆ

ನಾಡಿನ ಅಭಿವೃದ್ಧಿ ಎನ್ನುವುದು ಸಂಪೂರ್ಣವಾಗಿ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಸಾಂಸ್ಕೃತಿಕ ಬದುಕಿಗೆ ಕಲಿಕಾ ವ್ಯವಸ್ಥೆಯೇ ನಿರ್ಣಾಯಕ ಪಾತ್ರವನ್ನು ಹೊಂದಿರುತ್ತದೆ.;

Update: 2025-07-04 15:18 GMT

ಪುರುಷೋತ್ತಮ ಬಿಳಿಮಲೆ

ರಾಜ್ಯಾದ್ಯಂತ 4134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹೊಸದಾಗಿ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದಾರೆ.

ಸಂವಹನಕ್ಕಾಗಿ ಬೇರೆ ಭಾಷೆಗಳನ್ನು ಕಲಿಯುವುದು ತಪ್ಪಲ್ಲವಾದರೂ, ಅಂತಹ ಪ್ರಯತ್ನಗಳು ಮಾತೃಭಾಷೆಯನ್ನೇ ಮೂಲೆಗುಂಪಾಗಿಸುವುದಕ್ಕೆ ಪ್ರಾಧಿಕಾರ ಸಾಕ್ಷಿಯಾಗುವುದಿಲ್ಲ ಎಂದು ಬಿಳಿಮಲೆ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾಡಿನ ಅಭಿವೃದ್ಧಿಯು ಶಿಕ್ಷಣ ವ್ಯವಸ್ಥೆಯನ್ನು ಅವಲಂಬಿಸಿದೆ ಎಂದು ಪ್ರತಿಪಾದಿಸಿರುವ ಅವರು, ವಿಶ್ವದಾದ್ಯಂತ ನಡೆಸಿರುವ ಅಧ್ಯಯನಗಳು ಪ್ರಾಥಮಿಕ ಹಂತದಲ್ಲಿ ತಾಯ್ನುಡಿಯನ್ನು ಪ್ರಭುತ್ವದ ಮಟ್ಟಕ್ಕೆ ಕಲಿಸುವುದೇ ಜ್ಞಾನಾರ್ಜನೆಗೆ ಬುನಾದಿ ಎಂದು ನಿರೂಪಿಸಿವೆ ಎಂದಿದ್ದಾರೆ. ತಾಯ್ನುಡಿಯು ಅನನ್ಯತೆ, ಸಾಂಸ್ಕೃತಿಕ ಗುರುತು, ಸ್ವಾಭಿಮಾನ, ಸ್ವಂತಿಕೆ, ಸೃಜನಶೀಲತೆ ಮತ್ತು ಸ್ವತಂತ್ರ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯವನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಬೆಳೆಸಲು ಸಹಕಾರಿಯಾಗುತ್ತದೆ ಎಂಬುದನ್ನು ಹಲವು ಸಂಶೋಧನೆಗಳು ಪ್ರಾಯೋಗಿಕವಾಗಿ ನಿರೂಪಿಸಿವೆ ಎಂದೂ ಅವರು ಹೇಳಿದ್ದಾರೆ.

ಶಿಕ್ಷಣ ಹಕ್ಕು ಕಾಯ್ದೆ ತಿದ್ದುಪಡಿ ಮತ್ತು ಕನ್ನಡ ಶಾಲೆಗಳ ಸಬಲೀಕರಣಕ್ಕೆ ಆಗ್ರಹ

2013-18ರಲ್ಲಿ ಸರ್ಕಾರವು ಮಕ್ಕಳ ಹಕ್ಕು ಕಾಯ್ದೆಯ ಪ್ರಕರಣ 29 (ಎಫ್)ಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಿ ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳುಹಿಸಿದ್ದು, ಅದರಂತೆ ಕನಿಷ್ಠ 8ನೇ ತರಗತಿವರೆಗೆ ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿರಬೇಕಾಗುತ್ತದೆ. ಈ ಮಸೂದೆಗೆ ರಾಷ್ಟ್ರಪತಿಯವರಿಂದ ಅಂಗೀಕಾರ ಪಡೆಯುವ ಕೆಲಸದ ಅನುಪಾಲನೆಗೆ ಹೆಚ್ಚಿನ ಸ್ಪಂದನೆ ಅಗತ್ಯವಿದೆ ಎಂದು ಬಿಳಿಮಲೆ ಹೇಳಿದ್ದಾರೆ. ಈ ಆಶಯಕ್ಕೆ ವಿರುದ್ಧವಾಗಿ ಸರ್ಕಾರವು ಆಂಗ್ಲ ಭಾಷಾ ಶಾಲೆಗಳನ್ನು ತೆರೆಯುವ ತೀರ್ಮಾನ ತೆಗೆದುಕೊಂಡಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2017ರಲ್ಲಿ ಸಲ್ಲಿಸಿರುವ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿರುವ ಬಿಳಿಮಲೆ, ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸಲು ರೂಪಿಸಿರುವ ಕನ್ನಡ ಕಲಿಕಾ ಅಧಿನಿಯಮ 2015 ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಕನ್ನಡ ಶಾಲೆಗಳ ಸಬಲೀಕರಣಕ್ಕಾಗಿ ಒಂದು ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಿ ಸರ್ಕಾರವು ಈ ಶಾಲೆಗಳ ಬೆಂಬಲಕ್ಕೆ ನಿಲ್ಲಬೇಕೆಂದು ಅವರು ಹೇಳಿದ್ದಾರೆ.

ದ್ವಿಭಾಷಾ ನೀತಿ ಮತ್ತು ಕನ್ನಡಪರ ಹೋರಾಟಗಾರರಿಗೆ ಬೆಂಬಲ

ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜ್ಯದಲ್ಲಿ ದ್ವಿಭಾಷಾ ನೀತಿಯ ಅವಶ್ಯಕತೆಯನ್ನು ಪ್ರತಿಪಾದಿಸಿದ್ದು, ತನ್ನ ನಿರ್ಧಾರವನ್ನು ಎಲ್ಲ ವೇದಿಕೆಗಳಲ್ಲಿ ಸ್ಪಷ್ಟಪಡಿಸಿದೆ ಎಂದು ಬಿಳಿಮಲೆ ತಿಳಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಶಿಕ್ಷಣ ನೀತಿ ನಿರೂಪಣಾ ಪ್ರಕ್ರಿಯೆಯಲ್ಲಿಯೂ ಪ್ರಾಧಿಕಾರವು ಇದೇ ಸಲಹೆಯನ್ನು ನೀಡಿದ್ದು, ಜುಲೈ ಮಾಸಾಂತ್ಯಕ್ಕೆ ಸಲ್ಲಿಕೆಯಾಗುವ ಶಿಕ್ಷಣ ನೀತಿಯ ವರದಿಯನ್ನು ಕಾಯುತ್ತಿದ್ದೇವೆ ಎಂದರು.

ವರದಿಯ ಸಂಪೂರ್ಣ ಅಧ್ಯಯನವನ್ನು ನಡೆಸಿ ರಾಜ್ಯದಲ್ಲಿ ದ್ವಿಭಾಷಾ ನೀತಿಯ ಅನುಷ್ಠಾನಕ್ಕೆ ಸಾರ್ವಜನಿಕ ಒಮ್ಮತವನ್ನು ಮೂಡಿಸುವಲ್ಲಿ ಪ್ರಾಧಿಕಾರವು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿದೆ ಎಂದಿರುವ ಬಿಳಿಮಲೆ, ಕನ್ನಡಪರ ಸಂಘಟನೆಗಳು ಈ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕನ್ನಡಪರ ಹೋರಾಟಗಾರರ ಬೆಂಬಲಕ್ಕೆ ಎಂದಿಗೂ ನಿಲ್ಲುತ್ತದೆ ಎಂದು ಭರವಸೆ ನೀಡಿದ್ದಾರೆ. 

Tags:    

Similar News