ಪ್ರಿ-ಸ್ಕೂಲ್ ಪ್ರವೇಶಕ್ಕೆ ವಯೋಮಿತಿ ನಿಗದಿಪಡಿಸಿದ ಶಿಕ್ಷಣ ಇಲಾಖೆ; ಈ ವರ್ಷ 1ನೇ ತರಗತಿಗೆ ಐದೂವರೆ ವರ್ಷದವರಿಗೂ ಅವಕಾಶ

ಪ್ರಿ ಸ್ಕೂಲ್ ಗೆ ಇದೇ ರೀತಿ ಮೂರು ವರುಷಕ್ಕೆ ಎಲ್ ಕೆ ಜಿ ಸೇರಿಸುತ್ತಿರುವ ಸಾಕಷ್ಟು ದೂರುಗಳು ಶಿಕ್ಷಣ ಇಲಾಖೆಗೆ ಬರುತ್ತಿವೆ. ಈ ಕಾರಣಕ್ಕೆ 1ನೇ ತರಗತಿ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರು ವರುಷ ಇರಬೇಕು.;

Update: 2025-05-14 06:07 GMT

ಶಿಕ್ಷಣ ಇಲಾಖೆ ಪ್ರಿ ಸ್ಕೂಲ್​ಗೆ ವಯೋಮಿತಿ ನಿಗದಿ ಮಾಡಲಾಗಿದೆ.

ರಾಜ್ಯd ಶಿಕ್ಷಣ ಇಲಾಖೆಯು ಮಕ್ಕಳನ್ನು ಪ್ರಿ-ಸ್ಕೂಲ್‌ಗೆ ಸೇರಿಸಲು ನಿರ್ದಿಷ್ಟ ವಯೋಮಿತಿಯನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಈ ಹೊಸ ಸುತ್ತೋಲೆಯ ಪ್ರಕಾರ, ಎಲ್‌ಕೆಜಿ (LKG)ಗೆ ಸೇರಲು ಕನಿಷ್ಠ 4 ವರ್ಷ ಮತ್ತು ಯುಕೆಜಿ (UKG)ಗೆ ಸೇರಲು ಕನಿಷ್ಠ 5 ವರ್ಷ ವಯಸ್ಸಾಗಿರಬೇಕು.

ಆದಾಗ್ಯೂ, ಈ ಬಾರಿ, ಅಂದರೆ 2025-26 ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ, ಸುಮಾರು ಆರು ಲಕ್ಷ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು, ಐದೂವರೆ ವರ್ಷ ವಯಸ್ಸಿನ ಮಕ್ಕಳಿಗೂ 1ನೇ ತರಗತಿಗೆ ದಾಖಲಾಗಲು ಅವಕಾಶ ನೀಡಲಾಗಿದೆ. ಈ ನಿರ್ಧಾರವು ಈ ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಇದನ್ನು ಮುಂದಿನ ವರ್ಷಗಳಲ್ಲಿ ರೂಢಿ ಮಾಡಿಕೊಳ್ಳಬಾರದೆಂದು ಇಲಾಖೆ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲು ಕಡ್ಡಾಯ ವಯೋಮಿತಿ ಆರು ವರ್ಷಗಳಾಗಿತ್ತು. ಆದರೆ, ಆರು ಲಕ್ಷ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಈ ವರ್ಷ ಐದೂವರೆ ವರ್ಷಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ, ಪ್ರಿ-ಸ್ಕೂಲ್‌ಗಳಲ್ಲೂ ಇದೇ ರೀತಿ ಕೇವಲ ಮೂರು ವರ್ಷ ವಯಸ್ಸಿನ ಮಕ್ಕಳನ್ನು ಎಲ್‌ಕೆಜಿಗೆ ಸೇರಿಸಿಕೊಳ್ಳುತ್ತಿರುವ ಬಗ್ಗೆ ಶಿಕ್ಷಣ ಇಲಾಖೆಗೆ ಹಲವಾರು ದೂರುಗಳು ಬಂದಿವೆ.

ಈ ಹಿನ್ನೆಲೆಯಲ್ಲಿ, 1ನೇ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಆರು ವರ್ಷ ವಯಸ್ಸಾಗಿರಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಯಾವುದೇ ವಯೋಮಿತಿ ಸಡಿಲಿಕೆ ಇರುವುದಿಲ್ಲ. ಅಲ್ಲದೆ, ಪ್ರಿ-ಸ್ಕೂಲ್‌ಗಳಿಗೆ ನಿಗದಿಪಡಿಸಲಾಗಿರುವ ವಯೋಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಶಿಕ್ಷಣ ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

Tags:    

Similar News