ಪಠ್ಯಪುಸ್ತಕ ವಿವಾದ | ʻವೀರಶೈವʼ ಪದ ಕೈಬಿಟ್ಟ ಸರ್ಕಾರ: ಜೋಶಿ, ಬೊಮ್ಮಾಯಿ ಖಂಡನೆ
ರಾಜ್ಯ ಸರ್ಕಾರವು ನೂತನವಾಗಿ ಪರಿಷ್ಕರಿಸಿರುವ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ʻವಿಶ್ವಗುರು ಬಸವಣ್ಣನವರು-ಸಾಂಸ್ಕೃತಿಕ ನಾಯಕʼ ಎಂಬ ಪಾಠದಲ್ಲಿ 'ವೀರಶೈವ' ಎಂಬ ಪದವನ್ನು ತೆಗೆದು ಹಾಕಲಾಗಿದೆ ಎಂದು ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅದರ ಬೆನ್ನಲ್ಲೇ ಇದೀಗ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಪಠ್ಯಪುಸ್ತಕದಲ್ಲಿ ವೀರಶೈವ ಪದ ತೆಗೆದಿರುವ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ ನಡೆಸಿದ್ದು, ʻʻಸಿದ್ದರಾಮಯ್ಯ ಸರ್ಕಾರ ಮತ್ತೆ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಈ ಮೊದಲು ಪಠ್ಯದಲ್ಲಿ ವೀರಶೈವ ಲಿಂಗಾಯತ ಎಂದು ಇತ್ತು. ಈಗ ಪಠ್ಯದಿಂದ ವೀರಶೈವ ಪದ ತೆಗೆದಿದ್ದಾರೆ. ಅನಗತ್ಯವಾಗಿ ಕಿಚ್ಚು ಹಚ್ಚುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆʼʼ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದು, ʻʻ9ನೇ ತರಗತಿ ಪಠ್ಯದಲ್ಲಿ ವೀರಶೈವ ಪದ ತೆಗೆಯಲಾಗಿದೆ ಎನ್ನುತ್ತಿದ್ದಾರೆ. ನಾನು ಗಮನಿಸಿಲ್ಲ, ಆ ರೀತಿ ಆಗಿದ್ದರೆ ಸರಿಪಡಿಸಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ" ಎಂದರು.
ಈ ಸಂಬಂಧ ಅಖಿಲ ಭಾರತ ವೀರಶೈವ ಶಿವಾಚಾರ್ಯರ ಸಂಸ್ಥೆ ಪರವಾಗಿ ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠದ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೂಡಲೇ ತಪ್ಪುಗಳನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಸ್ವಾಮೀಜಿ ಬರೆದ ಪತ್ರದಲ್ಲಿ, ʻʻಈ ರೀತಿ ಅವೈಜ್ಞಾನಿಕ, ಇತಿಹಾಸಕ್ಕೆ ಮತ್ತು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಒಂದು ಪರಂಪರೆಗೆ ಧಕ್ಕೆಯಾಗುವ ವಿಚಾರಗಳನ್ನು ವಿದ್ಯಾರ್ಥಿಗಳ ತಲೆಯಲ್ಲಿ ತುಂಬಬಾರದು. ನೈಜ ವಿಚಾರಗಳನ್ನು ನೀಡುವ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಬೇಕೆಂದು ಕೋರುತ್ತೇವೆ. ಒಂದು ವೇಳೆ ಪಠ್ಯದಲ್ಲಿನ ದೋಷಗಳನ್ನು ಸರಿಪಡಿಸದಿದ್ದರೆ ಕಾನೂನಿನ ಮೊರೆ ಹೋಗಬೇಕಾಗುತ್ತದೆʼʼ ಎಂದು ಎಚ್ಚರಿಕೆ ನೀಡಿದ್ದಾರೆ.