ತೆರಿಗೆ ಅನ್ಯಾಯ| ಮುಕ್ತ ಚರ್ಚೆಗೆ ಕೇಂದ್ರ ಸಚಿವರಿಗೆ ಆಹ್ವಾನ: ನಾವು ಸಿದ್ಧ ಎಂದ ಕೃಷ್ಣ ಬೈರೇಗೌಡ
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಚಿಂತಕರು, ಆರ್ಥಿಕ ವಿಶ್ಲೇಷಕರು ಮತ್ತು ನಾಗರಿಕ ಸಮಾಜದ ಪ್ರಮುಖರು ಹಣಕಾಸು ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಮುಕ್ತ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ʼನನ್ನ ತೆರಿಗೆ ಹಕ್ಕಿಗಾಗಿ ಲೈವ್ʼ ಎಂಬ ಘೋಷಣೆಯೊಂದಿಗೆ ಶುಕ್ರವಾರ ಬೆಳಿಗ್ಗೆಯಿಂದಲೇ ಈ ವಿಷಯ ಸಾಕಷ್ಟು ಸದ್ದು ಮಾಡುತ್ತಿದೆ.;
ಆರ್ಥಿಕ ಅನುದಾನ ಹಂಚಿಕೆ ವಿಷಯವೂ ಸೇರಿದಂತೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಆಗಿರುವ ಅನ್ಯಾಯವನ್ನು ಕುರಿತು ಚರ್ಚಿಸಲು ಸಿದ್ಧ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ಸ್ ಮೀಟ್ನಲ್ಲಿ ಭಾಗವಹಿಸಲು ಏ.6ರ ಶನಿವಾರ ಬೆಂಗಳೂರಿಗೆ ಆಗಮಿಸುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಉದ್ದೇಶಿಸಿ ಸಚಿವರು ಈ ಹೇಳಿಕೆ ನೀಡಿದ್ದಾರೆ.
“ರಾಜ್ಯದ ಪಾಲಿನ ಆರ್ಥಿಕ ಅನುದಾನ ಹಂಚಿಕೆ ಮತ್ತು ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಕುರಿತು ಚರ್ಚಿಸಲು ನಾಗರಿಕ ಸಮಾಜ ನೀಡಿರುವ ಆಹ್ವಾನವನ್ನು ನಾನು ಸ್ವೀಕರಿಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು, ಕೇಂದ್ರದ ಹಣಕಾಸು ಸಚಿವರನ್ನು ಈ ಮುಕ್ತ ಚರ್ಚೆಗೆ ಆಹ್ವಾನಿಸಿದ್ದೇವೆ. ಬೆಂಗಳೂರಿಗೆ ಬರುವ ಅವರು ಈ ಚರ್ಚೆಯಲ್ಲೂ ಭಾಗವಹಿಸುತ್ತಾರೆ ಎಂಬ ವಿಶ್ವಾದಲ್ಲಿದ್ದೇವೆ” ಎಂದು ಕೃಷ್ಣ ಬೈರೇಗೌಡ ಟ್ವೀಟ್ ಮಾಡಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವು ಚಿಂತಕರು, ಆರ್ಥಿಕ ವಿಶ್ಲೇಷಕರು ಮತ್ತು ನಾಗರಿಕ ಸಮಾಜದ ಪ್ರಮುಖರು ಹಣಕಾಸು ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಕುರಿತು ಮುಕ್ತ ಚರ್ಚೆಗೆ ಬರುವಂತೆ ಆಹ್ವಾನ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ʼನನ್ನ ತೆರಿಗೆ ಹಕ್ಕಿಗಾಗಿ ಲೈವ್ʼ ಎಂಬ ಘೋಷಣೆಯೊಂದಿಗೆ ಶುಕ್ರವಾರ ಬೆಳಿಗ್ಗೆಯಿಂದಲೇ ಈ ವಿಷಯ ಸಾಕಷ್ಟು ಸದ್ದು ಮಾಡುತ್ತಿದೆ.
ಚುನಾವಣಾ ಕಣದಲ್ಲಿ ಕೇಂದ್ರ ಬಿಜೆಪಿ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಕುರಿತ ಚರ್ಚೆ ಸಾಕಷ್ಟು ಸದ್ದು ಮಾಡುತ್ತಿದೆ. ಬಿಜೆಪಿ ನಾಯಕರು ಮತ್ತು ರಾಜ್ಯ ಕಾಂಗ್ರೆಸ್ ನಾಯಕರ ನಡುವೆ ನಿತ್ಯ ಈ ವಿಷಯ ಕಾವೇರಿದ ವಾದ- ವಾಗ್ವಾದಕ್ಕೆ ಕಾರಣವಾಗಿದೆ. ಈ ನಡುವೆ, ನಾಗರಿಕ ಸಮಾಜದ ಆಹ್ವಾನ, ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಬಿಜೆಪಿ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.