ಜುಲೈ 1 ರಿಂದ ಆಧಾರ್‌ ಆಧರಿತ ತತ್ಕಾಲ್ ಬುಕಿಂಗ್ ಕಡ್ಡಾಯ; ರೈಲ್ವೆ ಸಚಿವಾಲಯ

ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧಾರಿತ OTP ದೃಢೀಕರಣವನ್ನು ಕಡ್ಡಾಯಗೊಳಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.;

Update: 2025-06-11 14:13 GMT

ಭಾರತೀಯ ರೈಲ್ವೇ

ತತ್ಕಾಲ್ ಟಿಕೆಟ್ ಬುಕಿಂಗ್‌ನಲ್ಲಿ ಆಗುತ್ತಿರುವ ವಂಚನೆ ತಡೆಯಲು ಭಾರತೀಯ ರೈಲ್ವೆ ಇ-ಆಧಾರ್ ದೃಢೀಕರಣ ಆಧರಿತ ಬುಕಿಂಗ್‌ ಕಡ್ಡಾಯಗೊಳಿಸಿದೆ. ಈ ನಿಯಮವು 2025 ಜುಲೈ 1ರಿಂದ ಜಾರಿಗೆ ಬರಲಿದೆ. ಜುಲೈ 15 ರಿಂದ ಪ್ರಯಾಣಕ್ಕಾಗಿ ತತ್ಕಾಲ್ ಬುಕಿಂಗ್‌ಗೆ ಇ-ಆಧಾರ್ OTP ಕಡ್ಡಾಯವಾಗಿರಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ. 

ರೈಲ್ವೆ ಇಲಾಖೆ ಏನು ಹೇಳಿದೆ?

ತತ್ಕಾಲ್ ಟಿಕೆಟ್ ಯೋಜನೆಯಲ್ಲಿ ಪಾರದರ್ಶಕತೆ, ನ್ಯಾಯಸಮ್ಮತತೆ ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನ ಒದಗಿಸುವ ಉದ್ದೇಶದಿಂದ ಭಾರತೀಯ ರೈಲ್ವೆಯು ತತ್ಕಾಲ್ ಬುಕಿಂಗ್ ಪ್ರಕ್ರಿಯೆಗೆ ನಿಯಮ ಬದಲಾವಣೆ ಮಾಡಿದೆ.  ಈ ಹೊಸ ನಿಯಮವು 2025 ಜುಲೈ 1 ರಿಂದ ಜಾರಿಗೆ ಬರಲಿದೆ.

ತತ್ಕಾಲ್ ಯೋಜನೆಯಡಿ ಬುಕಿಂಗ್ ಪ್ರಕ್ರಿಯೆಯನ್ನು ಹೆಚ್ಚು ಸುರಕ್ಷಿತ ಮತ್ತು ಪಾರದರ್ಶಕವಾಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೌರಭ್ ಕಟಾರಿಯಾ ತಿಳಿಸಿದ್ದಾರೆ. 

OTP ದೃಢೀಕರಣ

ಜುಲೈ 15 ರಿಂದ ತತ್ಕಾಲ್ ಬುಕಿಂಗ್‌ಗಳಿಗೆ ಆಧಾರ್ ಆಧರಿತ ಒಟಿಪಿ ದೃಢೀಕರಣ ಕಡ್ಡಾಯ ಮಾಡಲಾಗಿದೆ. " ಕಂಪ್ಯೂಟರೀಕೃತ ಒಟಿಪಿ ದೃಢೀಕರಣದ ನಂತರವೇ ಭಾರತೀಯ ರೈಲ್ವೆ/ ಅಧಿಕೃತ ಏಜೆಂಟ್‌ಗಳ ಗಣಕೀಕೃತ PRS (ಪ್ರಯಾಣಿಕ ಮೀಸಲಾತಿ ವ್ಯವಸ್ಥೆ) ಕೌಂಟರ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ಗಳು ಲಭ್ಯವಿರುತ್ತವೆ. ಇದನ್ನು ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸುವ ಮೊಬೈಲ್ ಸಂಖ್ಯೆ ಮೂಲಕ ಕಳುಹಿಸಲಾಗುತ್ತದೆ. ಇದು ಜುಲೈ 15 ರಿಂದ ಜಾರಿಗೆ ಬರಲಿದೆ" ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಟಿಕೆಟಿಂಗ್ ಏಜೆಂಟ್‌ಗಳ ಮೇಲೆ ನಿರ್ಬಂಧ 

ಭಾರತೀಯ ರೈಲ್ವೆಯ ಅಧಿಕೃತ ಟಿಕೆಟಿಂಗ್ ಏಜೆಂಟ್‌ಗಳ ಮೇಲೆ ತತ್ಕಾಲ್ ಟಿಕೆಟ್‌ ಬುಕಿಂಗ್‌ಗೆ ಹಲವು ನಿರ್ಬಂಧಗಳನ್ನು  ವಿಧಿಸಲಾಗಿದೆ. ತತ್ಕಾಲ್ ಬುಕಿಂಗ್ ವಿಂಡೋದ ಮೊದಲ 30 ನಿಮಿಷಗಳ ಅವಧಿಯಲ್ಲಿ ಆರಂಭಿಕ ದಿನದ ತತ್ಕಾಲ್ ಟಿಕೆಟ್‌ ಬುಕ್ ಮಾಡಲು ಅನುಮತಿ ಇರುವುದಿಲ್ಲ.

ಗಣಕೀಕೃತ PRS ಕೌಂಟರ್‌ಗಳು/ಭಾರತೀಯ ರೈಲ್ವೆಯ ಅಧಿಕೃತ ಏಜೆಂಟ್‌ಗಳ ಮೂಲಕ ಬುಕಿಂಗ್ ಮಾಡಲು ತತ್ಕಾಲ್ ಟಿಕೆಟ್‌ ಲಭ್ಯವಿರುತ್ತದೆ. ಸಿಸ್ಟಮ್ ಮೂಲಕ ಬಳಕೆದಾರರು ಬುಕಿಂಗ್ ಸಮಯದಲ್ಲಿ ಒದಗಿಸಿದ ಮೊಬೈಲ್ ಸಂಖ್ಯೆಗೆ ಬರುವ OTP ದೃಢೀಕರಿಸಿದ ನಂತರವೇ ಇದನ್ನು ಕಳುಹಿಸಲಾಗುತ್ತದೆ. ಇದು ಜುಲೈ 15ರಿಂದ ಕಾರ್ಯಗತವಾಗಲಿದೆ.  

Tags:    

Similar News