ಟಾಟಾ-ಏರ್‌ಬಸ್ ಒಪ್ಪಂದ: ಕೋಲಾರದ ವೇಮಗಲ್‌ನಲ್ಲಿ ಸ್ಥಾಪನೆಯಾಗಲಿದೆ H125 ಹೆಲಿಕಾಪ್ಟರ್ ಜೋಡಣಾ ಘಟಕ
ಈ ಘಟಕದಲ್ಲಿ ನಿರ್ಮಾಣವಾಗುವ ಎಚ್125 ಹೆಲಿಕಾಪ್ಟರ್‌ಗಳು ಕೇವಲ ನಾಗರಿಕ ಬಳಕೆಗೆ ಸೀಮಿತವಾಗಿಲ್ಲ. ತುರ್ತು ವೈದ್ಯಕೀಯ ಸೇವೆಗಳು (ಏರ್ ಆಂಬುಲೆನ್ಸ್), ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ ಮತ್ತು ಕಾನೂನು ಪಾಲನೆಯಂತಹ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಾಧ್ಯವಿದೆ.
ಭಾರತದ ವಾಯುಯಾನ ಕ್ಷೇತ್ರದಲ್ಲಿ ಐತಿಹಾಸಿಕ ಮೈಲಿಗಲ್ಲೊಂದು ಸ್ಥಾಪನೆಯಾಗಿದ್ದು, ಏರ್‌ಬಸ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಸಹಯೋಗದಲ್ಲಿ ದೇಶದ ಮೊದಲ ಖಾಸಗಿ ವಲಯದ ಹೆಲಿಕಾಪ್ಟರ್ ಅಂತಿಮ ಜೋಡಣಾ ಘಟಕವು ಕೋಲಾರ ಜಿಲ್ಲೆಯ ವೇಮಗಲ್‌ನಲ್ಲಿ ಸ್ಥಾಪನೆಯಾಗಲಿದೆ. ಈ ಘಟಕದಲ್ಲಿ ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಏರ್‌ಬಸ್ ಎಚ್125 ಹೆಲಿಕಾಪ್ಟರ್‌ಗಳನ್ನು ತಯಾರಾಗಲಿದೆ.
ಈ ಮಹತ್ವದ ಯೋಜನೆಯು 'ಮೇಡ್ ಇನ್ ಇಂಡಿಯಾ' ಉಪಕ್ರಮಕ್ಕೆ ದೊಡ್ಡ ಉತ್ತೇಜನ ನೀಡಲಿದ್ದು, ದಕ್ಷಿಣ ಏಷ್ಯಾದ ಹೆಲಿಕಾಪ್ಟರ್ ಮಾರುಕಟ್ಟೆಯಲ್ಲಿ ಹೊಸ ಭವಿಷ್ಯಗಳನ್ನು ತೆರೆಯಲಿವೆ. ಮೊದಲ 'ಮೇಡ್ ಇನ್ ಇಂಡಿಯಾ' ಎಚ್125 ಹೆಲಿಕಾಪ್ಟರ್ 2027ರ ಆರಂಭದಲ್ಲಿ ಹಾರಾಟಕ್ಕೆ ಸಜ್ಜುಗೊಳ್ಳಲಿದೆ.
ನಾಗರಿಕ ಮತ್ತು ಸೇನಾ ಅಗತ್ಯಗಳಿಗೆ ಪೂರಕ
ಈ ಘಟಕದಲ್ಲಿ ನಿರ್ಮಾಣವಾಗುವ ಎಚ್125 ಹೆಲಿಕಾಪ್ಟರ್‌ಗಳು ಕೇವಲ ನಾಗರಿಕ ಬಳಕೆಗೆ ಸೀಮಿತವಾಗಿಲ್ಲ. ತುರ್ತು ವೈದ್ಯಕೀಯ ಸೇವೆಗಳು (ಏರ್ ಆಂಬುಲೆನ್ಸ್), ವಿಪತ್ತು ನಿರ್ವಹಣೆ, ಪ್ರವಾಸೋದ್ಯಮ ಮತ್ತು ಕಾನೂನು ಪಾಲನೆಯಂತಹ ಕ್ಷೇತ್ರಗಳಲ್ಲಿ ಬಳಸಿಕೊಳ್ಳುವುದಕ್ಕೆ ಸಾಧ್ಯವಿದೆ. ಇದರ ಜೊತೆಗೆ, ಭಾರತೀಯ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸಲು, ವಿಶೇಷವಾಗಿ ಹಿಮಾಲಯದಂತಹ ಅತಿ ಎತ್ತರದ ಪ್ರದೇಶಗಳಲ್ಲಿ ಕಾರ್ಯಾಚರಿಸಲು, ಎಚ್125M ಎಂಬ ಮಿಲಿಟರಿ ಆವೃತ್ತಿಯನ್ನೂ ಸಹ ಇಲ್ಲಿಯೇ ತಯಾರಿಸಲಾಗುತ್ತದೆ. ಇದು ಭಾರತದ 'ಚೀತಾ' ಮತ್ತು 'ಚೇತಕ್' ಹೆಲಿಕಾಪ್ಟರ್‌ಗಳಿಗೆ ಸೂಕ್ತ ಉತ್ತರಾಧಿಕಾರಿಯಾಗಲಿದೆ.
ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ
ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಜುರ್ಗೆನ್ ವೆಸ್ಟ್‌ಮಿಯರ್ ಈ ಕುರಿತು ಮಾತನಾಡಿ, "ಭಾರತವು ಹೆಲಿಕಾಪ್ಟರ್‌ಗಳಿಗೆ ಅತ್ಯಂತ ಸೂಕ್ತವಾದ ದೇಶ. 'ಮೇಡ್ ಇಂಡಿಯಾ ಇಂಡಿಯಾ' ಹೆಲಿಕಾಪ್ಟರ್ ಈ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅಗತ್ಯ ಸಾಧನವಾಗಿ ಸ್ಥಾನ ಪಡೆಯಲು ಸಹಾಯ ಮಾಡುತ್ತದೆ," ಎಂದು ಹೇಳಿದರು.
ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ನ ಸಿಇಒ ಸುಕರನ್ ಸಿಂಗ್ ಅವರು, "ಹೆಲಿಕಾಪ್ಟರ್‌ಗಳನ್ನು ನಿರ್ಮಿಸುವ ಭಾರತದ ಮೊದಲ ಖಾಸಗಿ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮಗೆ ಹೆಮ್ಮೆಯ ವಿಷಯ. ಇದು ನಮ್ಮ ನಾಗರಿಕ ಮತ್ತು ರಕ್ಷಣಾ ಅಗತ್ಯಗಳನ್ನು ಬಲಪಡಿಸುತ್ತದೆ. ಏರ್‌ಬಸ್‌ನೊಂದಿಗೆ ಇದು ನಮ್ಮ ಎರಡನೇ ಜೋಡಣಾ ಘಟಕವಾಗಿದ್ದು, ನಮ್ಮ ಪಾಲುದಾರಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದೆ," ಎಂದರು.
ಎಚ್125 ಹೆಲಿಕಾಪ್ಟರ್‌ನ ವೈಶಿಷ್ಟ್ಯ
ಎಚ್125, ಏರ್‌ಬಸ್‌ನ 'ಎಕ್ಯುರಿಯಲ್' ಕುಟುಂಬಕ್ಕೆ ಸೇರಿದ, ಜಗತ್ತಿನಾದ್ಯಂತ 4 ಕೋಟಿಗೂ ಹೆಚ್ಚು ಗಂಟೆಗಳ ಕಾಲ ಹಾರಾಟ ನಡೆಸಿರುವ ಅತ್ಯಂತ ಯಶಸ್ವಿ ಹೆಲಿಕಾಪ್ಟರ್ ಆಗಿದೆ. ಇದು ಒಂದೇ ಎಂಜಿನ್ ಹೊಂದಿರುವ, ಬಹುಮುಖ ಬಳಕೆಯ ಹೆಲಿಕಾಪ್ಟರ್ ಆಗಿದ್ದು, ಅತಿ ಎತ್ತರದ ಮತ್ತು ಕಠಿಣ ಪರಿಸರದಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಮೌಂಟ್ ಎವರೆಸ್ಟ್ ಮೇಲೆ ಯಶಸ್ವಿಯಾಗಿ ಇಳಿದ ಏಕೈಕ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.
ಗುಜರಾತ್‌ನ ವಡೋದರಾದಲ್ಲಿ C295 ಸೇನಾ ವಿಮಾನಗಳ ತಯಾರಿಕಾ ಘಟಕದ ನಂತರ, ಭಾರತದಲ್ಲಿ ಟಾಟಾ ಸ್ಥಾಪಿಸುತ್ತಿರುವ ಏರ್‌ಬಸ್‌ನ ಎರಡನೇ ಜೋಡಣಾ ಘಟಕ ಇದಾಗಿದೆ.