ಧರ್ಮಸ್ಥಳ ಪ್ರಕರಣ: ಅಮಿತ್ ಷಾರನ್ನು ಭೇಟಿ ಮಾಡಿ ಎನ್‌ಐಎ ತನಿಖೆಗೆ ಒತ್ತಾಯಿಸಿದ ಸ್ವಾಮೀಜಿಗಳು!
ಧರ್ಮಸ್ಥಳದ ಪ್ರಕರಣವನ್ನು ಅಗತ್ಯ ಬಿದ್ದರೆ ತನಿಖೆಯನ್ನು ಎನ್‌ಐಎಗೆ ವಹಿಸಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.;
ಎನ್‌ಐಎ ತನಿಖೆಗೆ ಒತ್ತಾಯಿಸಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿದ ವಚನಾನಂದ ಸ್ವಾಮೀಜಿ ನೇತೃತ್ವದ ನಿಯೋಗ
ಧರ್ಮಸ್ಥಳ ಪ್ರಕರಣದ ಹಿನ್ನೆಲೆಯಲ್ಲಿ ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ 8 ಮಂದಿ ಸ್ವಾಮೀಜಿಗಳು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಹಸ್ತಾಂತರಿಸಿ ತನಿಖೆ ನಡೆಸುವಂತೆ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮಿತ್ ಷಾ, ಧರ್ಮಸ್ಥಳ ಪ್ರಕರಣ ನನ್ನ ಗಮನದಲ್ಲಿದೆ. ಎಲ್ಲವನ್ನೂ ಗಮನಿಸುತ್ತಿದ್ದೇನೆ. ಅಗತ್ಯ ಬಿದ್ದರೆ ತನಿಖೆಯನ್ನು ಎನ್‌ಐಎಗೆ ವಹಿಸಲಾಗುವುದು ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಧರ್ಮಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಕ್ಷೇತ್ರದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಲು, ರಾಜ್ಯದ ಒಂಬತ್ತು ಪ್ರಮುಖ ಮಠಾಧೀಶರ ನಿಯೋಗವು ಸೆಪ್ಟೆಂಬರ್ 3ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ನಿರ್ಧರಿಸಿತ್ತು.
ಈ ಹಿನ್ನೆಲೆ ಪಂಚಮಸಾಲಿ ಲಿಂಗಾಯತ ಮಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ನೇತೃತ್ವದ ಈ ನಿಯೋಗದಲ್ಲಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಒಟ್ಟು ಎಂಟು ಸ್ವಾಮೀಜಿಗಳು ಭಾಗವಹಿಸಿದ್ದರು.
ಕೇಂದ್ರ ಗೃಹ ಸಚಿವರ ಮುಂದೆ ನಿಯೋಗವು ಮೂರು ಪ್ರಮುಖ ಮನವಿಗಳನ್ನು ಇಡಲು ಸಿದ್ಧತೆ ನಡೆಸಿತ್ತು. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳು ಮತ್ತು ಇತರ ಆರೋಪಗಳ ಕುರಿತು ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಬೇಕು. ಧರ್ಮಸ್ಥಳ ಸೇರಿದಂತೆ ರಾಜ್ಯದ ಪ್ರಮುಖ ಧಾರ್ಮಿಕ ಸಂಸ್ಥೆಗಳ ಘನತೆಗೆ ಧಕ್ಕೆ ತರಲು ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ದೊಡ್ಡ ಮಟ್ಟದ ಹಣಕಾಸಿನ ವ್ಯವಹಾರ ಅಡಗಿದೆ ಎಂಬ ಅನುಮಾನವಿದ್ದು, ಈ ಸಂಚಿನ ಬಗ್ಗೆಯೂ ತನಿಖೆ ನಡೆಸಬೇಕು. ಧಾರ್ಮಿಕ ಕೇಂದ್ರಗಳ ಮೇಲೆ ನಡೆಯುತ್ತಿರುವ ಅಪಪ್ರಚಾರ ತಡೆದು, ಕ್ಷೇತ್ರದ ಪಾವಿತ್ರ್ಯ ರಕ್ಷಿಸಬೇಕು ಎಂದು ಸ್ವಾಮೀಜಿಗಳ ನಿಯೋಗ ಮನವಿ ಮಾಡಲು ಸಿದ್ದತೆ ನಡೆಸಿತ್ತು.