Swamiji Controvarcy | ರಾಜಕೀಯ ಬಣ್ಣ ಪಡೆದ ಸ್ವಾಮೀಜಿ ಹೇಳಿಕೆ; ಕಾಂಗ್ರೆಸ್‌-ಬಿಜೆಪಿ ನಾಯಕರ ಜಟಾಪಟಿ

ಸ್ವಾಮೀಜಿ ವಿರುದ್ಧ ದಾಖಲಾದ ಪ್ರಕರಣವನ್ನೇ ನೆಪವಾಗಿರಿಸಿಕೊಂಡು ಒಂದು ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನಗಳಲ್ಲಿ ರಾಜಕೀಯ ನಾಯಕರು ಮುಳುಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.;

Update: 2024-11-30 11:36 GMT
ಚಂದ್ರಶೇಖರನಾಥ ಸ್ವಾಮೀಜಿ

ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕೆಂದು ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಚಂದ್ರಶೇಖರನಾಥ ಸ್ವಾಮಿ ನೀಡಿದ್ದ ವಿವಾದಾತ್ಮಕ ಹೇಳಿಕೆ ಈಗ ರಾಜಕೀಯ ಬಣ್ಣ ಪಡೆದಿದೆ. ಸ್ವಾಮಿ ವಿರುದ್ಧ ದಾಖಲಾದ ಪ್ರಕರಣವನ್ನೇ ನೆಪವಾಗಿರಿಸಿಕೊಂಡು ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನಗಳಲ್ಲಿ ರಾಜಕೀಯ ನಾಯಕರು ಮುಳುಗಿದ್ದಾರೆ.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾರತೀಯ ಕಿಸಾನ್‌ ಸಂಘ ವಕ್ಫ್‌ ಆಸ್ತಿ ವಿವಾದದ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಚಂದ್ರಶೇಖರನಾಥ ಸ್ವಾಮಿ, "ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಆಗ ಭಾರತೀಯರೆಲ್ಲರೂ ನೆಮ್ಮದಿಯಿಂದ ಇರುತ್ತಾರೆ. ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆ, ಸೈಟ್ ಬರೆದುಕೊಡಿ" ಎಂದು ಹೇಳಿದ್ದರು.

ಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವ ಎಚ್‌.ಸಿ. ಮಹದೇವಪ್ಪ ಸೇರಿ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು.

"ಸಂವಿಧಾನವು ದೇಶದ ಎಲ್ಲ ನಾಗರಿಕರಿಗೆ ಮತದಾನದ ಹಕ್ಕು ನೀಡಿದೆ. ಮತದಾನ ಹಕ್ಕು ಇಲ್ಲದಂತೆ ಮಾಡಿ ಎಂದು ಯಾರಾದರು ಹೇಳಿದರೆ ಅದು ತಪ್ಪು" ಎಂದು ಸಚಿವ ಮಹದೇವಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು.

ಡಿಸಿಎಂ ಡಿ.ಕೆ. ಶಿವಕುಮಾರ್‌ ಕೂಡ "ಸ್ವಾಮೀಜಿಗಳು ರಾಜಕೀಯದಿಂದ ದೂರ ಇರಬೇಕು. ರಾಜಕೀಯದಿಂದ ದೂರ ಇದ್ದರೆ ಬಹಳ ಒಳ್ಳೆಯದು. ಸಂವಿಧಾನ ಎಲ್ಲರಿಗೂ ಮತದಾನದ ಹಕ್ಕು ಕೊಟ್ಟಿದೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆ ಸ್ವಾಮೀಜಿಗಳಿಗೆ ಮನವಿ ಮಾಡುತ್ತೇನೆ" ಎಂದು ಹೇಳಿದ್ದರು.

ವಿವಾದ ತಾರಕಕ್ಕೇರುತ್ತಿದ್ದಂತೆ ಸ್ವಾಮಿ, ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. "ಮುಸ್ಲಿಮರ ಗೌರವಕ್ಕೆ ಧಕ್ಕೆಯಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ. ಬಾಯಿ ತಪ್ಪಿನಿಂದ ಹೇಳಿಕೆ ನೀಡಿದ್ದೇನೆ" ಎಂದು ಸ್ಪಷ್ಟೀಕರಣ ನೀಡಿದ್ದರು.

ಈ ಮಧ್ಯೆ, ಸೈಯದ್ ಅಬ್ಬಾಸ್‌ ಎಂಬುವರು ಸ್ವಾಮಿಯ ಹೇಳಿಕೆ ವಿರುದ್ಧ ಬೆಂಗಳೂರಿನ ಉಪ್ಪಾರ ಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೋಮುಸೌಹಾರ್ದ ಕದಡುವಂತಹ ಹೇಳಿಕೆ ನೀಡಿರುವ ಸ್ವಾಮಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಇದರನ್ವಯ ಪೊಲೀಸರು ಚಂದ್ರಶೇಖರ ನಾಥ ಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದರು.

ಬಿಜೆಪಿ ನಾಯಕರಿಂದ ಸ್ವಾಮಿ ಭೇಟಿ

ಚಂದ್ರಶೇಖರನಾಥ ಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾದ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌, ಶಾಸಕ ಅಶ್ವತ್ಥನಾರಾಯಣ ಸೇರಿದಂತೆ ಹಲವು ಬಿಜೆಪಿ ನಾಯಕರು ಕೆಂಗೇರಿಯ ಸ್ವಾಮಿ ಮಠಕ್ಕೆ ಭೇಟಿ ನೀಡಿ ಅವರಿಗೆ ಧೈರ್ಯ ತುಂಬಿದ್ದರು. ಅಲ್ಲದೇ ಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿರುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

"ಒಕ್ಕಲಿಗ ಸಮುದಾಯದ ಸ್ವಾಮಿ ವಿರುದ್ಧ ಕ್ರಮಕ್ಕೆ ಮುಂದಾದರೆ ಇಡೀ ಸಮುದಾಯ ಸರ್ಕಾರದ ವಿರುದ್ಧ ತಿರುಗಿಬೀಳಲಿದೆ. ಹಿಂದೂ ವಿರೋಧಿ ಸಿಎಂ ಸಿದ್ದರಾಮಯ್ಯ ಅಲ್ಪಸಂಖ್ಯಾತರ ಓಲೈಕೆಗೆ ಮಾಡುತ್ತಿರುವ ಪರಿಣಾಮ ಸ್ವಾಮಿ ವಿರುದ್ಧ ಆ ಸಮುದಾಯದವರು ಪ್ರಕರಣ ದಾಖಲಿಸಿದ್ದಾರೆ" ಎಂದು ಟೀಕಿಸಿದ್ದರು.

ಅಶೋಕ್‌ ವಿರುದ್ಧ ಬೋಸರಾಜು ಕಿಡಿ

"ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಅವರು ಸ್ವಾಮಿ ವಿವಾದದಲ್ಲಿ ಜಾತಿಯನ್ನು ಎಳೆದು ತರುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಜಾತಿ ರಾಜಕಾರಣ ಮಾಡುತ್ತಿದ್ದೆ ಎನ್ನುತ್ತಾರೆ. ದ್ವಂದ್ವ ನೀತಿ ಅನುಸರಿಸುವ ಅಶೋಕ್‌ ಮತ್ತು ಪ್ರತಿಪಕ್ಷ ನಾಯಕರು ನಾಲಾಯಕ್‌" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ವಾಮಿ ಬೆಂಬಲಕ್ಕೆ ಜೆಡಿಎಸ್

ಇನ್ನು ಬಿಜೆಪಿ ಬಳಿಕ ಜೆಡಿಎಸ್‌ ಕೂಡ ಸ್ವಾಮಿಯ ಬೆಂಬಲಕ್ಕೆ ನಿಂತಿದೆ. "ವಿಶ್ವ ಒಕ್ಕಲಿಗ ಮಹಾ ಸಂಸ್ಥಾನ ಮಠದ ಚಂದ್ರಶೇಖರನಾಥ ಸ್ವಾಮಿ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿ ವಿವಾದಕ್ಕೆ ಇತಿಶ್ರೀ ಹಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ ಕಾಂಗ್ರೆಸ್‌ ಸರ್ಕಾರ ದೂರು ದಾಖಲಾಗುವಂತೆ ನೋಡಿಕೊಂಡಿದೆ. ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಯುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ನೀಚ ರಾಜಕಾರಣ ಮಾಡುತ್ತಿದೆ" ಎಂದು ಆರೋಪಿಸಿದೆ.

"ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಚಿವರು ಕುಲದ್ರೋಹಿಗಳು. ಸಮಾಜ ಘಾತುಕ ಶಕ್ತಿಗಳ ವಿರುದ್ಧ ಪ್ರಕರಣ ಹಿಂಪಡೆಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಒಬ್ಬ ಸಜ್ಜನಿಕೆಯ ಸಂತರೊಬ್ಬರ ಬಾಯ್ತಪ್ಪಿನ ಮಾತು ಕ್ರಿಮಿನಲ್ ಅಪರಾಧದಂತೆ ಕಂಡಿರುವುದು ವಿಪರ್ಯಾಸ. ಕಾಂಗ್ರೆಸ್‌ ತನ್ನ ಹಗರಣಗಳನ್ನು ಮುಚ್ಚಿಕೊಳ್ಳಲು ಸಣ್ಣ ಪ್ರಕರಣಗಳನ್ನೂ ದೊಡ್ಡ ವಿವಾದವನ್ನಾಗಿಸುತ್ತಿದೆ. ಶ್ರೀಗಳಿಗೆ ನೋಟೀಸ್ ನೀಡಿ ವಿಚಾರಣೆಗೆ ಕರೆದಿರುವ ಕ್ರಮ ಖಂಡನೀಯ" ಎಂದು ಟೀಕಿಸಿದೆ.

ಸ್ವಾಮಿ ಹೇಳಿಕೆ ಸ್ವಾಗತಿಸಿದ ಯತ್ನಾಳ

ಮುಸ್ಲಿಮರ ಕುರಿತು ಚಂದ್ರಶೇಖರನಾಥ ಸ್ವಾಮಿ ನೀಡಿರುವ ವಿವಾದಾತ್ಮಕ ಹೇಳಿಕೆ ಸರಿಯಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

"ಹಿಂದೂಗಳ ಪರವಾಗಿ ಮಾತನಾಡಿದ ಸ್ವಾಮಿ ಅವರನ್ನು ನಾನು ಬೆಂಬಲಿಸುತ್ತೇನೆ. ಸ್ವಾಮಿ ವಿರುದ್ಧ ದೂರು ದಾಖಲಾಗಿರುವುದನ್ನು ಒಕ್ಕಲಿಗ ಸಮಾಜ ಪ್ರಶ್ನೆ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.

Tags:    

Similar News