ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಸರ್ಕಾರದಿಂದ ಸಮೀಕ್ಷೆ: ಆರ್.ಅಶೋಕ ಆರೋಪ
ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲೆಡೆ ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರ ನಡೆಸುವ ಸಮೀಕ್ಷೆಗೆ ಬೆಲೆ ಇಲ್ಲ. ಜಾತಿಗಳ ನಡುವೆ ಕಂದಕ ನಿರ್ಮಿಸಿ ರಾಜಕೀಯ ಲಾಭ ಪಡೆಯಲು ಸಿಎಂ ಸಿದ್ದರಾಮಯ್ಯ ಹುನ್ನಾರ ನಡೆಸಿದ್ದಾರೆ.;
ಜಾತಿಗಳ ನಡುವೆ ಕಂದಕ ಸೃಷ್ಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಗಣತಿ ನಡೆಸಲು ಸಿದ್ದತೆ ನಡೆಸಿದ್ದಾರೆ. ಇದರಿಂದ ಹಿಂದಿನ ಗಣತಿ ಬೋಗಸ್ ಎಂಬುದು ಸ್ಪಷ್ಟವಾಗಿದೆ ಎಂದು ಪ್ರತಿ ಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕಾಟಾಚಾರಕ್ಕೆ ಪರಿಶಿಷ್ಟ ಜಾತಿ ಒಳಮೀಸಲು ಸಮೀಕ್ಷೆ ಮಾಡಿದೆ. ಈ ಹಿಂದಿನ ಜಾತಿ ಗಣತಿ ಬಿಡುಗಡೆಗೆ ಹತ್ತು ವರ್ಷವಾಗಿದೆ. ಆದರೆ ಈಗ ಮಾಡಿರುವ ಒಳಮೀಸಲು ಸಮೀಕ್ಷೆ ಕೇವಲ 15 ದಿನಗಳಲ್ಲಿ ಮುಗಿದಿದೆ. ಕೇಂದ್ರ ಸರ್ಕಾರ ನಡೆಸುವ ಸಮೀಕ್ಷೆಗೆ ಎಲ್ಲೆಡೆ ಮಾನ್ಯತೆ ಇದೆ. ಆದರೆ ರಾಜ್ಯ ಸರ್ಕಾರ ಮಾಡುವ ಸಮೀಕ್ಷೆಗೆ ಬೆಲೆ ಇಲ್ಲ. ಜಾತಿಗಳ ನಡುವೆ ಕಂದಕ ನಿರ್ಮಿಸಿ ರಾಜಕೀಯ ಲಾಭ ಪಡೆಯಲು ಸಿಎಂ ಸಿದ್ದರಾಮಯ್ಯ ಹುನ್ನಾರ ನಡೆಸಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರ ಮರಳಿ ಜಾತಿ ಗಣತಿ ಮಾಡಲಿದೆ ಎಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ. ಇದರಿಂದಾಗಿ ಸರ್ಕಾರಕ್ಕೆ ಮುಖಭಂಗವಾಗಿದೆ. ಕೇಂದ್ರ ಸರ್ಕಾರ ನಡೆಸುವ ಗಣತಿಗೆ ರಾಜ್ಯ ಸರ್ಕಾರ ಸಹಕಾರ ನೀಡಿದರೆ ಸಾಕು ಎಂದರು.
ಸಂಸದರಿಗೆ ಸರ್ಕಾರ ಮಾರ್ಗದರ್ಶನ ನೀಡಲಿ
ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ರಾಜ್ಯದ ನೆಲ, ಜಲ ವಿಚಾರವಾಗಿ ಸಂಸತ್‌ನಲ್ಲಿ ಮಾತನಾಡುತ್ತಾರೆ. ಆದರೆ ಕಾಂಗ್ರೆಸ್ ಸಂಸದರು ರಾಜ್ಯದ ಬಗ್ಗೆ ಚರ್ಚಿಸದೆ ಎಲ್ಲಾ ವಿಷಯಕ್ಕೂ ಸಭಾತ್ಯಾಗ ಮಾಡುತ್ತಾರೆ. ಈ ಕುರಿತು ಕಾಂಗ್ರೆಸ್ ತಮ್ಮ ಸಂಸದರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಕಠಿಣ ಶಿಕ್ಷೆಯಾಗಲಿ
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗಿರುವುದು ಸ್ವಾಗತಾರ್ಹ. ಶಾಸಕರ ಮನೆ ಸುಟ್ಟಿರುವ ಘಟನೆ ಇನ್ನೂ ಕಣ್ಣ ಮುಂದಿದೆ. ಪಿಎಫ್‌ಐ ಸೇರಿದಂತೆ ಪಾಕಿಸ್ತಾನದ ಪರವಾಗಿರುವವರು ಅನೇಕರು ಇದರಲ್ಲಿ ಭಾಗಿಯಾಗಿದ್ದರು. ಅವರೆಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.
ಸಾರಿಗೆ ನೌಕರರ ಬೇಡಿಕೆ ಈಡೇರಿಸಿ
ನಾನು ಸಾರಿಗೆ ಸಚಿವನಾಗಿದ್ದಾಗ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿದ್ದೆ. ಈಗ ಸರ್ಕಾರ ಅವರ ಅಹವಾಲು ಆಲಿಸಬೇಕು. ನಾನು ಕೂಡ ಅದಕ್ಕೆ ಸ್ಪಂದಿಸುತ್ತೇನೆ. ಆಂಧ್ರಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆಯಾಗಿರುವುದು ಖಂಡನೀಯ. ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಕಾಂಗ್ರೆಸ್ ಲೂಟಿ ಮಾಡುತ್ತಿದೆ. ಇದರ ತನಿಖೆಯಾಗಿ ಸತ್ಯ ಹೊರಬರಲಿ. ಇದರಲ್ಲಿ ಜನರಿಗೆ ನ್ಯಾಯ ಸಿಗಲು ಹೋರಾಟ ಮಾಡುತ್ತೇವೆ ಎಂದರು.