Kidnap case | ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಿರಾಕರಣೆ
ಅಪಹರಣ ಪ್ರಕರಣದಲ್ಲಿ ಜೆಡಿಎಸ್ ನಾಯಕ ಹೆಚ್ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.;
ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣಗೆ ಕರ್ನಾಟಕ ಹೈಕೋರ್ಟ್ ನೀಡಿರುವ ಜಾಮೀನು ರದ್ದುಗೊಳಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಕರ್ನಾಟಕ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿತು. ಜೊತೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ರದ್ದುಗೊಳಿಸಿತು.
ಮೈಸೂರು ಜಿಲ್ಲೆ ಕೆ.ಆರ್. ನಗರದ ಮಹಿಳೆ ಅಪಹರಣ ಆರೋಪ ಪ್ರಕರಣ ಸಂಬಂಧ ಭವಾನಿ ರೇವಣ್ಣಗೆ ಜಾಮೀನು ನೀಡಬಾರದು ಎಂದು ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು. ಆರೋಪಿ ಮಹಿಳೆಯು ಪ್ರಕರಣದಲ್ಲಿ ನೇರ ಸಂಬಂಧ ಹೊಂದಿದ್ದಾರೆ. ಭವಾನಿ ರೇವಣ್ಣ ಅವರು ಅತ್ಯಾಚಾರ ಆರೋಪಿಯ ತಾಯಿಯೂ ಆಗಿದ್ದಾರೆ. ಪ್ರತಿಷ್ಠಿತ ರಾಜಕೀಯ ಕುಟುಂಬಕ್ಕೆ ಸೇರಿದ ಈ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ನಿರೀಕ್ಷಣಾ ಜಾಮೀನು ರದ್ದು ಮಾಡಬೇಕು ಎಂದು ಕೋರಿದರು.
ವಾದ ಆಲಿಸಿದ ನ್ಯಾಯಪೀಠವು, ಪ್ರಕರಣದ ಪ್ರಭಾವಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆರೋಪಿ ಮಗ ಮತ್ತು ಪತಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಜಾಮೀನು ರದ್ದು ಮಾಡಲು ಯಾವುದೇ ಸಕಾರಣ ಕಾಣುತ್ತಿಲ್ಲ. ಪ್ರತಿಷ್ಠಿತ ರಾಜಕೀಯ ಕುಟುಂಬ ಎಂದು ಜಾಮೀನು ರದ್ದು ಮಾಡಲಾಗದು ಎಂದು ಹೇಳಿತು.
ಕಳೆದ ಏಪ್ರಿಲ್‌ನಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಪ್ರಜ್ವಲ್ ಅವರು ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವ ಜೊತೆಗೆ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ ಎಂಬ ಆರೋಪವೂ ಇದೆ. ಬಳಿಕ ರೆಕಾರ್ಡಿಂಗ್ ತೋರಿಸಿ ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಮತ್ತೆ ಮತ್ತೆ ಅತ್ಯಾಚಾರ ಎಸಗುತ್ತಿದ್ದ. ಪ್ರಜ್ವಲ್ ಅವರ ಮೊಬೈಲ್ ಫೋನ್‌ನಿಂದ ಅವರ ಚಾಲಕ ಕಾರ್ತಿಕ್ ಗೌಡ ಅಶ್ಲೀಲ ವೀಡಿಯೊಗಳು ಮತ್ತು ಚಿತ್ರಗಳನ್ನು ಡೌನ್‌ಲೋಡ್ ಮಾಡಿದ್ದು, ಈ ವರ್ಷ ಏಪ್ರಿಲ್ ಮೂರನೇ ವಾರದಲ್ಲಿ ಪೆನ್ ಡ್ರೈವ್‌ಗಳು ಸಾರ್ವಜನಿಕವಾಗಿ ಸಿಕ್ಕಿದ್ದವು.
ವೈರಲ್ ವಿಡಿಯೋ ಒಂದರಲ್ಲಿ ತನ್ನ ತಾಯಿಯ ದೃಶ್ಯವೂ ಇದ್ದು, ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆ.ಆರ್ ನಗರ ಠಾಣೆಯಲ್ಲಿ ಸಂತ್ರಸ್ತೆಯ ಪುತ್ರ ದೂರು ನೀಡಿದ್ದರು. ಹೆಚ್.ಡಿ ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಭವಾನಿ ರೇವಣ್ಣ ಅವರನ್ನು ಬಂಧಿಸಿದ್ದರು.
ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಪಡೆದಿದ್ದು, ಮೈಸೂರು ಮತ್ತು ಹಾಸನ ಜಿಲ್ಲೆಗಳಿಗೆ ಭೇಟಿ ನೀಡಬಾರದು ಎಂಬ ಷರತ್ತು ವಿಧಿಸಲಾಗಿದೆ. ಪ್ರಜ್ವಲ್ ಲೈಂಗಿಕ ಕಿರುಕುಳ ನೀಡಿದ ಮಹಿಳೆಯನ್ನು ಅಪಹರಿಸಿದ ಆರೋಪ ಭವಾನಿ ರೇವಣ್ಣ ಮೇಲಿದೆ. ತನ್ನ ಮಗ ಪ್ರಜ್ವಲ್ ರೇವಣ್ಣನ ಮೇಲೆ ದೂರು ನೀಡುವುದನ್ನು ತಡೆಯಲು ಭವಾನಿ ಅವರು ಮಹಿಳೆಯನ್ನು ಅಪಹರಣ ಮಾಡಿದ್ದರು ಎಂದು ಹೇಳಲಾಗಿದೆ. ಕರ್ನಾಟಕ ಹೈಕೋರ್ಟ್ ನೀಡಿದ ನಿರೀಕ್ಷಣಾ ಜಾಮೀನು ಪ್ರಶ್ನಿಸಿ ಎಸ್ಐಟಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಅದರಂತೆ, ಸುಪ್ರೀಂಕೋರ್ಟ್ ಭವಾನಿ ರೇವಣ್ಣಗೆ ನೋಟಿಸ್ ಜಾರಿ ಮಾಡಿತ್ತು. ಇದೀಗ ವಿಚಾರಣೆ ನಡೆಸಿ ಆದೇಶ ಪ್ರಕಟಿಸಿದೆ.