ತೇಜಸ್ವಿ ಸೂರ್ಯ ಪ್ರಕರಣ: ರಾಜ್ಯ ಸರ್ಕಾರಕ್ಕೆ 25 ಲಕ್ಷ ರೂಪಾಯಿ ದಂಡ ವಿಧಿಸಿದ ಸುಪ್ರೀಂಕೋರ್ಟ್
ನಿಮ್ಮ ರಾಜಕೀಯ ಯುದ್ಧಗಳನ್ನು ಚುನಾವಣಾ ಅಖಾಡದಲ್ಲಿ ಎದುರಿಸಿ, ನ್ಯಾಯಾಲಯಗಳಲ್ಲಿ ಅಲ್ಲ" ಎಂದು ಕಟುವಾಗಿ ಹೇಳಿದ ನ್ಯಾಯಪೀಠ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿತು.;
ತೇಜಸ್ವಿ ಸೂರ್ಯ
ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧದ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದ್ದು, ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಮೇಲೆ 25 ಲಕ್ಷ ರೂಪಾಯಿ ದಂಡ ವಿಧಿಸಿ ಚಾಟಿ ಬೀಸಿದೆ. ಹೈಕೋರ್ಟ್‌ನಲ್ಲಿ ಇತ್ಯರ್ಥವಾಗಿದ್ದ ಪ್ರಕರಣವನ್ನು ರಾಜಕೀಯ ದುರುದ್ದೇಶದಿಂದ ಸುಪ್ರೀಂಕೋರ್ಟ್‌ಗೆ ತಂದಿದ್ದನ್ನು ನ್ಯಾಯಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ನೇತೃತ್ವದ ಪೀಠ, "ಏನಿದು? ವಿಷಯವನ್ನು ರಾಜಕೀಯಗೊಳಿಸಬೇಡಿ. ನಿಮ್ಮ ರಾಜಕೀಯ ಯುದ್ಧಗಳನ್ನು ಚುನಾವಣಾ ಅಖಾಡದಲ್ಲಿ ಎದುರಿಸಿ, ನ್ಯಾಯಾಲಯಗಳಲ್ಲಿ ಅಲ್ಲ" ಎಂದು ಕಟುವಾಗಿ ಹೇಳಿ, ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿತು.
ಪ್ರಕರಣದ ಹಿನ್ನೆಲೆ
ಹಾವೇರಿ ಜಿಲ್ಲೆಯ ರೈತರೊಬ್ಬರ ಆತ್ಮಹತ್ಯೆಗೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ಅವರು ಸುಳ್ಳು ಸುದ್ದಿ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಈ ಎಫ್‌ಐಆರ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು.
ಹೈಕೋರ್ಟ್‌ನ ಈ ತೀರ್ಪನ್ನು ಪ್ರಶ್ನಿಸಿ, ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿಯುವುದರ ಜೊತೆಗೆ, ಅನಗತ್ಯವಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ದಂಡ ವಿಧಿಸಿ ಆದೇಶಿಸಿದೆ. ಈ ತೀರ್ಪಿನಿಂದಾಗಿ, ರಾಜ್ಯ ಸರ್ಕಾರವು ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ಹಿನ್ನಡೆ ಅನುಭವಿಸಿದಂತಾಗಿದೆ.