ಧರ್ಮಸ್ಥಳದಲ್ಲಿನ ಹತ್ಯೆ ಪ್ರಕರಣ : ಕೇರಳ ಸರ್ಕಾರದಿಂದ ನಿರ್ಣಯ ಅಂಗೀಕರಿಸಲು ಒತ್ತಾಯ

ರಾಜ್ಯ ಸರ್ಕಾರದ ತನಿಖೆಯಲ್ಲಿ ಕೇರಳ ಸಹಕರಿಸಲು ಸುಪ್ರೀಂಕೋರ್ಟ್‌ನಲ್ಲಿ ಯಾವುದೇ ರಾಜಕೀಯ ಪ್ರೇರಿತ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್‌ನಲ್ಲಿ ಅನುಮತಿ ಪಡೆದುಕೊಳ್ಳಬೇಕು ಎಂದು ವಕೀಲ ಧನಂಜಯ್‌ ಆಗ್ರಹಿಸಿದ್ದಾರೆ.;

Update: 2025-07-17 13:53 GMT

ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೇ, ನೆರೆ ರಾಜ್ಯ ಕೇರಳದಲ್ಲಿಯೂ ಪ್ರತಿಧ್ವನಿಸುತ್ತಿದ್ದು, ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರದ ತನಿಖೆಯಲ್ಲಿ ಸಹಕರಿಸಲು ಕೇರಳ ಸರ್ಕಾರವು ತನ್ನ ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಅಂಗೀಕರಿಸಬೇಕು ಸುಪ್ರೀಂಕೋರ್ಟ್‌ ವಕೀಲ ಕೆ.ವಿ. ಧನಂಜಯ್‌ ಆಗ್ರಹಿಸಿದ್ದಾರೆ.

ಕರ್ನಾಟಕ ಸರ್ಕಾರದ ತನಿಖೆಯಲ್ಲಿ ಸಹಕರಿಸಲು ಯಾವುದೇ ರಾಜಕೀಯ ಪ್ರೇರಿತ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್‌ನಲ್ಲಿ ಅನುಮತಿ ಪಡೆದುಕೊಳ್ಳಬೇಕು. ಅಲ್ಲದೇ, ಕರ್ನಾಟಕ ಸರ್ಕಾರದ ಜತೆಗೆ ಕೇರಳ ಸರ್ಕಾರ ಸಹಕರಿಸಲಿದ್ದು, ಪೊಲೀಸರು ಸಹ ತನಿಖೆಗೆ ಕೈ ಜೋಡಿಸಲಿದ್ದಾರೆ ಎಂಬುದರ ಬಗ್ಗೆ ಕೇರಳ ಸರ್ಕಾರವು ತನ್ನ ವಿಧಾನಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಬೇಕಿದೆ ಎಂದು ಒತ್ತಾಯಿದ್ದಾರೆ. 

ಧರ್ಮಸ್ಥಳದಲ್ಲಿ ಅಹುತಿಗೊಳಗಾಗಿರುವ ನಿವಾಸಿಗಳು ಕರ್ನಾಟಕದವರು ಮಾತ್ರವಲ್ಲದೇ, ಹೊರ ರಾಜ್ಯದವರು ಸಹ ಸಂತ್ರಸ್ತರಾಗಿರುವ ಸಾಧ್ಯತೆ ಇದೆ. ಅದರಲ್ಲಿಯೂ ಕೇರಳ ಸಮೀಪ ಇರುವ ಕಾರಣ ಆ ರಾಜ್ಯದವರೇ ಇರಬಹುದು ಎಂಬ ಅನುಮಾನಗಳಿವೆ. ಹೀಗಾಗಿ ತನಿಖೆಯು ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಪ್ರಕರಣ ಸಂಬಂಧ ಬೇರೆ ರಾಜ್ಯಗಳು ಪ್ರಶ್ನಿಸುವ ಮುನ್ನ ರಾಜ್ಯ ಸರ್ಕಾರವು ಎಚ್ಚೆತ್ತುಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಸಾಮೂಹಿಕ ಹತ್ಯೆ ಪ್ರಕರಣವು ಗಂಭೀರ ಸ್ವರೂಪದಿಂದ ಕೂಡಿರುವ ಕಾರಣ ಉನ್ನತ ಮಟ್ಟದ ತನಿಖೆ ನಡೆಸಬೇಕು. ಪಾರದರ್ಶಕ, ನ್ಯಾಯಸಮ್ಮತವಾಗಿ ತನಿಖೆ ನಡೆಯುವ ಅಗತ್ಯ ಇದೆ. ಹಾಗಿದ್ದಲ್ಲಿ ಮಾತ್ರ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಸಿಗಲು ಸಾಧ್ಯವಿದೆ. ಕೇರಳ ರಾಜ್ಯದವರು ಸಹ ಘಟನೆಯಲ್ಲಿರುವ ಶಂಕೆ ಇರುವ ಕಾರಣ ಅಲ್ಲಿನ ಪೊಲೀಸರು ರಾಜ್ಯ ಪೊಲೀಸರ ತನಿಖೆಗೆ ಸಹಕರಿಸಬೇಕಾಗಿದೆ. ಈ ನಿಟ್ಟಿನಲ್ಲಿ ತಕ್ಷಣ ಕೇರಳ ಸರ್ಕಾರವು ಸುಪ್ರೀಂಕೋರ್ಟ್‌ನ ಮೊರೆ ಹೋಗಬೇಕು. ನ್ಯಾಯಾಲಯದ ಮೂಲಕ ಅನುಮತಿ ಪಡೆದು ರಾಜ್ಯ ಪೊಲೀಸರ ತನಿಖೆಗೆ ಸಹಕರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಒತ್ತಾಯಿಸಿದ್ದಾರೆ. 

ಇದೇ ವೇಳೆ ದ ಫೆಡರಲ್‌ ಕರ್ನಾಟಕ ಜತೆಗೆ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮದಲ್ಲಿ ಸಾಮೂಹಿಕ ಹತ್ಯೆಗಳ ಬಗ್ಗೆ ಕೇಳಿ ಬಂದ ಆರೋಪಗಳಲ್ಲಿ ಸತ್ಯಾಂಶ ಇರಬಹುದು. ಈ ಬಗ್ಗೆ ನ್ಯಾಯಸಮ್ಮತ ತನಿಖೆ ನಡೆಸಿದರೆ ಮಾತ್ರ ಸತ್ಯ ಏನೆಂಬುದು ಗೊತ್ತಾಗಲಿದೆ. ಕೇರಳದಿಂದಲೂ ಬಹಳಷ್ಟು ಮಂದಿ ಧರ್ಮಸ್ಥಳ ಕ್ಷೇತ್ರಕ್ಕೆ ತೆರಳುತ್ತಾರೆ. ಅಲ್ಲದೇ, ಆ ಭಾಗದ ಹಲವು ಮಂದಿ ಅಲ್ಲಿನ ಸುತ್ತಮುತ್ತಲ ಗ್ರಾಮದಲ್ಲಿ ನೆಲೆಸಿರಬಹುದು. ಅವರಲ್ಲಿಯೂ ಸಹ ಹತ್ಯೆಗೊಳಗಾಗಿರುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಎರಡು ರಾಜ್ಯಗಳು ಸಹಕಾರದೊಂದಿಗೆ ತನಿಖೆ ನಡೆಸಬೇಕಾಗಿದೆ. ಇದಕ್ಕೆ ಸುಪ್ರೀಂಕೋರ್ಟ್‌ನ ಅನುಮತಿಯನ್ನು ಕೇರಳ ರಾಜ್ಯವು ಪಡೆದುಕೊಳ್ಳಬೇಕು ಎಂದು ಹೇಳಿದರು. 

ಸಾರ್ವಜನಿಕ ಚರ್ಚೆಗಳು ನಡೆದಾಗ ಸಹಜವಾಗಿ ವಿಧಾನಸಭೆಯಲ್ಲಿಯೂ ಚರ್ಚೆಗಳು ನಡೆಯಬಹುದು. ಒಂದು ವೇಳೆ ಕೇರಳ ರಾಜ್ಯವು ತನ್ನ ವಿಧಾನಸಭೆಯಲ್ಲಿ ಚರ್ಚೆಗೆ ತೆಗೆದುಕೊಂಡರೆ ಕರ್ನಾಟಕ  ಸರ್ಕಾರವು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ರಾಜ್ಯ ವಿಧಾನಸಭೆಯಲ್ಲಿಯೂ ಚರ್ಚೆಗಳು ನಡೆಯುವ ನಿರೀಕ್ಷೆ ಇದೆ. ಅಲ್ಲದೇ, ಧರ್ಮಸ್ಥಳ ಗ್ರಾಮದಲ್ಲಿನ ಹತ್ಯೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ತನ್ನ ಪರಿಧಿ ಮೀರಿ ಆದೇಶ ನೀಡಿವೆ. ಮಾಧ್ಯಮಗಳಿಗೆ ವರದಿ ಮಾಡದಂತೆ ತಿಳಿಸಿವೆ. ಚರ್ಚೆಗಳು ನಡೆದರೆ ಈ ಎಲ್ಲಾ ಅಂಶಗಳು ಸಹ ಒಳಗೊಳ್ಳುತ್ತವೆ ಎಂದು ತಿಳಿಸಿದರು. 

ರಾಜ್ಯದೊಳಗಿನ ಕ್ರಿಮಿನಲ್ ತನಿಖೆಯನ್ನು ಆ ರಾಜ್ಯಕ್ಕೆ ಸಂಬಂಧಪಟ್ಟಿದ್ದು ಎಂದು ಪರಿಗಣಿಸಲಾಗುತ್ತದೆ. ಆದರೆ, ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಕರ್ನಾಟಕವು ಅದರಲ್ಲಿ ಒಂದಾಗಿದೆ. ಪ್ರಸಿದ್ಧ ಯಾತ್ರಾ ಸ್ಥಳವಾದ ಧರ್ಮಸ್ಥಳಕ್ಕೆ ದೇಶಾದ್ಯಂತ ಭಕ್ತಾದಿಗಳು ಬರುತ್ತಾರೆ. ಒಂದು ವೇಳೆ ದೂರುದಾರರ ಆರೋಪಗಳು ನಿಜವಾದರೆ ಘಟನೆಯಲ್ಲಿ ಹತ್ಯೆಗೊಳಗಾದವರು ಹೊರ ರಾಜ್ಯಗಳಾಗಿರಲೂ ಬಹುದು. ಕೇರಳವು ಧರ್ಮಸ್ಥಳದೊಂದಿಗೆ ವಿಶೇಷವಾಗಿ ಆಳವಾದ ಸಂಪರ್ಕವನ್ನು ಹೊಂದಿದೆ. ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯ ಕೇರಳಿಗರು ದೇವಾಲಯದ ಪ್ರದೇಶಕ್ಕೆ ಭೇಟಿ ನೀಡುತ್ತಾರೆ ಎಂದರು. 

ಕೇರಳದ ಪಾತ್ರವು ರಾಜಕೀಯೇತರ ಮತ್ತು ದ್ವಿಪಕ್ಷೀಯವಾಗಿರಬೇಕು. ಯಾವುದೇ ಉಪಕ್ರಮವು ಶಾಸಕಾಂಗದ ಒಮ್ಮತದಿಂದ ಬೆಂಬಲಿತವಾಗಿರಬೇಕು, ಮೇಲಾಗಿ ಕೇರಳ ವಿಧಾನಸಭೆಯ ಸರ್ವಾನುಮತದ ಅಥವಾ ಬಹುತೇಕ ಸರ್ವಾನುಮತದ ನಿರ್ಣಯದ ರೂಪದಲ್ಲಿ. ಅಂತಹ ನಿರ್ಣಯವು ಪ್ರಜಾಪ್ರಭುತ್ವದ ನ್ಯಾಯಸಮ್ಮತತೆಯನ್ನು ಪ್ರದರ್ಶಿಸುತ್ತದೆ ಮತ್ತು ನ್ಯಾಯದ ಹಿತಾಸಕ್ತಿಗಾಗಿ ಮಾತ್ರ ತನಿಖೆಗೆ ಸಹಾಯ ಮಾಡುವಲ್ಲಿ ಪಾತ್ರ ವಹಿಸಲು ಕೇರಳವು ಗೌರವಾನ್ವಿತ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

ಹಸ್ತಕ್ಷೇಪವೆಂದು ಪರಿಗಣಿಸಬಾರದು

ತನಿಖೆಯ ಪ್ರಗತಿ ಅಥವಾ ವಿಶ್ವಾಸಾರ್ಹತೆಯ ಬಗ್ಗೆ ಮತ್ತೊಂದು ರಾಜ್ಯವು ಕಳವಳ ವ್ಯಕ್ತಪಡಿಸಿದರೆ, ಕರ್ನಾಟಕವು ಅದನ್ನು ಹಸ್ತಕ್ಷೇಪವೆಂದು ಪರಿಗಣಿಸಬಾರದು. ಬದಲಾಗಿ, ಆ ರಾಜ್ಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ನಂಬಿಕೆಯನ್ನು ಬೆಳೆಸಲು, ಸಾರ್ವಜನಿಕರಿಗೆ ಭರವಸೆ ಮೂಡಲು ಮತ್ತು ಕಾನೂನನ್ನು ಬಲಪಡಿಸಲು ಉಭಯ ರಾಜ್ಯಗಳ ಸಹಕಾರದೊಂದಿಗೆ ತನಿಖೆ ನಡೆಸಬೇಕಾದ ಅಗತ್ಯತೆ ಇದೆ ಎಂದು ತಿಳಿಸಿದರು. 


Tags:    

Similar News