ಸುಪಾರಿ ಹಂತಕರ ಸಂಚು | ಕತ್ತು ಬಿಗಿದು ಗುಂಡಿಯಲ್ಲಿ ಮುಚ್ಚಿದ ಬಳಿಕವೂ ಬದುಕಿಬಂದ ಯೋಗ ಶಿಕ್ಷಕಿ!
ಯೋಗ ಶಿಕ್ಷಕಿಯ ಹತ್ಯೆಗಾಗಿ ಅವರ ಬಳಿಯೇ ಯೋಗ ತರಬೇತಿಗೆ ಸೇರಿಕೊಂಡ ವ್ಯಕ್ತಿಯೇ ಸುಪಾರಿ ಪಡೆದು ಕೊಲೆಗೆ ಸಂಚು ರೂಪಿಸಿ, ಸಿಕ್ಕಿಬಿದ್ದಿದ್ದಾನೆ. ಅದೃಷ್ಟವಶಾತ್, ಯೋಗ ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತನ್ನ ಪತಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಸಂಶಯದ ಹಿನ್ನೆಲೆಯಲ್ಲಿ ಯೋಗ ಶಿಕ್ಷಕಿಯ ಕೊಲೆಗೆ ಸುಪಾರಿ ನೀಡಿದ್ದ ಗೃಹಿಣಿ ಹಾಗೂ ಯೋಗ ಶಿಕ್ಷಕಿಯ ಕೊಲೆಗೆ ಯತ್ನಿಸಿದ ಆರೋಪಿಗಳು ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಯೋಗ ಶಿಕ್ಷಕಿಯ ಹತ್ಯೆಗಾಗಿ ಅವರ ಬಳಿಯೇ ಯೋಗ ತರಬೇತಿಗೆ ಸೇರಿಕೊಂಡ ವ್ಯಕ್ತಿಯೇ ಸುಪಾರಿ ಪಡೆದು ಕೊಲೆಗೆ ಸಂಚು ರೂಪಿಸಿ, ಸಿಕ್ಕಿಬಿದ್ದಿದ್ದಾನೆ. ಅದೃಷ್ಟವಶಾತ್, ಯೋಗ ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಏನಿದು ಪ್ರಕರಣ?
ಬೆಂಗಳೂರಿನ ಕಿತಗನೂರು ಸಮೀಪ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದ ಯೋಗ ಶಿಕ್ಷಕಿ ಅರ್ಚನಾ ಎಂಬುವರನ್ನು ಅ.23 ರಂದು ದುರುಳರು ಅಪಹರಣ ಮಾಡಿ, ಜೀವಂತವಾಗಿ ಹೂತು ಹಾಕಲು ಯತ್ನಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ದೇವನಹಳ್ಳಿ ತಾಲೂಕಿನ ಎಲಿಯೂರು ಗ್ರಾಮದ ವಿಶ್ವನಾಥ ಎಂಬುವರನ್ನು 13 ವರ್ಷದ ಹಿಂದೆ ಮದುವೆಯಾಗಿದ್ದ ಅರ್ಚನಾಗೆ ಇಬ್ಬರು ಮಕ್ಕಳಿದ್ದಾರೆ. ಆದರೆ, ಕೌಟುಂಬಿಕ ಕಲಹದ ಕಾರಣ ದಂಪತಿ ಎರಡು ವರ್ಷಗಳಿಂದ ಪ್ರತ್ಯೇಕವಾಗಿದ್ದರು. ಅರ್ಚನಾ ತಮ್ಮ ಪೋಷಕರೊಂದಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದರು. ಅಲ್ಲಿಯೇ ಯೋಗ ತರಗತಿ ನಡೆಸುತ್ತಿದ್ದರು. ಆರೋಪಿ ಸತೀಶ್ ರೆಡ್ಡಿ ಸೇರಿ ಮೂವರು ನಿತ್ಯ ಯೋಗ ಕ್ಲಾಸ್‌ಗೆ ಬರುತ್ತಿದ್ದರು.
ಕೊಲೆ ಸುಪಾರಿಗೆ ಕಾರಣವೇನು?
2021 ರಲ್ಲಿ ಅರ್ಚನಾ ಅವರ ಪತಿ ವಿಶ್ವನಾಥ್‌ಗೆ ಸಿಟಿ ಟಿನ್ ಫ್ಯಾಕ್ಟರಿ ಬಳಿ ಅಪಘಾತವಾಗಿತ್ತು. ಆಗ ಅರ್ಚನಾಗೆ ವಿಶ್ವನಾಥ್ ಸ್ನೇಹಿತ ಸಂತೋಷ್ ಕುಮಾರ್ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಸಲುಗೆಯಿಂದ ಇದ್ದರು. ತನ್ನ ಪತಿ ಅರ್ಚನಾ ಜೊತೆಗೆ ಸಲುಗೆಯಿಂದ ಇರುವುದು ಸಂತೋಷ್ ಕುಮಾರ್ ಪತ್ನಿ ಬಿಂದುಶ್ರಿ ಗೆ ಅನುಮಾನ ಮೂಡಿಸಿತ್ತು. ಇಬ್ಬರ ಮಧ್ಯೆ ಅಕ್ರಮ ಸಂಬಂಧ ಇರಬಹುದು ಎಂದು ಭಾವಿಸಿ, ಕುಪಿತಗೊಂಡಿದ್ದಳು. ಅರ್ಚನಾಳ ಹತ್ಯೆಗೆ ನಿರ್ಧರಿಸಿದ ಬಿಂದುಶ್ರೀ ಖಾಸಗಿ ಡೆಟೆಕ್ಟೀವ್ ಆಗಿದ್ದ ಸತೀಶ್ ರೆಡ್ಡಿ ಎಂಬಾತನಿಗೆ ಸುಪಾರಿ ಕೊಟ್ಟಿದ್ದರು. ಅಂತೆಯೇ ಜೆಪಿ ನಗರದ ಕೊತ್ತನೂರು ದಿನ್ನೆಯಲ್ಲಿ ವಾಸವಿದ್ದ ಸತೀಶ್ ರೆಡ್ಡಿ ದಿನವೂ ಕಿತಗನೂರಿನ ಅಪಾರ್ಟ್ಮೆಂಟ್‌ಗೆ ಯೋಗ ಕಲಿಯಲು ಹೋಗುತ್ತಿದ್ದ.
ಅ.23 ರಂದು ಅಪಾರ್ಟ್ಮೆಂಟ್ ಫ್ಲ್ಯಾಟ್‌ಗೆ ಬಂದ ಸತೀಶ್ ರೆಡ್ಡಿ, ಗನ್ ಟ್ರೈನಿಂಗ್ ಕೊಡುತ್ತೇನೆ ಎಂದು ಹೇಳಿ ಅರ್ಚನಾಳನ್ನು ಕಾರಿನಲ್ಲಿ ಅಪಹರಣ ಮಾಡಿದ್ದ. ಇದಕ್ಕೆ ಪ್ರತಿರೋಧ ತೋರಿದ ಅರ್ಚನಾಳನ್ನು ಥಳಿಸಿದ್ದ. ಆಕೆಯ ಮೈ ಮೇಲೆ ಇದ್ದ 60 ಗ್ರಾಂ ಚಿನ್ನಾಭರಣ ಕಸಿದು, ಕಿರುಚದಂತೆ ಹಣೆಗೆ ಗನ್ ಇಟ್ಟು ಬೆದರಿಸಿದ್ದ. ಬಾಗಲೂರು, ಆವಲಹಳ್ಳಿ, ರಾಂಪುರ ರಸ್ತೆಗಳಲ್ಲಿ ಕತ್ತಲಾಗುವವರೆಗೂ ಸುತ್ತಾಡಿಸಿ ಸಂಜೆ ನಂತರ ಚಿಕ್ಕಬಳ್ಳಾಪುರದ ಬೆಟ್ಟಗುಡ್ಡಗಳ ನಿರ್ಜನ ಪ್ರದೇಶಕ್ಕೆ ಕರೆದೋಯ್ದಿದ್ದ. ಮಾರ್ಗಮಧ್ಯೆ ಇನ್ನೂ ಮೂವರು ಕಾರು ಹತ್ತಿದ್ದರು.
ಜೀವಂತವಾಗಿ ಹೂತು ಹಾಕಿ ಪರಾರಿ
ಕಾರಿನಲ್ಲಿ ಕರೆದೊಯ್ಯುವಾಗಲೇ ಅರ್ಚನಾ ಮೇಲೆ ಆರೋಪಿ ಸತೀಶ್ ರೆಡ್ಡಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದಕ್ಕೆ ತೀವ್ರ ಪ್ರತಿರೋಧ ತೋರಿದಾಗ ಕತ್ತಲಲ್ಲೇ ಕಾರಿನಿಂದ ಕೆಳಗಿಳಿಸಿ, ಮೂರೂ ಜನರು ಅರ್ಚನಾ ಮೇಲೆ ಹಲ್ಲೆ ನಡೆಸಿದ್ದರು. ಸತೀಶ್ ರೆಡ್ಡಿ ಚಾರ್ಜರ್ ವೈರ್ನಿಂದ ಕುತ್ತಿಗೆ ಬಿಗಿದು, ಹತ್ಯೆ ಮಾಡಲು ಪ್ರಯತ್ನಿಸಿದ್ದ. ಈ ವೇಳೆ ಅರ್ಚನಾ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆ ಆಕೆ ಸತ್ತಿರಬಹುದು ಎಂದು ಭಾವಿಸಿ ಮೂರು ಜನರು ಅಲ್ಲಿಯೇ ಗುಂಡಿ ತೋಡಿ ಅರ್ಧಂಬರ್ಧ ಮುಚ್ಚಿದರು. ಆದರೆ, ಅರೆಪ್ರಜ್ಞಾಹೀನಳಾಗಿ ಇದೆಲ್ಲವನ್ನೂ ಗಮನಿಸುತ್ತಿದ್ದ ಅರ್ಚನಾ ಸತ್ತಂತೆ ನಾಟಕವಾಡಿದ್ದರು. ಗುಂಡಿಯಲ್ಲಿ ಅರ್ಚನಾಳನ್ನು ಅರೆಬೆತ್ತಲೆ ಮಾಡಿ, ಸ್ವಲ್ಪ ಮಣ್ಣು ಹಾಕಿ, ಪಕ್ಕದಲ್ಲೇ ಇದ್ದ ಮರದ ಕೊಂಬೆಗಳನ್ನು ಹಾಕಿ ಮುಚ್ಚಿ ಪರಾರಿಯಾಗಿದ್ದರು.
3 ಕಿ.ಮೀ ನಡೆದು ಆಸರೆ ಪಡೆದ ಅರ್ಚನಾ
ಆರೋಪಿಗಳ ಹಲ್ಲೆ ಹಾಗೂ ಊಟವಿಲ್ಲದೇ ನಿತ್ರಾಣರಾಗಿದ್ದ ಅರ್ಚನಾ ಗುಂಡಿಯಿಂದ ಮೇಲೆ ಎದ್ದು ಇಡೀ ರಾತ್ರಿ ದಾರಿ ಹುಡುಕಿಕೊಂಡು ಧಮ ಮಿಟ್ಟನಹಳ್ಳಿ ಎಂಬಲ್ಲಿಗೆ ಬಂದಿದ್ದರು. ಮುಂಜಾನೆ 5.30 ರ ಸುಮಾರಿಗೆ ಒಂಟಿ ಮನೆಗೆ ಬಂದು ಆಶ್ರಯ ಪಡೆದರು. ಬಳಿಕ ಮನೆಯ ಯಜಮಾನ ವೆಂಕಟೇಶ್ ಎಂಬುವರಿಂದ ತನ್ನ ತಾಯಿಗೆ ಫೋನ್ ಮಾಡಿಸಿ, ಘಟನೆ ವಿವರಿಸಿದ್ದರು. ಅಲ್ಲಿಂದ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.
ಆರೋಪಿಗಳಿಗೆ ಹೆಡೆಮುರಿ ಕಟ್ಟಿದ ಖಾಕಿ ಪಡೆ
ಸಂತ್ರಸ್ತ ಮಹಿಳೆಯ ದೂರು ಸ್ವೀಕರಿಸಿದ ಕೂಡಲೇ ತನಿಖೆ ಆರಂಭಿಸಿದ ಪೊಲೀಸರು ಐವರು ಆರೋಪಿಗಳು, ಒಬ್ಬ ಬಾಲಕನನ್ನು ಬಂಧಿಸಿದ್ದಾರೆ. ಖಾಸಗಿ ಡೆಟೆಕ್ಟೀವ್ ಆಗಿರುವ ಸತೀಶ್ ರೆಡ್ಡಿ ಸೇರಿದಂತೆ ಮೂವರು ಆರೋಪಿಗಳು ಆಂಧ್ರ ಮೂಲದವರಾಗಿದ್ದು, ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದ್ದಾರೆ.
ಅರ್ಚನಾಳನ್ನು ಥಳಿಸುವ ಸಂದರ್ಭದಲ್ಲಿ ಸೋದರನ ಮೇಲೆ ಆಸ್ತಿ ಪ್ರಕರಣ, ಪತಿ ವಿಶ್ವನಾಥ್ ಅವರೊಂದಿಗೆ ವಿಚ್ಛೇಧನ ಏಕೆ ಪಡೆದಿಲ್ಲ ಎಂಬುದಾಗಿಯೂ ಆರೋಪಿ ಸತೀಶ್ ರೆಡ್ಡಿ ಕಿರುಚಾಡಿದ್ದ. ಈ ಆಯಾಮದಲ್ಲೂ ಪ್ರಕರಣ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. ಬಂಧಿತರನ್ನು ಮಡಕಶಿರಾ ಮೂಲದ ಸತೀಶ್ ರೆಡ್ಡಿ, ರಮಣ, ನಾಗೇಂದ್ರ ರೆಡ್ಡಿ, ರವಿಚಂದ್ರ, ಬಿಂದುಶ್ರೀ ಎಂದು ಗುರುತಿಸಲಾಗಿದೆ.