Suhas shetty Murder Case |ಸುಹಾಸ್ ಶೆಟ್ಟಿ ರೌಡಿ ಶೀಟರ್ ಆಗಿದ್ದು ಬಿಜೆಪಿ ಅವಧಿಯಲ್ಲಿ; ದಿನೇಶ್ ಗುಂಡೂರಾವ್
ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡೋರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.;
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಕುರಿತಂತೆ ರಾಜ್ಯ ಸರ್ಕಾರ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ವಾಕ್ಸಮರ ತಾರಕಕ್ಕೇರಿದೆ.
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು 'ಲವ್ ಜಿಹಾದ್'ಗೆ ಒಳಗಾಗಿದ್ದರು ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಸಚಿವರು, ''ಅಮಾಯಕರ ತಲೆಯಲ್ಲಿ ಮತಾಂಧತೆಯ ಅಮಲು ತುಂಬಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುವ ಕೆಲಸ ಮಾಡುತ್ತಿದೆ,'' ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ದಿನೇಶ್ ಗುಂಡೂರಾವ್ "ಸುಹಾಸ್ ಶೆಟ್ಟಿ ವಿರುದ್ಧ ಇದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ರೌಡಿಶೀಟರ್ ತೆರೆಯಲಾಗಿತ್ತು. ಈಗ ಆತನ ಹತ್ಯೆಯ ಬಳಿಕ ಹೋರಾಟಗಾರನಂತೆ ಬಿಂಬಿಸಲಾಗುತ್ತಿದೆ,'' ಎಂದು ಬರೆದಿದ್ದು 2020ರಲ್ಲಿ ರೌಡಿಶೀಟರ್ ತೆರೆದಿದ್ದ ದಾಖಲೆ ಬಹಿರಂಗಪಡಿಸಿದ್ದಾರೆ .
ಸುಹಾಸ್ ಶೆಟ್ಟಿ ವಿರುದ್ಧ ಬಿಜೆಪಿ ಅಧಿಕಾರದಲ್ಲೇ ರೌಡಿಶೀಟರ್ ತೆರೆಯಲಾಗಿದೆ. ಅಂದು ಬಸವರಾಜ ಬೊಮ್ಮಾಯಿ ಅವರೇ ಗೃಹ ಸಚಿವರಾಗಿದ್ದರು. ಈಗ ಸುಹಾಸ್ನನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆಗ ಯಾಕೆ ಸುಹಾಸ್ನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು ಎಂದು ಪ್ರಶ್ನಿಸಿದ್ದಾರೆ.
ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್ಗಳ ನಿಜವಾದ ಸೃಷ್ಟಿಕರ್ತರು. ಇವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೆ ಅದೇ ಕ್ರಿಮಿನಲ್ಗಳನ್ನು ಮಹಾತ್ಮರಂತೆ ಬಿಂಬಿಸಿ ಹುತಾತ್ಮರನ್ನಾಗಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಹಾಸ್ ಹತ್ಯೆ ನಂತರ ಕೂಗುಮಾರಿಗಳಂತೆ ಅರಚುತ್ತಿರುವ ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಧರ್ಮದ ಅಮಲು ತುಂಬಿದ್ದಾರೆಯೇ? ಯಾರನ್ನಾದರೂ ಬೀದಿ ಕಾಳಗಕ್ಕೆ ಬಿಟ್ಟಿದ್ದಾರೆಯೇ? ಅವರಲ್ಲಿ ಯಾರಾದರೂ ಧರ್ಮಕ್ಕಾಗಿ ಬಡಿದಾಡುತ್ತಿದ್ದಾರೆಯೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ನಾಯಕರ ಧರ್ಮಾಂಧತೆಗೆ ಬೀದಿ ಹೆಣವಾಗುತ್ತಿರುವುದು ಬಡವರ ಮಕ್ಕಳು. ಇದು ಸತ್ಯವಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರ ಕೆಟ್ಟ ರಾಜಕೀಯಕ್ಕೆ ಕರಾವಳಿಯಲ್ಲಿ ಎಷ್ಟೋ ಜನರ ಬಲಿಯಾಗಿದೆ. ಎಷ್ಟೋ ಮನೆಗಳ ದೀಪ ಆರಿ ಹೋಗಿದೆ. ಇಷ್ಟಾದರೂ ಇವರ ರಕ್ತದಾಹ ನಿಂತಿಲ್ಲ. ಕರಾವಳಿಯಲ್ಲಿ ಇನ್ನಷ್ಟು ಹೆಣ ಬೀಳಬೇಕು ಎನ್ನುವ ಉದ್ದೇಶದಿಂದ ದುಷ್ಟ ರಾಜಕಾರಣ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡದ ಜನ ಪ್ರಜ್ಞಾವಂತಿಕೆಯ ಜೊತೆಗೆ ಸೂಕ್ಷ್ಮತೆ ಅರಿತುಕೊಂಡವರು. ಇನ್ನಾದರೂ ಕರಾವಳಿಯ ಜನ ಬಿಜೆಪಿಯ ಹುನ್ನಾರ ಅರಿಯಬೇಕಿದೆ. ಇಲ್ಲದಿದ್ದರೆ ಬಿಜೆಪಿಯವರ ಕೆಟ್ಟ ರಾಜಕಾರಣಕ್ಕೆ ಜಿಲ್ಲೆಯ ನೆಮ್ಮದಿಯೇ ಹಾಳಾಗಲಿದೆ ಎಂದು ಎಚ್ಚರಿಸಿದ್ದಾರೆ.