ಸುಹಾಸ್‌ಶೆಟ್ಟಿ ಕೊಲೆ ಪ್ರಕರಣ | ಎರಡೂ ಸಮುದಾಯದಲ್ಲೂ ಭಯೋತ್ಪಾದಕರ ಫ್ಯಾಕ್ಟರಿ; ಸಚಿವ ರಾಮಲಿಂಗಾರೆಡ್ಡಿ ಬೇಸರ
ದಕ್ಷಿಣ ಕನ್ನಡದ ಇತಿಹಾಸ ಗಮನಿಸಿದರೆ ಯಾರೊಬ್ಬರೂ ಕಡಿಮೆಯಿಲ್ಲ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಶಿಕ್ಷೆ ನೀಡಬೇಕು. ಎರಡೂ ಸಮುದಾಯದವರಲ್ಲೂ ಭಯೋತ್ಪಾದಕರ ಕಾರ್ಖಾನೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.;
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ.
ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಹಾಗೂ ಮುಸ್ಲಿಂ ಸಂಘಟನೆಗಳಲ್ಲಿ ಭಯೋತ್ಪಾದಕರ ಫ್ಯಾಕ್ಟರಿ ಇರುವುದು ಖಾತರಿಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ವಿಜಯನಗರ ಜಿಲ್ಲೆಯ ಅಮರಾವತಿ ಗ್ರಾಮದಲ್ಲಿ ಸೋಮವಾರ ದೇವರಾಜ ಅರಸ್ ಟ್ರಕ್ ಟರ್ಮಿನಲ್ ಉದ್ಘಾಟನೆಗೂ ಮುನ್ನ ಮಾಧ್ಯಮವರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡದ ಇತಿಹಾಸ ಗಮನಿಸಿದರೆ ಯಾರೊಬ್ಬರೂ ಕಡಿಮೆಯಿಲ್ಲ. ಸುಹಾಸ್ ಶೆಟ್ಟಿ ಕೊಲೆಯಂತಹ ದುರ್ಘಟನೆ ನಡೆಯಬಾರದಿತ್ತು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಎರಡೂ ಸಮುದಾಯಗಳ ನಾಯಕರ ಪ್ರಚೋದನೆಯಿಂದ ಈ ರೀತಿಯ ಗಲಾಟೆಗಳು ಹಾಗೂ ಹತ್ಯೆಗಳು ನಡೆಯುತ್ತಿವೆ. ಅಪರಾಧ ಮಾಡಿದವರು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ. ಆದರೆ, ಗಲಭೆಗಳ ಹಿಂದಿರುವ ಶಕ್ತಿಗಳು ಮಾತ್ರ ಬಂಧನದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಗಲಭೆ ಹಿಂದಿರುವವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಿಜೆಪಿ ಕಾಲದಲ್ಲೇ ರೌಡಿಶೀಟರ್
ಕೊಲೆಯಾದ ಸುಹಾಸ್ ಶೆಟ್ಟಿ ವಿರುದ್ಧ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ರೌಡಿಶೀಟ್ ತೆರೆಯಲಾಗಿದೆ. ತಪ್ಪು ಯಾರೇ ಮಾಡಿದ್ದರೂ ಅವರನ್ನು ಜೈಲಿಗೆ ಹಾಕುವಂತೆ ನಾವು ಸೂಚಿಸಿದ್ದೇವೆ. ಕೊಲೆ ಮಾಡಿದವರು ಜೈಲಿಗೆ ಹೋಗುತ್ತಾರೆ. ಆದರೆ ಅವರ ಕುಟುಂಬಗಳ ನಿರ್ವಹಣೆ ಹಾಗೂ ಪೋಷಕರನ್ನು ನೋಡಿಕೊಳ್ಳಲು ಯಾರು ಮುಂದೆ ಬರುವುದಿಲ್ಲ. ಯುವಕರು ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.