ಚಲನಚಿತ್ರ ಪ್ರಶಸ್ತಿ | ʼಅತ್ಯುತ್ತಮ ನಟʼ ಪ್ರಶಸ್ತಿ ನಿರಾಕರಿಸಿದ ಸುದೀಪ್
ಪೈಲ್ವಾನ್ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದ ಕಿಚ್ಚ ಸುದೀಪ್ ಅವರು ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ.;
ʼಪೈಲ್ವಾನ್ʼ ಚಿತ್ರದ ಅತ್ಯುತ್ತಮ ನಟನೆಗಾಗಿ ರಾಜ್ಯ ಸರ್ಕಾರ ಘೋಷಿಸಿದ್ದ ರಾಜ್ಯ ಪ್ರಶಸ್ತಿಯನ್ನು ಕಿಚ್ಚ ಸುದೀಪ್ ನಿರಾಕರಿಸಿದ್ದಾರೆ.
2019ರಲ್ಲಿ ತೆರೆಕಂಡ ಚಿತ್ರಗಳಿಗೆ ಬುಧವಾರ ರಾಜ್ಯ ಪ್ರಶಸ್ತಿ ಘೋಷಿಸಲಾಗಿತ್ತು. ʼಪೈಲ್ವಾನ್ʼ ಚಿತ್ರದ ನಟನೆಗಾಗಿ ಕಿಚ್ಚ ಸುದೀಪ್ ಅವರು ʼಅತ್ಯುತ್ತಮ ನಟ’ ಪ್ರಶಸ್ತಿಗೆ ಭಾಜನರಾಗಿದ್ದರು.
ರಾಜ್ಯ ಪ್ರಶಸ್ತಿ ಘೋಷಣೆ ಕುರಿತು ಗುರುವಾರ ತಮ್ಮ ʼಎಕ್ಸ್ʼ ಖಾತೆಯಲ್ಲಿ ಪೋಸ್ಟ್ ಮಾಡಿರುವ ಕಿಚ್ಚ ಸುದೀಪ್, ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ.
‘ಪೈಲ್ವಾನ್’ ಚಿತ್ರದಲ್ಲಿನ ತಮ್ಮ ನಟನೆ ಗುರುತಿಸಿದ್ದಕ್ಕಾಗಿ ತೀರ್ಪುಗಾರರು ಹಾಗೂ ರಾಜ್ಯ ಸರ್ಕಾರಕ್ಕೆ ಆಭಾರಿಯಾಗಿದ್ದೇನೆ. ಆದರೆ ತಮ್ಮ ಬದಲು ಬೇರೆ ಕಲಾವಿದರಿಗೆ ಈ ಪ್ರಶಸ್ತಿ ಸಲ್ಲಬೇಕು ಎಂದು ಬರೆದುಕೊಂಡಿದ್ದಾರೆ.
"ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಸೌಭಾಗ್ಯ. ಈ ಗೌರವಕ್ಕಾಗಿ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದರೆ, ನಾನು ವೈಯಕ್ತಿಕ ಕಾರಣಗಳಿಂದಾಗಿ ಹಲವಾರು ವರ್ಷಗಳಿಂದ ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ಕಲೆಯನ್ನೇ ಉಸಿರಾಗಿಸಿಕೊಂಡು ಬದುಕುತ್ತಿರುವ ಅನೇಕ ಸಮರ್ಥ ನಟರು ಕನ್ನಡ ಚಿತ್ರರಂಗದಲ್ಲಿದ್ದಾರೆ. ನನಗಿಂತಲೂ ಹೆಚ್ಚಾಗಿ ಅವರಿಗೆ ಈ ಪ್ರಶಸ್ತಿಯ ಗೌರವ ಸಲ್ಲಬೇಕು. ಅಂತಹವರಲ್ಲಿ ಒಬ್ಬರು ಈ ಗೌರವ ಪಡೆದರೆ ನನಗೆ ಅದೇ ಹೆಚ್ಚು ಖುಷಿ ನೀಡುತ್ತದೆ" ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
"ಜನರನ್ನು ರಂಜಿಸಬೇಕು ಎಂಬ ನನ್ನ ಕೆಲಸದಲ್ಲಿ ಪ್ರಶಸ್ತಿಗಳನ್ನು ನಿರೀಕ್ಷೆ ಮಾಡುವುದಿಲ್ಲ. ಜ್ಯೂರಿಗಳು ನನ್ನನ್ನು ಗುರುತಿಸಿರುವುದು ನನ್ನ ಕಲಾಸೇವೆಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಜ್ಯೂರಿಗಳಿಗೆ ಚಿರಋಣಿ. ಈ ಮನ್ನಣೆಯೇ ನಿಜವಾದ ಪ್ರಶಸ್ತಿ. ನನ್ನ ಈ ನಿರ್ಧಾರದಿಂದ ಕೆಲವರಿಗೆ ನಿರಾಸೆ ಆಗಿದ್ದರೆ ಕ್ಷಮೆ ಕೇಳುತ್ತೇನೆ. ನನ್ನ ನಿರ್ಧಾರವನ್ನು ನೀವು ಗೌರವಿಸುತ್ತೀರಿ ಮತ್ತು ನನ್ನನ್ನು ಬೆಂಬಲಿಸುತ್ತೀರಿ ಎಂಬ ನಂಬಿಕೆ ನನಗೆ ಇದೆ" ಎಂದು ಹೇಳಿದ್ದಾರೆ.