Covid-19 | ರಾಜ್ಯದಲ್ಲಿ ಕೊರೋನಾ ಪ್ರಕರಣಗಳ ದಿಢೀರ್ ಹೆಚ್ಚಳ
ರಾಜ್ಯದಲ್ಲಿ ಒಟ್ಟು 650 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 265 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಪಾಸಿಟಿವ್ ಪ್ರಮಾಣ ಶೇ.40ಕ್ಕೆ ಏರಿಕೆಯಾಗಿದೆ ಎಂದು ವರದಿ ಆಗಿದೆ.;
ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 265 ಮಂದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1220ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿ ಒಟ್ಟು 650 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆ ಪೈಕಿ 265 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಪಾಸಿಟಿವ್ ಪ್ರಮಾಣ ಶೇ.40ಕ್ಕೆ ಏರಿಕೆಯಾಗಿದೆ ಎಂದು ವರದಿ ಆಗಿದೆ.
ರಾಜ್ಯದ ಇದೀಗ ಒಟ್ಟು 559 ಸಕ್ರಿಯೆ ಪ್ರಕರಣಗಳಿದ್ದು, ಈ ಪೈಕಿ 552 ಮಂದಿ ಮನೆಯ ಆರೈಕೆಯಲ್ಲಿದ್ದಾರೆ. ಉಳಿದ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಕೇಂದ್ರ ಸರ್ಕಾರ ಮತ್ತು ಆರೋಗ್ಯ ಸಚಿವಾಲಯವು ಸಂಪೂರ್ಣ ಜಾಗರೂಕವಾಗಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ, ಭಯಪಡುವ ಅಗತ್ಯವಿಲ್ಲ. ಪತ್ತೆಯಾಗಿರುವ ಕೋವಿಡ್ -19 ರೋಗಿಗಳಲ್ಲಿ ಸೌಮ್ಯ ಲಕ್ಷಣಗಳು ಮಾತ್ರ ಕಂಡುಬಂದಿದ್ದು, ಅವರು ಮನೆ ಕ್ವಾರಂಟೈನ್ನಲ್ಲಿದ್ದಾರೆ . ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಯಾರಿಗೂ ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಸಲಹೆ
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಮನೆ ಮಾಡಿರುವ ಆತಂಕವನ್ನು ತಪ್ಪಿಸಲು ಹಾಗೂ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಆರೋಗ್ಯ ಇಲಾಖೆ ಸಲಹೆಗಳನ್ನು ನೀಡಿದೆ.
ಜ್ವರ, ಕೆಮ್ಮು, ಎದೆನೋವು ಅಥವಾ ಉಸಿರಾಟದ ತೊಂದರೆ ಅನುಭವಿಸಿದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯಿರಿ. ಕೋವಿಡ್ ಮಾದರಿಗಳ ಪರೀಕ್ಷೆಗೆ ಸಹಕರಿಸಿ. ಐಎಚ್ಐಪಿ ಪೋರ್ಟಲ್ನ ಸಮುದಾಯ ಮೇಲ್ವಿಚಾರಣಾ ಮೂಲಕ ಕೋವಿಡ್ ತರಹದ ರೋಗಲಕ್ಷಣಗಳ ಹೆಚ್ಚಳವನ್ನು ವರದಿ ಮಾಡಿ. ಅನಾರೋಗ್ಯ ಪೀಡಿತ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲಿಯೇ ಇರಿಸಿ. ನೈರ್ಮಲ್ಯವನ್ನು ಕಾಪಾಡುವಂತೆ ಸಲಹೆ ನೀಡಿದೆ.
ಉತ್ತಮ ನೈರ್ಮಲ್ಯ ವಾತಾವರಣಕ್ಕಾಗಿ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು, ಸಾರ್ವಜನಿಕ ಪ್ರದೇಶಗಳನ್ನು ಸ್ವಚ್ಚವಾಗಿಡಿ. ಆರೋಗ್ಯ ಸಲಹೆಗಾಗಿ ಉಚಿತ ಸಹಾಯವಾಣಿ ಸಂಖ್ಯೆ 1800 425 8330 ಗೆ ಕರೆ ಮಾಡಿ ಹಾಗೂ ರೋಗಿಗಳ ತುರ್ತು ಸಂಚಾರಕ್ಕಾಗಿ 108 ಗೆ ಕರೆ ಮಾಡಿ. ಹೆಚ್ಚಿನ ವಿವರಗಳಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗೆ https://hfwcom.karnataka.gov.in IL.B. ಭೇಟಿ ನೀಡಬಹುದು ಎಂದು ಆರೋಗ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.