ಕೋರ್ಟ್ ಎದುರೇ ಮಹಿಳೆ ಮೇಲೆ ಬೀದಿ ನಾಯಿ ದಾಳಿ; ಆಸ್ಪತ್ರೆಗೆ ದಾಖಲು
ನ್ಯಾಯಾಲಯದ ಶೌಚಾಲಯದಿಂದ ಹೊರಬಂದ ಮಹಿಳೆಗೆ ಇದ್ದಕ್ಕಿದ್ದಂತೆ ಬೀದಿ ನಾಯಿ ಎರಗಿ, ಅವರ ಮುಖಕ್ಕೆ ತೀವ್ರ ಕಚ್ಚಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.;
ಸಾಂದರ್ಭಿಕ ಚಿತ್ರ
ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರ ಮೇಲೆ ಬೀದಿ ನಾಯಿ ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.
ತಿಪಟೂರು ತಾಲ್ಲೂಕಿನ ಬೀರಸಂದ್ರ ಗ್ರಾಮದ ನಿವಾಸಿ ಗಂಗೂಬಾಯಿ (35) ಅವರು ಕುಟುಂಬ ಕಲಹದ ಪ್ರಕರಣವೊಂದರಲ್ಲಿ ಹಾಜರಾಗಲು ನ್ಯಾಯಾಲಯಕ್ಕೆ ಬಂದಿದ್ದರು. ಶೌಚಾಲಯದಿಂದ ಹೊರಬಂದ ಕೂಡಲೇ ಬೀದಿ ನಾಯಿ ಎರಗಿ, ಅವರ ಮುಖಕ್ಕೆ ತೀವ್ರವಾಗಿ ಕಚ್ಚಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.
ಮಹಿಳೆಯ ಕಿರುಚಾಟ ಕೇಳಿದ ಸ್ಥಳೀಯರು ನೆರವಿಗೆ ಧಾವಿಸಿ ನಾಯಿಯ ಹಿಡಿತದಿಂದ ಗಂಗೂಬಾಯಿ ಅವರನ್ನು ರಕ್ಷಿಸಿದರು. ಕೋಪಗೊಂಡ ಸಾರ್ವಜನಿಕರು ನಂತರ ಆ ನಾಯಿಯನ್ನು ಬೆನ್ನಟ್ಟಿ ಕೊಂದಿದ್ದಾರೆ. ಗಾಯಗೊಂಡ ಮಹಿಳೆಯನ್ನು ಮೊದಲು ಗುಬ್ಬಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ವೃದ್ಧರೊಬ್ಬರು ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟಿದ್ದರು. ಬೆಂಗಳೂರು ವಿಶ್ವವಿದ್ಯಾಲಯ ಆವರಣ, ಚಿಕ್ಕಬಳ್ಳಾಪುರ, ಕೊಪ್ಪಳದಲ್ಲೂ ಬೀದಿ ನಾಯಿಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದ ಘಟನೆಗಳು ನಡೆದಿದ್ದವು.
ಬೀದಿನಾಯಿಗಳ ಹಾವಳಿ ನಿಯಂತ್ರಿಸಲು ಸುಪ್ರೀಂಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಇದಕ್ಕೂ ಮುಂಚೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಾಯಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಿತ್ತು. ವಿಧಾನಸಭೆಯಲ್ಲಿ ಬೀಡು ಬಿಟ್ಟಿರುವ ಶ್ವಾನಗಳಿಗೆ ಪ್ರತ್ಯೇಕ ಆಶ್ರಯ ಕಲ್ಪಿಸುವ ಕುರಿತು ಈಚೆಗೆ ನಿರ್ಧರಿಸಲಾಗಿದೆ. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ಪರಿಷತ್ ಸಭಾಪತಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಪಾಲಿಕೆ ಅಧಿಕಾರಿಗಳು ಹಾಗೂ ವಿಧಾನಸೌದ ಡಿಜಿಪಿ ಜೊತೆ ಹಲವು ತಿಂಗಳಿಂದ ಸಭೆಗಳನ್ನು ನಡೆಸಿದ್ದು, ಇದೀಗ ಅಂತಿಮವಾಗಿ ನಾಯಿಗಳಿಗೆ ವಿಧಾನಸೌಧ ಆವರಣದಲ್ಲೇ ಆಶ್ರಯ ಕಲ್ಪಿಸುವ ತೀರ್ಮಾನಕ್ಕೆ ಬಂದಿದ್ದಾರೆ.