ವಕ್ಫ್ ಆಸ್ತಿ ನೋಟಿಸ್ ವಿವಾದ | ಹಾವೇರಿಯ ಕಡಕೋಳ ಗ್ರಾಮದಲ್ಲಿ ಕಲ್ಲುತೂರಾಟ; 15 ಮಂದಿ ಪೊಲೀಸ್ ವಶಕ್ಕೆ
ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು ಕಡಕೋಳ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು.;
ವಿಜಯಪುರ, ಧಾರವಾಡ, ಕಲಬುರಗಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ಆಸ್ತಿ ವಿವಾದ ರೈತರನ್ನು ತೀವ್ರ ಆತಂಕಕ್ಕೆ ದೂಡಿದೆ. ವಕ್ಫ್ ಆಸ್ತಿ ನೋಟಿಸ್ ಗದ್ದಲ ಇದೀಗ ಹಾವೇರಿ ಜಿಲ್ಲೆಗೂ ಕಾಲಿಟ್ಟಿದೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಡಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ಉದ್ರಿಕ್ತರ ಗುಂಪು ಮುಸ್ಲಿಮರ ಮನೆಗಳ ಮೇಲೆ ಕಲ್ಲುತೂರಾಟ ನಡೆಸಿದೆ. ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ವಕ್ಫ್ ಬೋರ್ಡ್ ಹೆಸರಿನಲ್ಲಿ ಖಾತೆ ಇಂಡೀಕರಣಕ್ಕೆ ವಿರೋಧ ವ್ಯಕ್ತಪಡಿಸಿದ್ದು, ವಾಸವಿರುವ ಮನೆಗಳನ್ನು ಖಾಲಿ ಮಾಡಿಸಬಹುದು ಎಂಬ ಭೀತಿಯಿಂದ ಉದ್ರಿಕ್ತರ ಗುಂಪು ಈ ಕೃತ್ಯ ಎಸಗಿದೆ. ಘಟನೆಯಲ್ಲಿ ಮೊಹಮ್ಮದ್ ರಫಿ ಎಂಬುವರ ಮನೆಗೆ ಹಾನಿಯಾಗಿದ್ದು, ಬೈಕ್ ಜಖಂಗೊಳಿಸಲಾಗಿದೆ.
ಕಲ್ಲು ತೂರಾಟದಿಂದ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ಅವರು ಕಡಕೋಳ ಗ್ರಾಮಕ್ಕೆ ಆಗಮಿಸಿ ಗ್ರಾಮಸ್ಥರ ಮನವೊಲಿಕೆಗೆ ಯತ್ನಿಸಿದರು. ಕಲ್ಲುತೂರಾಟ ನಡೆಸಿದವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ಎಸ್ಪಿ ಅಂಶುಕುಮಾರ್ ಅವರು, ಗ್ರಾಮದ ಕೆಲವರ ಮನೆ ಮೇಲೆ ಕಲ್ಲು ತೂರಾಟ ನಡೆದಿರುವ ಕುರಿತು ಬುಧವಾರ ಸಂಜೆ 7.30ಕ್ಕೆ ಮಾಹಿತಿ ಬಂದಿತು. ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿ ತಹಬದಿಗೆ ತಂದಿದ್ದೇವೆ. ಕಲ್ಲುತೂರಾಟದಲ್ಲಿ ಐವರಿಗೆ ಗಾಯಗಳಾಗಿವೆ. ಆದರೆ, ಘಟನೆಗೆ ಸಂಬಂಧಿಸಿ ದೂರು ಕೊಡಲು ಯಾರೂ ಮುಂದೆ ಬರುತ್ತಿಲ್ಲ. ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಹಲ್ಲೆಗೊಳಗಾದವರಿಂದ ಘಟನೆಯ ಮಾಹಿತಿ ಪಡೆದಿದ್ದು, ಒಟ್ಟು 15 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗ್ರಾಮದಲ್ಲಿ ಭದ್ರತೆಗೆ 4 ಕೆಎಸ್ಆರ್ಪಿ ತುಕಡಿ, 200 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಗ್ರಾಮದಲ್ಲಿ ಪೊಲೀಸರು ಪಥ ಸಂಚಲನ ನಡೆಸಿ, ಜನರಿಗೆ ಧೈರ್ಯ ತುಂಬಿದ್ದಾರೆ.
ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ಮಾತನಾಡಿ, ಗ್ರಾಮದಲ್ಲಿ ಗರಡಿ ಮನೆಗೆ ಸಂಬಂಧಿಸಿ ಗೊಂದಲ ಇತ್ತು. ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವಕ್ಫ್ ಆಸ್ತಿ ನೋಟಿಸ್ ನೀಡುತ್ತಿರುವ ಸುದ್ದಿ ತಿಳಿದು ಜನರು ಗಾಬರಿಗೊಂಡಿದ್ದಾರೆ. ಗ್ರಾಮದ ಗರಡಿಮನೆಗೂ ವಕ್ಫ್ ಆಸ್ತಿ ಎಂದು ನಮೂದಿಸುತ್ತಾರೆಂಬ ಭಯದಲ್ಲಿ ಕಲ್ಲುತೂರಾಟ ನಡೆಸಿದ್ದಾರೆ ಎಂದು ಹೇಳಿದರು.
ಕಡಕೋಳದಲ್ಲಿ ಕೇವಲ ಮೂರು ವಕ್ಫ್ ಆಸ್ತಿಗಳು ಮಾತ್ರ ಇವೆ ಎಂದು ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ಸ್ಪಷ್ಟಪಡಿಸಿದರು.