ಪೊಲೀಸರಿಂದಲೇ ಕಲ್ಲು ತೂರಾಟ; ರಾಜ್ಯ ಸರ್ಕಾರದ ಕ್ಷಮೆಗೆ ಪಂಚಮಸಾಲಿ ಶ್ರೀ ಆಗ್ರಹ

ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ, ಕಲ್ಲು ತೂರಾಟ ಮಾಡಿರುವ ಪೊಲೀಸರ ಕೃತ್ಯಕ್ಕೆ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದ್ದಾರೆ.;

Update: 2024-12-11 14:48 GMT

ಬೆಳಗಾವಿಯಲ್ಲಿ 2ಎ ಮೀಸಲಾತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಪಂಚಮಸಾಲಿ ಸಮುದಾಯದವರ ಮೇಲೆ ಪೊಲೀಸರೇ ಕಲ್ಲುತೂರಾಟ ನಡೆಸಿದ್ದಾರೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರೇ ಮಫ್ತಿಯಲ್ಲಿ ಬಂದು ಪ್ರತಿಭಟನಾಕಾರರ ಮೇಲೆ ಕಲ್ಲೂತೂರಾಟ ನಡೆಸಿದ್ದಾರೆ.ಇದರಿಂದ ಸಾಕಷ್ಟು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.

ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ ನಡೆಸಿ, ಕಲ್ಲು ತೂರಾಟ ಮಾಡಿರುವ ಪೊಲೀಸರ ಕೃತ್ಯಕ್ಕೆ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು. ಹಲ್ಲೆ ಮಾಡಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಕೀಲರು, ಮಹಿಳಾ ಹೋರಾಟಗಾರರ ಮೇಲೂ ಪೊಲೀಸರು ಹಲ್ಲೆ ನಡೆಸಿದ್ದಾರೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಲಿಂಗಾಯತ ಸಮುದಾಯದ ಮೇಲೆ ದೌರ್ಜನ್ಯ ನಡೆಯುತ್ತಿದೆ. 2ಎ ಮೀಸಲಾತಿ ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದಾರೆ.

ಪಂಚಮಸಾಲಿ ಹೋರಾಟಗಾರರ ಮೇಲೆ ಹಲ್ಲೆ ನಡೆಸಿದ ಮಾತ್ರಕ್ಕೆ ಪ್ರತಿಭಟನೆ ನಿಲ್ಲುವುದಿಲ್ಲ. ಡಿ.12 ರಂದು ರಾಜ್ಯಾದ್ಯಂತ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿ ಅಧಿವೇಶನದ ಅವಧಿಯಲ್ಲಿ ಹೋರಾಟದ ಕಾವು ತೀವ್ರಗೊಳಿಸಲಾಗುವುದು. ಹಿರೇಬಾಗೇವಾಡಿ ಟೋಲ್‌ ಬಂದ್‌ ಮಾಡಿಸಲಾಗುವುದು. ರಾಣಿ ಚನ್ನಮ್ಮ ಅವರಂತೆ ಕ್ರಾಂತಿ ಮಾಡಲಾಗುವುದು. ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ.

2ಎ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮುದಾಯಗಳ ಬೆಳಗಾವಿ ಅಧಿವೇಶನದಲ್ಲಿ ವೇಳೆ ಸುವರ್ಣ ವಿಧಾನಸೌಧಕ್ಕೆ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಮುತ್ತಿಗೆ ಹಾಕಲು ನಿರ್ಧರಿಸಿತ್ತು. ಆದರೆ, ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಬಳಿಕ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿತ್ತು.

ಪ್ರತಿಭಟನೆ ವೇಳೆ ಪಂಚಮಸಾಲಿ ಸಮುದಾಯದವರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ನಡೆಸಿದ್ದರು. ಈ ವೇಳೆ ಕಲ್ಲುತೂರಾಟವೂ ನಡೆದಿತ್ತು. ಘಟನೆಯಲ್ಲಿ ಹಲವು ಪ್ರತಿಭಟನಾಕಾರರು ಹಾಗೂ ಪೊಲೀಸರು ಗಾಯಗೊಂಡಿದ್ದರು.

ಕಲ್ಲುತೂರಾಟ ನಡೆಸಿದ ಆರೋಪದ ಮೇಲೆ ಹಿರೇಬಾಗೇವಾಡಿ ಪೊಲೀಸರು ಐವರ ವಿರುದ್ಧ ಎಫ್ಐಆರ್ ದಾಖಲಿಸಿ, 70 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Tags:    

Similar News