ಧರ್ಮಸ್ಥಳ ಪ್ರಕರಣ | ಸುಜಾತಾ ಭಟ್‌ಗೆ ರಕ್ಷಣೆ ಒದಗಿಸಲು ಎಸ್‌ಐಟಿಗೆ ಮಹಿಳಾ ಆಯೋಗ ಸೂಚನೆ

ಸುಜಾತಾ ಭಟ್ ಅವರನ್ನು ಕಳೆದ ಎರಡು ವಾರಗಳಿಂದ ಕೆಲ ಮಾಧ್ಯಮದವರು ನಿರಂತರ ಹಿಂಬಾಲಿಸಿ, ಹೇಳಿಕೆ ನೀಡುವಂತೆ ಒತ್ತಾಯಿಸಿವೆ. ಇದರಿಂದ ಮಾನಸಿಕವಾಗಿ ಕುಗ್ಗಿರುವ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಸ್ಐಟಿ ಮುಖ್ಯಸ್ಥರಿಗೆ ಮಹಿಳಾ ಆಯೋಗ ಪತ್ರ ಬರೆದಿದೆ.;

Update: 2025-08-29 06:45 GMT

ಧರ್ಮಸ್ಥಳದಿಂದ ತಮ್ಮ ಮಗಳು ಅನನ್ಯಾ ಭಟ್‌ ಕಾಣೆಯಾಗಿದ್ದಾಳೆ ಎಂದು ದೂರಿದ್ದ ಸುಜಾತಾ ಭಟ್ ಅವರಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು ವಿಶೇಷ ತನಿಖಾ ತಂಡಕ್ಕೆ ಸೂಚಿಸಿದ್ದಾರೆ.

ಸುಜಾತಾ ಭಟ್ ಅವರನ್ನು ಕಳೆದ ಎರಡು ವಾರಗಳಿಂದ ಕೆಲ ಮಾಧ್ಯಮದವರು ನಿರಂತರ ಹಿಂಬಾಲಿಸಿ, ಹೇಳಿಕೆ ನೀಡುವಂತೆ ಒತ್ತಾಯಿಸಿವೆ. ಇದರಿಂದ ಸುಜಾತಾ ಭಟ್‌ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಹಾಗಾಗಿ ಅವರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಎಸ್ಐಟಿ ಮುಖ್ಯಸ್ಥರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಲ ಮಾಧ್ಯಮಗಳು ಸುಜಾತಾ ಭಟ್ ತೇಜೋವಧೆ ಮಾಡುವ ರೀತಿಯಲ್ಲಿ ವರದಿ ಪ್ರಸಾರ ಮಾಡುತ್ತಿವೆ. ತಡರಾತ್ರಿ ಕೂಡ ಮನೆಗೆ ತೆರಳಿ ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಕಾರಿನಲ್ಲಿ ಕೂರಿಸಿಕೊಂಡು ವೈರುಧ್ಯಗಳಿಂದ ಕೂಡಿದ ಹೇಳಿಕೆ ಪಡೆದು ಪ್ರಸಾರ ಮಾಡಿವೆ ಎಂದು ಆರೋಪಿಸಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದೂರುದಾರರು ನಿರ್ಭೀತಿಯಿಂದ ಅಹವಾಲು ನೀಡಲು ಅವಕಾಶ ಕಲ್ಪಿಸಬೇಕು. ದೂರುದಾರರ ಮಾಹಿತಿಯನ್ನು ಗೌಪ್ಯವಾಗಿಟ್ಟು, ತಕ್ಷಣವೇ ಸುಜಾತಾ ಭಟ್ ಅವರಿಗೆ ಭದ್ರತೆ ಒದಗಿಸಬೇಕು.  ಅಹವಾಲು ಸಲ್ಲಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಎಸ್ಐಟಿಗೆ ಸೂಚಿಸಿದ್ದಾರೆ. ಅಲ್ಲದೇ ಈವರೆಗೆ ಧರ್ಮಸ್ಥಳ ಪ್ರಕರಣ ಕುರಿತಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಆಯೋಗ ಕೋರಿದೆ. 

Tags:    

Similar News