ರಾಜ್ಯ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಆಗಸ್ಟ್ 5 ರಿಂದ

ಸಾರಿಗೆ ನೌಕರರ ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.;

Update: 2025-07-16 04:40 GMT

ಸಾರಿಗೆ ನೌಕರರು ಸರ್ಕಾರಕ್ಕೆ ಮುಷ್ಕರದ ಎಚ್ಚರಿಕೆ ನೀಡಿದ್ದಾರೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ , ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ  ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಸರ್ಕಾರದ ವಿರುದ್ಧ ಅನಿರ್ದಿಷ್ಟಾವಧಿ ಮುಷ್ಕರಕ್ಕೆ  ಕರೆ ನೀಡಿದ್ದಾರೆ.

ಸಾರಿಗೆ ನೌಕರರ ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳ ಈಡೇರಿಕೆಗಾಗಿ ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಇಂದು (ಬುಧವಾರ) ಮಧ್ಯಾಹ್ನ 3 ಗಂಟೆಗೆ ಜಂಟಿ ಕ್ರಿಯಾ ಸಮಿತಿಯು ಮಹತ್ವದ ಸುದ್ದಿಗೋಷ್ಠಿ ನಡೆಸಿ, ಮುಷ್ಕರದ ಕುರಿತು ವಿವರವಾದ ಮಾಹಿತಿ ನೀಡಲಿದೆ.

ಸರ್ಕಾರವು ಸಾರಿಗೆ ನೌಕರರ ಮನವಿಗೆ ಸ್ಪಂದಿಸುತ್ತಿಲ್ಲ, ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಈ ಮುಷ್ಕರದ ನಿರ್ಧಾರಕ್ಕೆ ಬಂದಿದೆ. ಈ ಕುರಿತು ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾರದೊಳಗೆ ಸಭೆ ಕರೆಯುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಯಾವುದೇ ಚರ್ಚೆಗೆ ಕರೆ ಬಂದಿಲ್ಲ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ಆಗಸ್ಟ್ 5 ರಿಂದ ರಾಜ್ಯದಾದ್ಯಂತ ಸಾರಿಗೆ ಬಸ್ ಸೇವೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತೇವೆ ಎಂದು ಜಂಟಿ ಕ್ರಿಯಾ ಸಮಿತಿಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಬೇಡಿಕೆಗಳೇನು?

ಕಳೆದ 38 ತಿಂಗಳಿಂದ ಬಾಕಿಯಿರುವ ವೇತನವನ್ನು ತಕ್ಷಣವೇ ಪಾವತಿಸಬೇಕು.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ, ಅವರಿಗೆ ಸರಿಸಮಾನ ವೇತನ ನೀಡಬೇಕು.

ಸಾರಿಗೆ ನಿಗಮಗಳ ಖಾಸಗೀಕರಣ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಬೇಕು, ಕಾರ್ಮಿಕರ ಕಿರುಕುಳ ನಿಲ್ಲಿಸಬೇಕು.

ಎಲ್ಲಾ ನೌಕರರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಯ ಸೌಲಭ್ಯವನ್ನು ಒದಗಿಸಬೇಕು.

ನೌಕರರಿಗೆ ಅವರ ಹಕ್ಕಿನ ರಜೆಗಳನ್ನು ನೀಡಬೇಕು.

ಜನವರಿ 1, 2024 ರಿಂದ ಹೊಸ ವೇತನವನ್ನು ಜಾರಿಗೊಳಿಸಬೇಕು.

ಕಾರ್ಮಿಕರಿಗೆ ಉತ್ತಮ ಕ್ಯಾಂಟೀನ್ ಸೌಲಭ್ಯವನ್ನು ಕಲ್ಪಿಸಬೇಕು.

2020 ಮತ್ತು 2021 ರ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ ಎಲ್ಲಾ ಕಾನೂನು ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು.

ವಿದ್ಯುತ್ ಬಸ್‌ಗಳ ಚಾಲನೆಗೆ ಸಂಸ್ಥೆಯ ಚಾಲಕರನ್ನೇ ನಿಯೋಜಿಸಬೇಕು.

 ವಿದ್ಯುತ್ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ಧತಿಯನ್ನು ರದ್ದುಗೊಳಿಸಬೇಕು.

ಸಾರಿಗೆ ನೌಕರರು ‘ಶಕ್ತಿ ಯೋಜನೆ’ಯಂತಹ ಯಶಸ್ವಿ ಯೋಜನೆಗಳ ಮೂಲಕ ಸರ್ಕಾರಕ್ಕೆ ಆದಾಯ ಮತ್ತು ಜನಮನ್ನಣೆ ತಂದುಕೊಟ್ಟಿದ್ದಾರೆ. ಆದರೆ, ಅವರ ಬೇಡಿಕೆಗಳನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಕಾರ್ಮಿಕ ಮುಖಂಡರು ಆರೋಪಿಸಿದ್ದಾರೆ. 

Tags:    

Similar News