Bangalore Stampede |ಕಾಲ್ತುಳಿತ ಘಟನೆ; ಹೇಳಿಕೆ ದಾಖಲಿಸಲು ಪ್ರತ್ಯಕ್ಷ ಸಾಕ್ಷಿಗಳ ಜಿಲ್ಲಾಧಿಕಾರಿ ಮನವಿ
ಕಾಲ್ತುಳಿತ ಘಟನೆಗೆ ಸಂಬಂಧಿಸಿದ ಮಾಹಿತಿ ಅಥವಾ ಪ್ರತ್ಯಕ್ಷವಾಗಿ ಘಟನೆ ವೀಕ್ಷಿಸಿದ ಸಾರ್ವಜನಿಕರು, ಮಾಧ್ಯಮದವರು ವಿಚಾರಣಾಧಿಕಾರಿಗಳ ಸಮಕ್ಷಮದಲ್ಲಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆ ನೀಡಲು ಅವಕಾಶ ಕಲ್ಪಿಸಲಾಗಿದೆ.;
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ
ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಜಿಲ್ಲಾಧಿಕಾರಿ ಜಗದೀಶ್.ಜಿ ಅವರು ತನಿಖೆ ನಡೆಸುತ್ತಿದ್ದು, ಈ ಕುರಿತು ಮಾಹಿತಿ ಇರುವವರು ಅಥವಾ ಪ್ರತ್ಯಕ್ಷದರ್ಶಿಗಳು ತನಿಖಾಧಿಕಾರಿಗಳ ಮುಂದೆ ಸಾಕ್ಷ್ಯ ನೀಡಬಹುದು ಎಂದು ತಿಳಿಸಿದ್ದಾರೆ.
ಜೂನ್ 4ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕ್ರಿಕೆಟ್ ತಂಡದ ವಿಜಯೋತ್ಸವದ ಅಭಿನಂದನಾ ಸಮಾರಂಭದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11ಮಂದಿ ಪ್ರಾಣ ಕಳೆದುಕೊಂಡಿದ್ದರು. ಘಟನೆ ಕುರಿತಂತೆ ಮ್ಯಾಜಿಸ್ಟ್ರೇಟ್ ತನಿಖೆ ಕೈಗೊಂಡಿರುವ ನಗರ ಜಿಲ್ಲಾಧಿಕಾರಿ ಜಗದೀಶ್ ಅವರು ಈಗಾಗಲೇ ಹಲವರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಈಗ ಘಟನೆಗೆ ಸಂಬಂಧಿಸಿದ ಮಾಹಿತಿ ಅಥವಾ ಪ್ರತ್ಯಕ್ಷವಾಗಿ ನೋಡಿದ ಸಾರ್ವಜನಿಕರು, ಮಾಧ್ಯಮದವರು ವಿಚಾರಣಾಧಿಕಾರಿಗಳ ಸಮಕ್ಷಮದಲ್ಲಿ ಹಾಜರಾಗಿ ಸಾಕ್ಷ್ಯ ಅಥವಾ ಹೇಳಿಕೆ ನೀಡಬಹುದು ಎಂದು ತಿಳಿಸಿದ್ದಾರೆ.
ತಮ್ಮ ಹೇಳಿಕೆ ದಾಖಲಿಸಲು ಇಚ್ಛಿಸುವವರು ಜೂನ್ 27 ರಂದು ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣ, ಜಿಲ್ಲಾಧಿಕಾರಿಗಳ ಕಚೇರಿ, ಕೆ.ಜಿ.ರಸ್ತೆ, ಬೆಂಗಳೂರು ನಗರ ಜಿಲ್ಲೆ-09 ಇಲ್ಲಿ ತಮ್ಮ ಲಿಖಿತ ರೂಪದ ಪ್ರಮಾಣಿತ ಅಫಿಡವಿಟ್ ನ ಎರಡು ಪ್ರತಿಗಳೊಂದಿಗೆ ಖುದ್ದು ಹಾಜರಾಗಿ ಹೇಳಿಕೆ ದಾಖಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದುರಂತಕ್ಕೆ ಕಾರಣಗಳೇನು?
ಚಿನ್ನಸ್ವಾಮಿ ಕ್ರೀಡಾಂಗಣದ ಸಾಮರ್ಥ್ಯ 35,000 ಮಂದಿಗೆ ಸೀಮಿತವಾಗಿದ್ದರೂ, ಸುಮಾರು 2-3 ಲಕ್ಷ ಜನರು ಸೇರಿದ್ದರು. ಈ ಅಗಾಧ ಜನಸಂದಣಿ ನಿರ್ವಹಿಸಲು ಯಾವುದೇ ಪೂರ್ವ ತಯಾರಿ ನಡೆಸಿರಲಿಲ್ಲ. ಸಾಕಷ್ಟು ಭದ್ರತಾ ಸಿಬ್ಬಂದಿ, ಬ್ಯಾರಿಕೇಡ್ ಹಾಗೂ ತುರ್ತು ನಿರ್ಗಮನ ವ್ಯವಸ್ಥೆ ಇರದಿದ್ದೇ ಕಾಲ್ತುಳಿತಕ್ಕೆ ಕಾರಣವಾಗಿತ್ತು.
ಗೃಹ ಸಚಿವರು ಸಾರ್ವಜನಿಕ ಮೆರವಣಿಗೆ ರದ್ದುಪಡಿಸಿದ್ದರೂ ಆರ್ಸಿಬಿ ಆಡಳಿತ ಮಂಡಳಿಯು ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕ ಮೆರವಣಿಗೆ ಇದೆ ಎಂದು ಟ್ವೀಟ್ ಮಾಡಿದ್ದರು. ಇದು ಜನರಲ್ಲಿ ಗೊಂದಲ ಉಂಟು ಮಾಡಿ ಜನಸಂದಣಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಆಯೋಜಕರ ಗೊಂದಲವೇ ದುರಂತಕ್ಕೆ ನೇರ ಕಾರಣ ಎಂಬ ಟೀಕೆ ವ್ಯಕ್ತವಾಗಿತ್ತು.