ಅಮೇರಿಕದಲ್ಲಿ ನಡೆಯುವ ಶಾಸಕಾಂಗ ಶೃಂಗಸಭೆಗೆ ಸಭಾಪತಿ ಬಸವರಾಜ ಹೊರಟ್ಟಿ
ಅರ್ಥಿಕ ಸ್ವಾಯತ್ತತೆ, ಜಾಗತಿಕ ಪ್ರಸ್ತುತ ರಾಜಕೀಯ ವಿದ್ಯಾಮಾನಗಳಲ್ಲಿ ಯುವಕರ ಪಾತ್ರ, ಆಧುನಿಕ ತಂತ್ರಜ್ಞಾನದ ಆಧಾರಿತ ಬೆಳವಣಿಗೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ ಎಂದು ಸಭಾಪತಿ ಹೊರಟ್ಟಿ ತಿಳಿಸಿದರು.;
ಅಮೆರಿಕದ ಬೋಸ್ಟನ್ ನಗರದಲ್ಲಿ ಆಗಸ್ಟ್ 4 ರಿಂದ 6ರವರೆಗೆ ʼಶಾಸಕಾಂಗ ಶೃಂಗಸಭೆ 2025ʼ ನಡೆಯಲಿದ್ದು, ಅಲ್ಲಿ ನಡೆಸಲಾಗುವ ಚರ್ಚೆಗಳು ಮತ್ತು ವಿಚಾರ ಮಂಥನಗಳ ಅತ್ಯಮೂಲ್ಯ ವಿಷಯಗಳನ್ನು ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಶಾಸನ ಸಭೆಗಳಲ್ಲಿ ಧನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಮೂರು ದಿನಗಳ ಶೃಂಗಸಭೆಯಲ್ಲಿ ಪ್ರಜಾತಂತ್ರ ಗಟ್ಟಿಗೊಳಿಸುವಿಕೆಯಲ್ಲಿ ಶಾಸನ ಸಭೆಗಳ ಪಾತ್ರ, ಪಕ್ಷಾತೀತ ನಿರ್ವಹಣೆ, ಅರ್ಥಿಕ ಸ್ವಾಯತ್ತತೆ, ಜಾಗತಿಕ ಪ್ರಸ್ತುತ ರಾಜಕೀಯ ವಿದ್ಯಾಮಾನಗಳಲ್ಲಿ ಯುವಕರ ಪಾತ್ರ, ಆಧುನಿಕ ತಂತ್ರಜ್ಞಾನದ ಆಧಾರಿತ ಬೆಳವಣಿಗೆಗಳ ಬಗ್ಗೆ ಚರ್ಚೆಗಳು ನಡೆಯಲಿವೆ.
ʼರಾಜ್ಯ ಶಾಸಕರ ರಾಷ್ಟ್ರೀಯ ಸಮಾವೇಶʼ ಹಾಗೂ ʼರಾಷ್ಟ್ರೀಯ ಶಾಸಕರ ಸಮಾವೇಶʼ ಭಾರತ ಸಂಸ್ಥೆಗಳ ಆಶ್ರಯದಲ್ಲಿ ನಡೆಯುವ ಈ ಶೃಂಗ ಸಭೆಯಲ್ಲಿ ದೇಶದ ಸಂಸದರು, ವಿವಿಧ ರಾಜ್ಯಗಳ ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರು, ಸಚಿವರುಗಳು, ರಾಜಕೀಯ ತಜ್ಞರು, ನೀತಿ ನಿರೂಪಕರು ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಶಾಸಕಾಂಗ ಶೃಂಗಸಭೆಯಲ್ಲಿ ಉಪಸಭಾಪತಿ ಎಂ.ಕೆ. ಪ್ರಾಣೇಶ್, ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು, ಮುಖ್ಯ ಸಚೇತಕ ಸಲೀಂ ಅಹ್ಮದ್, ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಬಿಲ್ಕೀಸ್ ಬಾನು, ಹೇಮಲತಾ ನಾಯಕ್ ಮತ್ತು ಮಂಜುನಾಥ ಭಂಡಾರಿ ಪಾಲ್ಗೊಳ್ಳಲಿದ್ದಾರೆ.