ಒಬಿಸಿ ಭಾಗೀದಾರಿ ನ್ಯಾಯ್ ಸಮ್ಮೇಳನ ಉದ್ಘಾಟಿಸಿದ ಸಿದ್ದರಾಮಯ್ಯ: ಡಿ.ಕೆ. ಶಿವಕುಮಾರ್‌ಗೆ ಮತ್ತೆ ಪರೋಕ್ಷ ಸಂದೇಶ?

ಮಹಾತ್ಮ ಗಾಂಧೀಜೀಯವರಿಂದ ಹಿಡಿದು ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಪಕ್ಷವು ಯಾವಾಗಲೂ ಶೋಷಿತರ ಪರವಾಗಿ ನಿಂತಿದೆ. ನ್ಯಾಯವು ಕೇವಲ ಘೋಷಣೆಯಲ್ಲ, ಇದು ಸಂವಿಧಾನದ ಭರವಸೆಯಾಗಿದೆ ಎಂದು ರಾಹುಲ್‌ ಗುಣಗಾನ ಮಾಡಿದರು.;

Update: 2025-07-25 11:54 GMT

ಎಐಸಿಸಿಯ ಹಿಂದುಳಿದ ವರ್ಗಗಳ ವಿಭಾಗ ದೆಹಲಿಯಲ್ಲಿ ಆಯೋಜಿಸಿರುವ "ಭಾಗೀದಾರಿ ನ್ಯಾಯ್ ಸಮ್ಮೇಳನ" ದ ಉದ್ಘಾಟನೆಯನ್ನು ಕಾಂಗ್ರೆಸ್‌ನ AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಕಾಂಗ್ರೆಸ್‌ನ ಒಬಿಸಿ ಸಮುದಾಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ಹಾಗೂ ಅದಕ್ಕಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರಯತ್ನ ನಡೆಸುತ್ತಿರುವ  ಬೆನ್ನಿಗೇ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಯೋಜನೆಯಂತೆ ಕಾಂಗ್ರೆಸ್‌ನ ಒಬಿಸಿ ಮತಬ್ಯಾಂಕನ್ನು ಭದ್ರಪಡಿಸುವ ಒಬಿಸಿ ಸಲಹಾಮಂಡಳಿಯ ಮೊದಲಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್‌ನ ಮೂರು ರಾಜ್ಯಗಳಲ್ಲಿ ಸಿದ್ದರಾಮಯ್ಯ ಅವರು ಮಾತ್ರ ಒಬಿಸಿ ಸಮುದಾಯದಿಂದ ಬಂದ ಮುಖ್ಯಮಂತ್ರಿಯಾಗಿರುವುದು ಸಹಜವಾಗಿ ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿಸಿದೆ.

ಆ ಮೂಲಕ ತನ್ನʼಒಬಿಸಿʼ ಸಾಮರ್ಥ್ಯವನ್ನು ಹಾಗೂ ರಾಹುಲ್‌ ಗಾಂಧಿ ಆಶಯದಂತೆ ಒಬಿಸಿ ಮತಬ್ಯಾಂಕ್‌ ಬಲಪಡಿಸುವ ಅರ್ಹತೆಯನ್ನೂ ಪ್ರದರ್ಶಿಸಿದ್ದರು. ಈಗ ದೆಹಲಿಯಲ್ಲಿ ನಡೆದ ಹಿಂದುಳಿದ ವರ್ಗಗಳ  "ಭಾಗೀದಾರಿ ನ್ಯಾಯ್ ಸಮ್ಮೇಳನ" ದ ಉದ್ಘಾಟನೆಯನ್ನೂ ಎಐಸಿಸಿ ಅಧ್ಯಕ್ಷ ಖರ್ಗೆಯವರ ಜತೆ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಒಂದು ರೀತಿಯ ಪರೋಕ್ಷ ಸಂದೇಶ ರವಾನಿಸಿದಂತಾಗಿದೆ.

"ಈ ಭಾಗಿದಾರಿ ನ್ಯಾಯ ಸಮ್ಮೇಳನದಲ್ಲಿ ಭಾಗಿಯಾಗುತ್ತಿರುವುದು ನನಗೆ ಸಂತಸ ತಂದಿದೆ . ಈ ಸಮ್ಮೇಳನವು ನ್ಯಾಯ ಮತ್ತು ಸಮಾನತೆಗಾಗಿ ನಾವು ಮಾಡಿಕೊಂಡಿರುವ ಸಂಕಲ್ಪದ ಸಂಕೇತವಾಗಿದೆ.  ಇದು ಕೇವಲ ರಾಜಕೀಯ ಸಭೆಯಲ್ಲ. ಇದು ಭಾರತದ ಹಿಂದುಳಿದ ಮತ್ತು ಅಂಚಿನಲ್ಲಿರುವ ಸಮುದಾಯಗಳ ಘನತೆ, ಭಾಗವಹಿಸುವಿಕೆ ಮತ್ತು ನ್ಯಾಯಯುತ ಪ್ರಾತಿನಿಧ್ಯಕ್ಕಾಗಿ ಮಾಡಿರುವ ಎಚ್ಚರಿಕೆಯ ಮತ್ತು ಒಗ್ಗಟ್ಟಿನ ಕರೆಯಾಗಿದೆ," ಎಂದು ಸಿದ್ದರಾಮಯ್ಯ ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದ್ದಾರೆ.

ಡಾ. ಅಂಬೇಡ್ಕರ್ ಹೇಳಿದಂತೆ, “ನ್ಯಾಯವು ರಾಷ್ಟ್ರದ ಆತ್ಮವಾಗಿದೆ.” ಇಂದು ಆ ಆತ್ಮವು ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಕೂಗುತ್ತಿದೆ. ಈ ಸಮ್ಮೇಳನವು ನಮ್ಮ ಉತ್ತರವಾಗಿರುವುದಲ್ಲದೇ , ಎಲ್ಲ ಜಾತಿ-ವರ್ಗದವರಿಗೂ ಸಮಾನ ಭಾಗವಹಿಸುವಿಕೆಯ ಸ್ಥಾನ ಸಿಗುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂಬ ಪ್ರತಿಜ್ಞೆಯೂ ಹೌದು," ಎಂದ ಅವರು, " ಮಹಾತ್ಮ ಗಾಂಧೀಜೀಯವರಿಂದ ಹಿಡಿದು ರಾಹುಲ್ ಗಾಂಧಿಯವರಿಗೆ ಕಾಂಗ್ರೆಸ್ ಪಕ್ಷವು ಯಾವಾಗಲೂ ಶೋಷಿತರ ಪರವಾಗಿ ನಿಂತಿದೆ. ನ್ಯಾಯವು ಕೇವಲ ಘೋಷಣೆಯಲ್ಲ, ಇದು ಸಂವಿಧಾನದ ಭರವಸೆಯಾಗಿದೆ. ಮತ್ತು ಭಾಗಿದಾರಿಯು ಜನತಂತ್ರದ ಜೀವನಾಡಿಯಾಗಿದೆ," ಎಂದು ಹೇಳಿದ್ದಾರೆ. ಆ ಮೂಲಕ ರಾಹುಲ್‌ ಗಾಂಧಿಯವರನ್ನು ಹಾಡಿಹೊಗಳಿರುವುದು ರಾಜಕೀಯ ವಲಯದಲ್ಲಿ ಬೇರೆಯದೇ ವ್ಯಾಖ್ಯಾನಕ್ಕೆ ಕಾರಣವಾಗಿದೆ.

"ಸಾಮಾಜಿಕ ನ್ಯಾಯಕ್ಕಾಗಿ ಶ್ರೀ ರಾಹುಲ್ ಗಾಂಧಿಯವರು ಧೈರ್ಯ, ಸ್ಪಷ್ಟತೆ ಮತ್ತು ಸಹಾನುಭೂತಿಯಿಂದ ನಾಯಕತ್ವ ವಹಿಸಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇಂದಿನ ಭಾರತದಲ್ಲಿ,  ರಾಹುಲ್ ಗಾಂಧಿಯವರು ಮತ್ತು ಕಾಂಗ್ರೆಸ್ ಪಕ್ಷವು ಮಾತ್ರ ಹಿಂದುಳಿದ ವರ್ಗಗಳಿಗೆ ಮತ್ತು ಎಲ್ಲಾ ಅಂಚಿನಲ್ಲಿರುವವರಿಗೆ ನ್ಯಾಯ ನೀಡಲು ನೈತಿಕ ಬದ್ಧತೆ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿದೆ," ಎಂದೂ ತಮ್ಮ ಸಿಎಂ ಗಾದಿಯ ಬೆಂಬಲಕ್ಕಿರುವರೆನ್ನಲಾದ ರಾಹುಲ್‌ ಗಾಂಧಿ ಅವರನ್ನು ಶ್ಲಾಘಿಸಿದ್ದಾರೆ.


ಬಿಜೆಪಿ-ಆರ್‌ಎಸ್‌ಎಸ್‌ನಿಂದ ಹೊಸ ಡಾರ್ವಿನಿಸಂ: ಸಿದ್ದರಾಮಯ್ಯ

ಆರ್‌ಎಸ್‌ಎಸ್‌- ಬಿಜೆಪಿಯ ಮನುವಾದಿ ದೃಷ್ಟಿಕೋನವು ಸಾಮಾಜಿಕ ಡಾರ್ವಿನಿಸಂನ ಮಾರುವೇಷದಲ್ಲಿದೆ. ಅಲ್ಲಿ ಕೇವಲ ಪ್ರಬಲರು ಮಾತ್ರ ಘನತೆಗೆ ಅರ್ಹರಾಗಿರುತ್ತಾರೆ. ಆದರೆ ನಮ್ಮ ಸಂವಿಧಾನವು ಬಲಿಷ್ಠರ ಬದುಕಿಗೆ ಭರವಸೆ ನೀಡುವುದಿಲ್ಲ, ಬದಲಿಗೆ ದುರ್ಬಲರಿಗೆ ನ್ಯಾಯ ಹಾಗೂ ಭರವಸೆ ನೀಡುತ್ತದೆ. ಸಂವಿಧಾನದ ರಕ್ಷಣೆಯ ಮೂಲಕ ಮಾತ್ರ ನಾವು ನಿಜವಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಬಹುದು. ಸ್ವತಂತ್ರ ಭಾರತದಲ್ಲಿ, ನಮ್ಮ ಸಂವಿಧಾನವೇ ನಮ್ಮ ಧರ್ಮ. ಇದು ಮಾತ್ರ ನಮ್ಮನ್ನು ಮನು ಧರ್ಮದ ಕ್ರೂರ ಕೈಗಳಿಂದ ರಕ್ಷಿಸುತ್ತದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

"ಗೋಲ್ವಾಲ್ಕರ್‌ರಿಂದ ಜಾತಿ-ಆಧಾರಿತ ಸಕಾರಾತ್ಮಕ ಕ್ರಿಯೆಯನ್ನು ತಿರಸ್ಕರಿಸಿದ್ದರಿಂದ ಹಿಡಿದು RSS ಮಂಡಲ್‌ ಅನ್ನು “ಜಾತಿ ಯುದ್ಧ” ಎಂದು ಕರೆಯುವವರೆಗೆ ಅವರ ಸಿದ್ಧಾಂತವು ಮನುವಾದಿ ಮತ್ತು ಸಾಮಾಜಿಕ ಡಾರ್ವಿನಿಸ್ಟ್ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಅಲ್ಲಿ ಕೇವಲ ಪ್ರಬಲರಿಗೆ ಮಾತ್ರ ಬದುಕುವ ಹಕ್ಕಿದೆ. ಇಂದಿಗೂ, ಮೋಹನ್ ಭಾಗವತ್ ಮತ್ತು BJP ನಾಯಕರು ಮೀಸಲಾತಿಯ ಕಾನೂನುಬದ್ಧತೆ ಮತ್ತು ಅವಧಿಯನ್ನು ಪ್ರಶ್ನಿಸುತ್ತಾರೆ, ಇದು ಸಾಮಾಜಿಕ ನ್ಯಾಯದ ಬಗ್ಗೆ ಅವರ ಮೂಲಭೂತ ಅಸ್ವಸ್ಥತೆಯನ್ನು ಮತ್ತು ಹಿಂದುಳಿದ ವರ್ಗಗಳಿಗೆ ಸಂವಿಧಾನಿಕ ರಕ್ಷಣೆಗಳನ್ನು ಕಿತ್ತುಕೊಳ್ಳುವ ಉದ್ದೇಶವನ್ನು ಸಾಬೀತುಪಡಿಸುತ್ತದೆ," ಎಂದವರು ಹೇಳಿದ್ದಾರೆ.

ಮೋದಿ ಎರವಲು ಪಡೆದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್’: ಸಿದ್ದರಾಮಯ್ಯ

ಮಹಾತ್ಮ ಗಾಂಧಿಯವರ ಸರ್ವೋದಯ ಮತ್ತು ಕುವೆಂಪುರವರ “ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು” ನಿಜವಾದ ಒಳಗೊಳ್ಳುವಿಕೆಯನ್ನು ಪ್ರೇರೇಪಿಸಿತು. ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಗಾಗಿ ಪದಗಳನ್ನು ಎರವಲು ಪಡೆದಿದ್ದಾರೆ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ, " ಈ ಪರಂಪರೆಯು ಕಾಂಗ್ರೆಸ್ ಚಳವಳಿಯ ನೈತಿಕ ಪರಂಪರೆಯಾಗಿದೆಯೇ ಹೊರತು ಈ ಮೌಲ್ಯಗಳಿಗೆ ವಿರುದ್ಧವಾಗಿರುವ BJP-RSS ನದ್ದಲ್ಲ. BJP ವರ್ಣಾಶ್ರಮ ಮತ್ತು ಮನುಸ್ಮೃತಿಯನ್ನು ವೈಭವೀಕರಿಸುತ್ತಿರುವಾಗ, ನಾವು ಬುದ್ಧ, ಬಸವಣ್ಣ, ಮಹಾತ್ಮ ಫುಲೆ, ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ನಾರಾಯಣ ಗುರು, ಬಾಬಾ ಸಾಹೇಬ್ ಅಂಬೇಡ್ಕರ್, ಪೆರಿಯಾರ್ ಮತ್ತು ಇತರರಿಂದ ಸ್ಫೂರ್ತಿಯನ್ನು ಪಡೆಯುತ್ತೇವೆ," ಎಂದು ಹೇಳಿದರು.


ಡಾ. ಅಂಬೇಡ್ಕರ್ ಅವರ ನಾಯಕತ್ವದಡಿಯಲ್ಲಿ ಸಂವಿಧಾನವು ಪರಿಚ್ಛೇಧ 16(4), 46, ಮತ್ತು 340 ರಡಿ ರಾಜ್ಯವು ಸಾಮಾಜಿಕ ಅನ್ಯಾಯವನ್ನು ಸರಿಪಡಿಸಲು ಸಕ್ರಿಯವಾಗಿ ಕೆಲಸ ಮಾಡುವುದನ್ನು ಖಾತರಿಪಡಿಸಿತು. ಸ್ಟೇಟ್ ಆಫ್ ಮದ್ರಾಸ್ ವಿರುದ್ಧ ಚಂಪಕಂ ದೊರೈರಾಜನ್ (1951) ರಲ್ಲಿ ಸುಪ್ರೀಂ ಕೋರ್ಟ್ ಜಾತಿ-ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸಿದಾಗ, ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ವಿರೋಧದ ಹೊರತಾಗಿಯೂ, ಭಾರತದ ಮೊದಲ ಸಂವಿಧಾನಿಕ ತಿದ್ದುಪಡಿಯೊಂದಿಗೆ ಪರಿಚ್ಛೇಧ 15(4) ಅನ್ನು OBC, SC ಮತ್ತು ST ಗಳಿಗೆ ಮೀಸಲಾತಿಯನ್ನು ರಕ್ಷಿಸಲು ಜಾರಿಗೊಳಿಸಿದರು ಎಂದು ಸಿದ್ದರಾಮಯ್ಯ ವಿವರಿಸಿದರು.

ಬಿಜೆಪಿಯಿಂದ  ಜಾತಿ ಗಣತಿ ವರದಿ ಮರೆಮಾಚಲು ಯತ್ನ

 ಹಣಕಾಸು ಸಚಿವನಾಗಿ, ನಾನು 1995ರ ರಾಜ್ಯ ಹಿಂದುಳಿದ ವರ್ಗಗಳ ಕಾಯ್ದೆಯನ್ನು ಮುನ್ನಡೆಸಿದೆ. 2015ರಲ್ಲಿ, ನನ್ನ ಸರ್ಕಾರವು ಭಾರತದ ಅತಿದೊಡ್ಡ ಜಾತಿ ಮತ್ತು ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ನಡೆಸಿತು. BJP ಆ ವರದಿಯನ್ನು 2019ರಿಂದ 2023ರವರೆಗೆ ಮರೆಮಾಚಿ ಮತ್ತೊಮ್ಮೆ ಹಿಂದುಳಿದ ವರ್ಗಗಳಿಗೆ ದ್ರೋಹ ಬಗೆಯಿತು ಎಂದರು. " ನಮ್ಮ ಸರ್ಕಾರವು OBC ಸಬಲೀಕರಣ ನೀತಿಗಳನ್ನು ಜಾರಿಗೊಳಿಸುವ ಮೊದಲು ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಕಳೆದ 10 ವರ್ಷಗಳಲ್ಲಿ ಜನಸಂಖ್ಯೆಯ ಬದಲಾವಣೆಯಿಂದಾಗಿ ನಮಗೆ ತಾಜಾ ದತ್ತಾಂಶದ ಅಗತ್ಯವಿದೆ," ಎಂದು ಹೊಸ ಸಮೀಕ್ಷೆಯನ್ನು ಸಮರ್ಥಿಸಿಕೊಂಡರು.

ರಾಹುಲ್‌ ಗಾಂದಿಯನ್ನು ಪದೇ ಪದೇ ಹಾಡಿಹೊಗಳಿದ ಸಿದ್ದರಾಮಯ್ಯ

ರಾಹುಲ್ ಗಾಂಧಿಯವರು ನಿಜವಾದ ನ್ಯಾಯ ಯೋಧರಾಗಿ ಹೊರಹೊಮ್ಮಿದ್ದಾರೆ.ಭಾರತ ಜೋಡೋ ಯಾತ್ರೆ ಮತ್ತು ಭಾರತ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ದೇಶದಾದ್ಯಂತ ಅವರು ನಡೆದಿದ್ದು, ಅಧಿಕಾರಕ್ಕಾಗಿ ಅಲ್ಲ,ಬದಲಿಗೆ ಜನರ ಧ್ವನಿಗಳನ್ನು ಆಲಿಸಲು ನಡೆದು. ಅವರು ಅಂಚಿನಲ್ಲಿರುವ ಜನರಿಗೆ ಧ್ವನಿಯನ್ನು ನೀಡಿದರು ಎಂದು ಸಿದ್ದರಾಮಯ್ಯ ವಿವರಿಸಿದರು. ರಾಹುಲ್ ಗಾಂಧಿಯವರು ಧೈರ್ಯದಿಂದ ಮಾತನಾಡಲು, ಸವಾಲು ಹಾಕಲು, ನ್ಯಾಯವನ್ನು ಚರ್ಚಾತೀತವಾಗಿ ಖಾತರಿಪಡಿಸಿದ ಭಾರತದ ಕನಸು ಕಾಣುವುದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕಾಂಗ್ರೆಸ್ ಗ್ಯಾರಂಟಿಯೂ ಆಗಿದೆ.

Tags:    

Similar News