Caste Census |ಜಾತಿ ಗಣತಿ ವರದಿ ಜಾರಿ ಬಗ್ಗೆ ಸಚಿವ ಸಂಪುಟ ಸಭೆ ಚರ್ಚೆ: ಇಂದು ಸಿದ್ದರಾಮಯ್ಯ ನಿರ್ಧಾರ
ಕೇಂದ್ರ ಸರ್ಕಾರ ಮುಂದಿನ ಜನಗಣತಿ ವೇಳೆ ಜಾತಿ ಗಣತಿಯನ್ನೂ ಮಾಡುವುದಾಗಿ ಹೇಳಿರುವ ಕಾರಣ ವರದಿ ಜಾರಿ ಮಾಡಲೇ ಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರವಿದೆ. ಹೀಗಾಗಿ ಇಂದಿನ ಸಭೆ ನಿರ್ಣಾಯಕ ಎನ್ನಲಾಗುತ್ತಿದೆ;
ಇಂದು ಅಂದರೆ ಗುರವಾರ (ಮೇ22) ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಗಣತಿ) ಸಂಬಂಧ ಮಹತ್ವದ ತೀರ್ಮಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರಲಿದ್ದಾರೆ.
ಕೇಂದ್ರ ಸರ್ಕಾರ ಮುಂದಿನ ಜನಗಣತಿ ವೇಳೆ ಜಾತಿ ಗಣತಿಯನ್ನೂ ಮಾಡುವುದಾಗಿ ಹೇಳಿರುವ ಕಾರಣ ವರದಿ ಜಾರಿ ಮಾಡಲೇ ಬೇಕಾದ ಅನಿವಾರ್ಯತೆಯಲ್ಲಿ ರಾಜ್ಯ ಸರ್ಕಾರವಿದೆ. ಹೀಗಾಗಿ ಇಂದಿನ ಸಭೆ ನಿರ್ಣಾಯಕ ಎನ್ನಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ವರದಿಯನ್ನು ಜಾರಿಗೊಳಿಸಿ ಅದರ ಯಶಸ್ಸನ್ನು ಪಡೆಯುವ ಅವಕಾಶಗಳೂ ಕೂಡ ದೊರೆತಿವೆ.
ಒಂದು ವೇಳೆ ಜಾತಿಗಣತಿ ಜಾರಿಗೆ ಸರ್ಕಾರ ಮುಂದಾದಲ್ಲಿ ಬಿಜೆಪಿಯಿಂದ ಹೆಚ್ಚು ಪ್ರತಿರೋಧ ಬರದಿರುವ ಸಾಧ್ಯತೆಯಿದೆ. ಕೇಂದ್ರವೂ ಜಾತಿಗಣತಿಗೆ ನಿರ್ಧರಿಸಿರುವುದು ಬಿಜೆಪಿಯ ಪ್ರತಿರೋಧ ಹೆಚ್ಚಾಗದಿರಲು ಕಾರಣವಾಗಬಹುದು ಎಂದು ಕಾಂಗ್ರೆಸ್ ಅಂಧಾಜಿಸಿದೆ.
ಮೇ 9ರಂದು ನಡೆದ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಸಂಬಂಧ ಸರ್ಕಾರ ನಿರ್ಧಾರವೊಂದಕ್ಕೆ ಬರಬೇಕಿತ್ತು. ಆದರೆ, ಭಾರತ ಹಾಗೂ ಪಾಕಿಸ್ತಾನದ ನಡುವೆ ದಾಳಿ-ಪ್ರತಿದಾಳಿ ನಡೆದು ವಿಷಮ ಪರಿಸ್ಥಿತಿ ಎದುರಾಗಿದ್ದ ಹಿನ್ನೆಲೆಯಲ್ಲಿ ಜಾತಿ ಗಣತಿ ಸಂಬಂಧ ಯಾವುದೇ ನಿರ್ಣಯಕ್ಕೆ ಬಂದಿರಲಿಲ್ಲ.
ಆದರೆ, ಇಂದು ತೀವ್ರ ಕುತೂಹಲ ಕೆರಳಿಸಿರುವ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿ ಇಂದು ನಡೆಯುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.
ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ
ಏ. 11ರಂದು ವರದಿಯನ್ನು ಸ್ವೀಕರಿಸಿದ್ದ ರಾಜ್ಯ ಸರ್ಕಾರ ಏ. 17ರಂದು ವಿಶೇಷ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ನಡೆಸಿ, ಸಚಿವರ ಅಭಿಪ್ರಾಯ ಸಂಗ್ರಹಿಸಿತ್ತು. ಸಂಪುಟ ಸಭೆಯಲ್ಲಿ ವರದಿ ಅಂಕಿ ಅಂಶಗಳಿಗೆ ಕೆಲ ಸಚಿವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಮೇ 2ರಂದು ಮತ್ತೊಂದು ಸಭೆಯನ್ನು ಕರೆಯಲಾಗಿತ್ತು. ಆದರೆ, ಪ್ರಬಲ ಜಾತಿಗಳ ಒತ್ತಡ ಹಾಗೂ ಇತರೆ ಕಾರಣಗಳಿಂದ ಸಭೆ ಮುಂದೂಡಲಾಗಿತ್ತು.
ಕೇಂದ್ರದ ನಿರ್ಧಾರದ ಪರಿಣಾಮ?
ಶೀಘ್ರದಲ್ಲಿ ನಡೆಯಲಿರುವ ರಾಷ್ಟ್ರೀಯ ಜನಗಣತಿಯ ಜೊತೆಗೆ ಜಾತಿ ಗಣತಿಯನ್ನೂ ನಡೆಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಹೀಗಾಗಿ ಕರ್ನಾಟಕದ ಜಾತಿ ಗಣತಿಯ ಕತೆಯೇನಾಗಬಹುದು ಎಂಬ ಚರ್ಚೆ ಶುರುವಾಗಿದೆ.
ಕರ್ನಾಟಕದಲ್ಲಿ ಈಗಾಗಲೇ ಜಾತಿ ಗಣತಿಯ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ಅದರ ಜಾರಿಗೆ ಸರ್ಕಾರ ಮುಂದಾದರೂ ಕ್ಯಾಬಿನೆಟ್ ಸಚಿವರೊಳಗೆ ಭಿನ್ನಾಭಿಪ್ರಾಯ ಒಡಲ ಬೆಂಕಿಯಾಗಿ ಸುಡುತ್ತಿದೆ. ಪ್ರಭಾವಿ ಸಮುದಾಯಗಳಾದ ಲಿಂಗಾಯತ ಹಾಗೂ ಒಕ್ಕಲಿಗರು ಗಣತಿಯನ್ನು ಖಡಾಖಂಡಿತವಾಗಿ ವಿರೋಧಿಸುತ್ತಿವೆ
ಜಾತಿ ಗಣತಿಯ ಕುರಿತು ದೇಶಾದ್ಯಂತ ದೀರ್ಘಕಾಲದಿಂದ ಚರ್ಚೆಗಳು ನಡೆಯುತ್ತಿವೆ ಹಾಗೂ ಕೆಲವು ಸಮುದಾಯಗಳು ಒಲವು ತೋರುತ್ತಿವೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಜಾತಿ ಗಣತಿಯನ್ನು ರಾಜಕೀಯ ಅಸ್ತ್ರವಾಗಿಯೂ ಬಳಸಿಕೊಳ್ಳಲು ಶುರು ಮಾಡಿಕೊಂಡಿದೆ. ಆರಂಭದಲ್ಲಿ ಜಾತಿ ಗಣತಿಯೇ ತನಗೆ 'ಅಪಥ್ಯ' ಎಂಬಂತೆ ವರ್ತಿಸಿದ್ದ ಕೇಂದ್ರದ ಬಿಜೆಪಿ ಸರ್ಕಾರ, ಇದೀಗ ಏಕಾಏಕಿ ಜಾತಿ ಗಣತಿ ಕಡೆಗೆ ಒಲವು ತೋರಿದೆ. ಆ ಮೂಲಕ 'ಸೇರಿಗೆ ಸವ್ವಾಸೇರು' ಎಂಬಂತೆ ರಾಜ್ಯಗಳ ಗಣತಿ ವರದಿಯನ್ನು ಅಪ್ರಸ್ತುತಗೊಳಿಸಲು ಮುಂದಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆ ಶುರುವಾಗಿದೆ.
ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ನಡೆದ ಜಾತಿ ಸಮೀಕ್ಷೆಗಳು ಅವೈಜ್ಞಾನಿಕವಾಗಿದೆ ಎಂಬುದು ಕೇಂದ್ರ ಸರ್ಕಾರ ಹಿಂದಿನಿಂದಲೂ ಮಾಡಿಕೊಂಡು ತರ್ಕ ಮಾಡಿಕೊಂಡು ಬಂದಿತ್ತು. ಇದೀಗ ಜಾತಿ ಎಣಿಕೆಯನ್ನು ಪಾರದರ್ಶಕವಾಗಿ ಮತ್ತು ವೈಜ್ಞಾನಿಕವಾಗಿ ಜನಗಣತಿಯ ಭಾಗವಾಗಿ ಸೇರಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದೆ.
ಕರ್ನಾಟಕವು 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲಕ ಜಾತಿ ಗಣತಿ ನಡೆಸಿದ ದೇಶದ ಮೊದಲ ರಾಜ್ಯವಾಗಿತ್ತು. ಆದರೆ, ಈ ವರದಿಯನ್ನು ರಾಜಕೀಯ ಕಾರಣಗಳಿಂದ ಜಾರಿಗೊಳಿಸಿರಲಿಲ್ಲ. ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು ವರದಿಯ ವೈಜ್ಞಾನಿಕತೆಯನ್ನು ಪ್ರಶ್ನಿಸಿದರೆ, ಹಿಂದುಳಿದ ವರ್ಗಗಳು ಮತ್ತು ದಲಿತ ಸಮುದಾಯಗಳು ಇದರ ಜಾರಿಗೆ ಒತ್ತಾಯಿಸಿವೆ. ಕೇಂದ್ರ ಸರ್ಕಾರದ ಈ ನಿರ್ಧಾರವು ಕರ್ನಾಟಕದ ರಾಜಕೀಯದ ಮೇಲೆಯೂ ಪರಿಣಾಮ ಬೀರಲಿದೆ.
ಆ ಪರಿಣಾಮದ ಪ್ರಕಾರ ರಾಜ್ಯ ಕೂಡಲೇ ಜಾತಿ ಗಣತಿಯನ್ನು ಜಾರಿಗೆ ತರುವುದೇ? ಆ ಮೂಲಕ ವಿರೋಧ ಪಕ್ಷಗಳನ್ನು ಕಟ್ಟಿಹಾಕಲು ಕಾಂಗ್ರೆಸ್ ತಂತ್ರ ಹೂಡುವುದೇ? ಅಥವಾ ಪಕ್ಷದೊಳಗಿನ ಒತ್ತಡಕ್ಕೆ ಮಣೆ ಹಾಕಿ ಗಣತಿ ಮಂಡನೆ ಮುಂದೂಡಿ ಜಾಣಕುರುಡು ತೋರಿಸುವುದೇ ಎಂಬುದು ಗುರುವಾರದ ಸಂಪುಟ ಸಭೆಯ ನಿರ್ಧಾರದ ಬಳಿಕ ಗೊತ್ತಾಗಲಿದೆ.