ಕರ್ನಾಟಕಕ್ಕೆ ಕೇಂದ್ರ ತಾರತಮ್ಯ | ಹಣಕಾಸು ಆಯೋಗಕ್ಕೆ ಎಳೆಎಳೆಯಾಗಿ ವಿವರಿಸಿದ ರಾಜ್ಯ ಸರ್ಕಾರ

ರಾಜ್ಯಕ್ಕೆ ಜಿಎಸ್‌ಟಿ ಪಾಲಿನ ರೂಪದಲ್ಲಿ ರೂ.45 ಸಾವಿರ ಕೋಟಿ ಹಾಗೂ ಅನುದಾನದ ರೂಪದಲ್ಲಿ ರೂ.15 ಸಾವಿರ ಕೋಟಿ ದೊರಕುತ್ತಿದೆ. ಅಂದರೆ ತಾನು ನೀಡುವ ಪ್ರತಿ ಒಂದು ರೂಪಾಯಿಗೆ ರಾಜ್ಯ, ಕೇವಲ 15 ಪೈಸೆಯನ್ನು ಮಾತ್ರ ಹಿಂದಕ್ಕೆ ಪಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

Update: 2024-08-29 08:35 GMT

ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಮತ್ತು 15ನೇ ಹಣಕಾಸು ಆಯೋಗದಿಂದ ಸಿಗಬೇಕಾದ ಹಣಕಾಸು ಪಾಲು ಕುಂಠಿತವಾಗುತ್ತಿದ್ದು, ಇಡೀ ದೇಶದಲ್ಲೇ ಜಿಡಿಪಿ ದೇಣಿಗೆಯಲ್ಲಿ ಎರಡನೇ ಸ್ಥಾನದಲ್ಲಿರುವ ಕರ್ನಾಟಕಕ್ಕೆ ಆರ್ಥಿಕ ಅನ್ಯಾಯವಾಗುತ್ತಿದೆ ಎಂದು ರಾಜ್ಯ ಸರ್ಕಾರ ಬಲವಾಗಿ ಪ್ರತಿಪಾದಿಸಿದೆ. ಜತೆಗೆ ಕೇಂದ್ರ ಹಣಕಾಸು ಹಂಚಿಕೆಯಲ್ಲೂ ಕಡಿತದಿಂದಾಗಿ ರಾಜ್ಯಗಳಿಗೆ ಭೌತಿಕ ಮತ್ತು ಮಾನವ ಮೂಲಸೌಲಭ್ಯಗಳ ಮೇಲೆ ಹೂಡಿಕೆಗೆ ಹಣಕಾಸಿನ ಬಿಕ್ಕಟ್ಟು ಎದುರಾಗಿದ್ದು, ಅದನ್ನು ಪರಿಹರಿಸಬೇಕಾಗಿದೆ ಎಂದು 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಗುರುವಾರ ನಡೆದ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ ಪನಗಾರಿಯಾ ನೇತೃತ್ವದ ಸಭೆಯಲ್ಲಿ ಹಣಕಾಸು ಇಲಾಖೆಯನ್ನೂ ನಿರ್ವಹಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಪದೇಪದೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನಸೆಳೆದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಾದ ಹಣಕಾಸು ಪಾಲಿನಲ್ಲಿ ಕಡಿತ ಉಂಟಾಗಿದ್ದರೂ, ರಾಜ್ಯ ಸರ್ಕಾರ ತಾನು ನುಡಿದಂತೆ ಐದು ಗ್ಯಾರಂಟಿಯಂತಹ ಪ್ರಮುಖ ಯೋಜನೆಗಳ ಜಾರಿಯಲ್ಲಿ ಬದ್ಧತೆಯನ್ನು ತೋರಿಸಿದೆ. ಬಂಡವಾಳ ವೆಚ್ಚದಲ್ಲಿ ಸಹ ಕರ್ನಾಟಕ ಯಾವುದೇ ರಾಜಿ ಮಾಡಿಕೊಂಡಿಲ್ಲ. ಬಂಡವಾಳ ವೆಚ್ಚದಲ್ಲಿ ಹೆಚ್ಚಳ ಉಂಟಾಗಿದ್ದರೂ, ಕರ್ನಾಟಕ 2013-14 ರ ಅವಧಿಯಿಂದಲೂ ಬಂಡವಾಳ ವೆಚ್ಚದ ಮೊತ್ತವನ್ನು ತನ್ನ ಜಿಎಸ್‌ಡಿಪಿಯ ಶೇ.2ರ ಮಿತಿಯಲ್ಲಿಯೇ ನಿರ್ವಹಿಸಿದೆ. ಬಂಡವಾಳ ವೆಚ್ಚದಲ್ಲಿ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಆಯೋಗದ ಗಮನಸೆಳೆಯಲಾಯಿತು.

ಆ ಮೂಲಕ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕದ ಜಿಡಿಪಿ ((ರಾಜ್ಯದ ನಿವ್ವಳ ಉತ್ಪನ್ನ) ಕುಂಠಿತವಾಗಲಿದೆ ಎಂದು ಬಿಜೆಪಿ ಮಾಡಿರುವ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಆರ್ಥಿಕವಾಗಿ ಬಲಿಷ್ಠವಾಗಿರುವ ರಾಜ್ಯಗಳು ಇತರ ಬಡ ರಾಜ್ಯಗಳಿಗೆ ನೆರವಾಗಲು ಬದ್ಧವಾಗಿವೆ. ಆದರೆ ಇದು ತಮ್ಮದೇ ನಾಡಿನ ಜನರನ್ನು ಅಥವಾ ಆರ್ಥಿಕ ದಕ್ಷತೆಯನ್ನು ಸಂಕಷ್ಟಕ್ಕೆ ಸಿಲುಕಿಸಬಾರದು. ರಾಜ್ಯಗಳು ಗಳಿಸುವ ಸಂಪನ್ಮೂಲದ ಒಂದು ದೊಡ್ಡ ಪಾಲು ಅವುಗಳ ನಡುವೆಯೇ ಹಂಚಿಕೆಯಾಗಬೇಕು ಎಂದು ಸಲಹೆ ನೀಡಿದ ಸಿದ್ದರಾಮಯ್ಯ, 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ನೀಡುವ ಪಾಲು ಶೇ. 4.713 ಯಿಂದ ಯಿಂದ 3.647 ಗೆ ತಗ್ಗಿದೆ. ಇದರಿಂದಾಗಿ 2021-26 ರ 5 ವರ್ಷಗಳ ಅವಧಿಯಲ್ಲಿ ರಾಜ್ಯಕ್ಕೆ ರೂ.68,275 ಕೋಟಿ ನಷ್ಟ ಉಂಟಾಗಿದೆ. ಕರ್ನಾಟಕಕ್ಕೆ ದೊರೆತ ಪಾಲಿನಲ್ಲಿ ಉಂಟಾದ ಇಷ್ಟು ದೊಡ್ಡ ಮೊತ್ತದ ಕಡಿತದ ಬಗ್ಗೆ ಹಣಕಾಸು ಆಯೋಗಕ್ಕೆ ಅರಿವಿದ್ದು, ರಾಜ್ಯಕ್ಕೆ ರೂ.11495 ಕೋಟಿ ನಿರ್ದಿಷ್ಟ ಅನುದಾನ ಒದಗಿಸಲು ಶಿಫಾರಸು ಮಾಡಿದೆ. ಆದರೆ ಕೇಂದ್ರ ಸರ್ಕಾರ ಆಯೋಗದ ಈ ಶಿಫಾರಸನ್ನು ಒಪ್ಪಿಕೊಂಡಿಲ್ಲ ಎಂದರು.

"ಆದ್ದರಿಂದ ಕರ್ನಾಟಕ ಈ ಅನುದಾನ ಪಡೆಯುವಲ್ಲಿಯೂ ವಂಚಿತವಾಗಿದೆ. ಈ ಎಲ್ಲಾ ಕಾರಣಗಳಿಂದ 15 ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಒಟ್ಟು ರೂ.79770ಕೋಟಿ ನಷ್ಟ ಉಂಟಾಗಿದೆ," ಎಂದು ಕರ್ನಾಟಕಕ್ಕೆ ಆಗುತ್ತಿರುವ ತಾರತಮ್ಯದ ಬಗ್ಗೆ ಸಿದ್ದರಾಮಯ್ಯ ಎಳೆಎಳೆಯಾಗಿ ವಿವರಿಸಿದರು.

15ನೇ ಹಣಕಾಸು ಆಯೋಗದ ಅವಧಿಯಲ್ಲಿ ಇತರ ರಾಜ್ಯಗಳಿಗೆ ಪ್ರತಿ ವರ್ಷ ರೂ.35 ಸಾವಿರದಿಂದ 40 ಸಾವಿರ ಕೋಟಿಯಷ್ಟು ಇತರ ರಾಜ್ಯಗಳಿಗೆ ಆದಾಯ ವರ್ಗಾವಣೆ ಮಾಡಿರುವುದನ್ನು ಕರ್ನಾಟಕ ಗಮನಿಸಿದೆ. ಇದು ಜಿಎಸ್‌ಡಿಪಿಯ ಶೇ.1.8ರಷ್ಟಿದೆ. ರಾಜ್ಯದಿಂದ ಹೊರಗೆ ವರ್ಗಾವಣೆಯಾಗುತ್ತಿರುವ ಈ ಮೊತ್ತ ರಾಜ್ಯದ ಒಟ್ಟು ಆದಾಯದ ಶೇ.50ರಿಂದ 55ರಷ್ಟಾಗಿದೆ. ಈ ರೀತಿ ಪಾಲಿನ ಪರಿಗಣನೆಯಲ್ಲಿನ ಅಸಮತೋಲನದಿಂದಾಗಿ ಆರ್ಥಿಕವಾಗಿ ಹಾಗೂ ಜನಸಂಖ್ಯೆ ನಿಯಂತ್ರಣ ಕಾರ್ಯದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕರ್ನಾಟಕ ಹಾಗೂ ಈ ರೀತಿಯ ರಾಜ್ಯಗಳು ಶಿಕ್ಷೆ ಎದುರಿಸುವಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸೆಸ್‌ ಮತ್ತು ಸರ್ಚಾರ್ಜ್‌ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೊಳ್ಳುವ ಬಾಬ್ತಿನಲ್ಲಿ ಬರುವುದಿಲ್ಲ. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರ ಸೆಸ್‌ ಮತ್ತು ಸರ್ಚಾರ್ಜ್‌ ಮೇಲಿನ ಅವಲಂಬನೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿದೆ. ಇದರಿಂದಾಗಿ ಒಟ್ಟು ತೆರಿಗೆ ಆದಾಯಕ್ಕೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಂಚಿಕೊಳ್ಳಬಹುದಾದ ಬಾಬ್ತಿನ ಪ್ರಮಾಣ ಹೆಚ್ಚಾಗುತ್ತಿಲ್ಲ. ಇದರಿಂದಾಗಿ ರಾಜ್ಯಗಳಿಗೆ ಬಹಳಷ್ಟು ನಷ್ಟ ಉಂಟಾಗುತ್ತಿದೆ. ಹಂಚಿಕೊಳ್ಳಬಹುದಾದ ಬಾಬ್ತಿನಲ್ಲಿ ಸೆಸ್‌ ಮತ್ತು ಸರ್ಚಾರ್ಜ್ ನಿಂದಾಗಿ ರಾಜ್ಯಕ್ಕೆ 2017-18 ರಿಂದ 2024-25 ನೇ ಅವಧಿಯಲ್ಲಿ ರೂ.53,359ಕೋಟಿ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದ್ದಾರೆ.

ಕೇಂದ್ರ -ರಾಜ್ಯ ಸಂಬಂಧ

ಪ್ರಧಾನಿಯವರು ತಿಳಿಸಿರುವ ʻಸಹಕಾರಿ ಒಕ್ಕೂಟʼ ವನ್ನು ಉತ್ತೇಜಿಸಲು ನಮ್ಮ ದೇಶದ ಸಂವಿಧಾನದಲ್ಲಿ ಉಲ್ಲೇಖಿಸಿರುವ ಹಣಕಾಸು ಒಕ್ಕೂಟ ಮೂಲವಾಗಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವೆ ಹಾಗೂ ರಾಜ್ಯ ಮತ್ತು ರಾಜ್ಯಗಳ ನಡುವೆ ತೆರಿಗೆ ಹಂಚಿಕೆ ವಿಷಯದಲ್ಲಿ ಶಿಫಾರಸ್ಸುಗಳನ್ನು ಮಾಡಲು ಹಣಕಾಸು ಆಯೋಗದ ನೇಮಕಾತಿಯನ್ನು ಆರ್ಟಿಕಲ್‌ 280 ಕಡ್ಡಾಯಗೊಳಿಸಿದೆ. ಆಯೋಗ ಈ ವಿಷಯದಲ್ಲಿ ತಜ್ಞ, ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಂಸ್ಥೆಯಾಗಿದೆ.ಹಾಗಾಗಿ ಆಯೋಗ ನ್ಯಾಯಸಮ್ಮತ ಮತ್ತು ದಕ್ಷ ನಿಲುವುಗಳನ್ನು ಅನುಸರಿಸಿ ಎಲ್ಲಾ ರೀತಿಯ ಅಸಮತೋಲನಗಳ ನಿವಾರಣೆ ಕುರಿತು ಕ್ರಮ ಕೈಗೊಳ್ಳುವ ವಿಶ್ವಾಸವನ್ನು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.

ರಾಜ್ಯಗಳ ನಡುವೆ ತೆರಿಗೆ ಮರು ಹಂಚಿಕೆಗೆ ನಮ್ಮ ಸಂವಿಧಾನ ಅವಕಾಶ ನೀಡಿದೆ. ಆದರೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ರಾಜ್ಯಗಳಿಗೆ ನೀಡುವ ಪ್ರೋತ್ಸಾಹಗಳ ಪರಿಣಾಮಗಳನ್ನು ಆಯೋಗ ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಅಂತಹ ರಾಜ್ಯಗಳ ತೆರಿಗೆದಾರರು, ತಮ್ಮ ತೆರಿಗೆಯ ಹಣ ಅವರ ಹಿತಕ್ಕಾಗಿ ಬಳಸುವುದನ್ನು ನಿರೀಕ್ಷಿಸುತ್ತಾರೆ. ಅಂತಹ ಕ್ರಮಗಳು ಸಾರ್ವಜನಿಕರಲ್ಲಿ ವಿಶ್ವಾಸ ಭಾವನೆ ಮೂಡಿಸುತ್ತದೆ. ಆದ್ದರಿಂದ ಆಯೋಗ ನ್ಯಾಯಪರತೆ, ದಕ್ಷತೆ ಮತ್ತು ನಿರ್ವಹಣೆಯ ನಡುವೆ ಅತ್ಯಂತ ಸೂಕ್ಷ್ಮವಾದ ಸಮತೋಲನ ಕಾಯ್ದುಕೊಳ್ಳುವ ಅಗತ್ಯವಿದೆ ಎಂದರು.

ಕರ್ನಾಟಕದ ಕೊಡುಗೆ

ಭಾರತದ ಅಭಿವೃದ್ಧಿ ಕಥನದಲ್ಲಿ ಕರ್ನಾಟಕ ಪ್ರಧಾನ ಪಾತ್ರ ವಹಿಸುತ್ತಿದೆ. ಒಟ್ಟು ಜನಸಂಖ್ಯೆಯ ಶೇ.5ರಷ್ಟಿದ್ದರೂ, ರಾಷ್ಟ್ರೀಯ ಜಿಡಿಪಿಗೆ ಕರ್ನಾಟಕ ಅಂದಾಜು ಶೇ.8.4 ರಷ್ಟು ಪಾಲು ನೀಡುತ್ತಿದೆ. ಇಡೀ ದೇಶದಲ್ಲೇ ಜಿಡಿಪಿ ದೇಣಿಗೆಯಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಪ್ರತಿ ವರ್ಷ ದೇಶದ ಒಟ್ಟು ತೆರಿಗೆ ಆದಾಯಕ್ಕೆ ಕರ್ನಾಟಕ ಸುಮಾರು ರೂ.4 ಲಕ್ಷ ಕೋಟಿಯಷ್ಟು ಪಾಲು ನೀಡುತ್ತಿದ್ದರೂ, ರಾಜ್ಯಕ್ಕೆ ತೆರಿಗೆ ಪಾಲಿನ ರೂಪದಲ್ಲಿ ರೂ.45ಸಾವಿರ ಕೋಟಿ ಹಾಗೂ ಅನುದಾನದ ರೂಪದಲ್ಲಿ ರೂ.15 ಸಾವಿರ ಕೋಟಿ ದೊರಕುತ್ತಿದೆ. ಅಂದರೆ ಕರ್ನಾಟಕ ನೀಡುವ ಪ್ರತಿ ಒಂದು ರೂಪಾಯಿಗೆ ರಾಜ್ಯ ಕೇವಲ 15 ಪೈಸೆಯನ್ನು ಮಾತ್ರ ಹಿಂದಕ್ಕೆ ಪಡೆಯುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

Tags:    

Similar News