ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದ ಸಿದ್ದರಾಮಯ್ಯ 2028ರಲ್ಲಿ ಮತ್ತೆ ಸ್ಪರ್ಧೆ?

ಎರಡನೇ ಬಾರಿಗೆ ಪೂರ್ಣಾವಧಿ ಸಿಎಂ ನಾನೇ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಮತ್ತೊಂದು ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರ ಆಪ್ತ ಶಾಸಕರಿಂದ ಒತ್ತಾಯ ಕೇಳಿ ಬಂದಿದೆ.;

Update: 2025-07-05 04:33 GMT

ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ʼಸಿಎಂ ಬದಲಾವಣೆʼ ಚರ್ಚೆ ನಡುವೆಯೇ "ನಾನೇ ಮತ್ತೆ  5 ವರ್ಷ ಮುಖ್ಯಮಂತ್ರಿ" ಎಂದು ಘೋಷಿಸಿಕೊಂಡು ವಿರೋಧಿ ಪಾಳಯಕ್ಕೆ ಚುರುಕುಮುಟ್ಟಿಸಿದ್ದಾರೆ.

ಆದರೆ, 9  ಬಾರಿ ಶಾಸಕರಾಗಿರುವ ತಾವು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ. ಇದೇ ಕೊನೆಯ ಚುನಾವಣಾ ರಾಜಕೀಯ ಎಂದು 2023ರ ಚುನಾವಣೆ ವೇಳೆ ಮತ್ತೆ ಮತ್ತೆ ಹೇಳಿಕೊಂಡಿದ್ದ ಹಾಗೂ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಲು ʼಮತ್ತೆ ಚುನಾವಣೆಗೆ ನಿಲ್ಲುವುದಿಲ್ಲʼ ಎಂಬುದನ್ನೇ ರಾಜಕೀಯ ದಾಳವಾಗಿಸಿಕೊಂಡಿದ್ದರು.

ಈಗ ಸಿದ್ದರಾಮಯ್ಯ ಅವರು ಮತ್ತೆ ʼರಾಜಕೀಯ ದಾಳʼ ಉರುಳಿಸುತ್ತಿದ್ದಾರೆ.  2028ರ ವಿಧಾನಸಭಾ ಚುನಾವಣೆಗೆ ಮತ್ತೆ ಸ್ಪರ್ಧಿಸಿ ರಾಜಕೀಯ ಎದುರಾಳಿಗಳಿಗೆ ಆಘಾತ ನೀಡುವ, ಪ್ರಮುಖವಾಗಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತಿತರರ ಸಿಎಂ ಆಗುವ ಕನಸಿಗೆ ಕೊಳ್ಳಿ ಇಡಲು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ ಈಗ ಉದ್ಭವವಾಗಿದೆ.

ಅದಕ್ಕೆ ಪೂರಕವಾಗಿ, ಸಿದ್ದರಾಮಯ್ಯ ಅಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹಾಗೂ ವಿಧಾನಸಭೆಯ ಮುಖ್ಯ ಸಚೇತಕರಾಗಿರುವ ಅಶೋಕ ಪಟ್ಟಣ ಅವರು ಸಿದ್ದರಾಮಯ್ಯ ಅವರು ಮತ್ತೆ ಚುನಾವಣಾ ರಾಜಕೀಯ ನಡೆಸಬೇಕು ಎನ್ನವ ಮೂಲಕ ಮತ್ತೆ ಚರ್ಚೆಗೆ ಕಾರಣರಾಗಿದ್ದಾರೆ.

ಇತ್ತೀಚೆಗೆ ಸಿಎಂ ಬದಲಾವಣೆ ವಿವಾದ ನಡೆದು, ಕಾಂಗ್ರೆಸ್‌ ಹೈಕಮಾಂಡ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ʼಅತೃಪ್ತʼರಿಂದ ಮಾಹಿತಿ ಪಡೆದು ಹೋದ ಕೂಡಲೇ, ಈ ಬಾರಿಯೂ ಪೂರ್ಣಾವಧಿ ಸಿಎಂ ತಾವೇ ಎಂದು ಸಿದ್ದರಾಮಯ್ಯ ಘೋಷಿಸಿಕೊಂಡಿದ್ದರು.  ಸಿಎಂ ಆಗುವ ಕನಸು ಕಂಡಿದ್ದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೂ ತಾವು ಅಸಹಾಯಕ ಎಂದು ನೇರವಾಗಿ ಹೇಳಿಕೊಂಡಿದ್ದರು.

ಈಗ ಸಿದ್ದರಾಮಯ್ಯ  ಆಪ್ತ ಶಾಸಕರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು ಮುಂದಿನ ಚುನಾವಣೆಗೂ ಸ್ಪರ್ಧೆ ಮಾಡಲಿ ಎಂದಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಚರ್ಚೆಯ ನಡುವೆಯೇ ಸಿದ್ದರಾಮಯ್ಯ ಅವರ ಪೂರ್ಣಾವಧಿ ಸಿಎಂ ಹೇಳಿಕೆ ತಮ್ಮ ಆಪ್ತ ಶಾಸಕರಿಗೆ ಬಲ ತುಂಬಿದೆ.

ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿರುವ ಸಿದ್ದರಾಮಯ್ಯ ಅವರ ಆಪ್ತ ಹಾಗೂ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರು, "ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಆಗಿರುತ್ತೇನೆ ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಸಿದ್ದರಾಮಯ್ಯ ಅವರು ಮುಂದಿನ ಚುನಾವಣೆಗೆ ನಿಲ್ಲಲ್ಲ, ಇದು ನನ್ನ ಕೊನೆಯ ಚುನಾವಣೆ  ಎಂದಿದ್ದಾರೆ. ಆದರೆ ಅವರು ಮುಂದಿನ ವಿಧಾನಸಭೆ ಚುನಾವಣೆಗೂ ನಿಲ್ಲಬೇಕು," ಎಂದು ಅಭಿಪ್ರಾಯಪಟ್ಟಿದ್ದಾರೆ. 

"ನಾವು ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಕೊನೆ ಚುನಾವಣೆ ಅನ್ನಬಾರದು. 2028 ರ ಚುನಾವಣೆಗೂ ಸ್ಪರ್ಧೆ ಮಾಡಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡಬೇಕು," ಎಂದು ಹೇಳಿದ್ದಾರೆ.

ಡಿಕೆಶಿ ಈ ಅವಧಿಯಲ್ಲಿ ಸಿಎಂ ಆಗಲ್ಲ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಈ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಸಿಎಂ ಆಗಲ್ಲ ಎಂದು ಅಶೋಕ್ ಪಟ್ಟಣ್ ಸ್ಪಷ್ಟವಾಗಿ ಹೇಳಿದ್ದಾರೆ.

"ಡಿಕೆಶಿ ಅವರು ಸಿಎಂ ಆಗಬೇಕು. ಆದರೆ, ಈಗ ಅಲ್ಲ. ಮುಂದಿನ ಚುನಾವಣೆಗೆ ಆಗಲಿ. ಈಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ, ಅವರನ್ನು 5 ವರ್ಷಕ್ಕೆ ಪೂರ್ಣಾವಧಿ ಮುಖ್ಯಮಂತ್ರಿಯನ್ನಾಗಿ ಶಾಸಕರೆಲ್ಲರೂ ಆಯ್ಕೆ ಮಾಡಿದ್ದೇವೆ. ಹಾಗಾಗಿ ಡಿ.ಕೆ. ಶಿವಕುಮಾರ್ ಈಗ ಸಿಎಂ ಆಗಲು ಆಗಲ್ಲ," ಎಂದು ಹೇಳಿದ್ದಾರೆ.

ಸಚಿವರನ್ನು ಕೈಬಡಲಿ

ಸರ್ಕಾರದಲ್ಲಿ ಸರಿಯಾಗಿ ಕೆಲಸ ಮಾಡದ ಸಚಿವರನ್ನು ಕೈ ಬಿಡಬೇಕು. ಆ ಮೂಲಕ ಸಚಿವ ಸಂಪುಟ ಪುನಾರಚನೆ ಮಾಡಬೇಕು. ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಅಶೋಕ್ ಪಟ್ಟಣ್ ಆಗ್ರಹಿಸಿದ್ದಾರೆ.

ಎರಡೂವರೆ ವರ್ಷ ಬಳಿಕ ಸಚಿವ ಸಂಪುಟ ಪುನರ್ ರಚನೆ ಮಾಡುವುದಾಗಿ ಹೈಕಮಾಂಡ್‌ ಹೇಳಿದೆ. ಹಾಗಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ನನಗೂ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ ಬಳಿಕ ಅವರ ಆಪ್ತ ಶಾಸಕರು ಒಬ್ಬೊಬ್ಬರಾಗಿಯೇ ಮಾತನಾಡಲು ಶುರು ಮಾಡಿದ್ದು ಇದನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌  ಯಾವ ರೀತಿ ಸ್ವೀಕಾರ ಮಾಡುತ್ತಾರೆ ಎಂದು ನೋಡಬೇಕಿದೆ.

ಅಶೋಕ್‌ ಪಟ್ಟಣ್‌ ಅವರು ದ ಫೆಡರಲ್‌ ಕರ್ನಾಟಕಕ್ಕೆ ಮಾತನಾಡಿರುವ ವಿಶೇಷ ಸಂದರ್ಶನ ಇಲ್ಲಿದೆ.

Full View


Tags:    

Similar News