ಉತ್ತರ ಕರ್ನಾಟಕ ಅಭಿವೃದ್ಧಿ: ಗೋವಿಂದರಾವ್ ಆಯೋಗ ವರದಿ ಬಂದ ಕೂಡಲೇ ಅನುಷ್ಠಾನ: ಸಿದ್ದರಾಮಯ್ಯ
14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಡಾ.ಗೊವಿಂದರಾವ್ ಇವರ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿಯೊಂದನ್ನು ರಚಿಸಲಾಗಿದೆ. ಸದರಿ ಸಮಿತಿಯು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.;
ರಾಜ್ಯದ ಹಿಂದುಳಿದ ತಾಲೂಕುಗಳ ಬಗ್ಗೆ ಇರುವ ಡಾ.ಡಿ.ಎಂ.ನಂಜುಂಡಪ್ಪ ವರದಿಯ ಬಗ್ಗೆ ಅಧ್ಯಯನ ನಡೆಸಲು ನೇಮಕಗೊಳಿಸಿದ್ದ ಆರ್ಥಿಕ ತಜ್ಞ ಪ್ರೊ. ಗೋವಿಂದರಾವ್ ಅವರ ಅಧ್ಯಕ್ಷತೆಯೆ ಪ್ರಾದೇಶಿಕ ಅಸಮತೋಲನ ನಿವಾರಣಾ ಆಯೋಗ ವರದಿ ನೀಡಿದ ಕೂಡಲೇ ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ನಡೆದ ಚರ್ಚೆ ಸಂಬಂಧ ಗುರುವಾರ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರೊ. ಗೋವಿಂದ ರಾವ್ ರವರು ವರದಿ ಕೊಟ್ಟ ಕೂಡಲೇ ಅದನ್ನು ಅನುಷ್ಠಾನ ಮಾಡಲು ಕ್ರಮವಹಿಸಲಾಗುವುದು ಎಂದು ಪ್ರಕಟಿಸಿದರು.
ನಂಜುಂಡಪ್ಪ ವರದಿಯ ಪ್ರಕಾರ 2007-08 ರಿಂದ 2023-24 ರವರೆಗೆ 35 ಸಾವಿರ ಕೋಟಿಗೂ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಅದರಲ್ಲಿ, ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ 17,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲವೆಂದು ಬಹುಪಾಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಿಂದ ಕಳೆದ ಬಾರಿ ಇದೇ ಸದನದಲ್ಲಿ ಘೋಷಣೆ ಮಾಡಿದಂತೆ 14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಡಾ.ಗೊವಿಂದರಾವ್ ಇವರ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿಯೊಂದನ್ನು ರಚಿಸಲಾಗಿದೆ. ಸದರಿ ಸಮಿತಿಯು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಈ ಸಮಿತಿ ವರದಿ ಕೊಟ್ಟ ಕೂಡಲೇ ಅದನ್ನು ಅನುಷ್ಠಾನ ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.
ಕರ್ನಾಟಕದ ಎರಡೂ ಭಾಗದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ನಂಜುಂಡಪ್ಪ ಸಮಿತಿಯು 8 ವರ್ಷಗಳ ವಿಶೇಷ ಯೋಜನೆಯೊಂದನ್ನು ತಯಾರಿಸಿತ್ತು. ಅದರ ಪ್ರಕಾರ ಸರ್ಕಾರ ಒಟ್ಟು 31 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದು ವರದಿ ನೀಡಿತ್ತು. ಆದರೆ ಅದಕ್ಕಿಂತಲೂ ಹೆಚ್ಚಿನ ಅನುದಾನಗಳನ್ನು ನಿಡಲಾಗಿದೆ. ಅಭಿವೃದ್ಧಿ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿಲ್ಲ ಎಂದು ಸಿದ್ದರಾಮಯ್ಯ ವಿಷಾದಿಸಿದರು.
ಆಲಮಟ್ಟಿ ಅಣೆಕಟ್ಟು ಎತ್ತರ
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಆಲಮಟ್ಟಿ ಜಲಾಶಯವನ್ನು 519 ಮೀಟರ್‌ಗಳಿಂದ 524.256 ಮೀಟರ್‌ಗಳಿಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಸುಮಾರು 73 ಸಾವಿರ ಎಕರೆ ಭೂಮಿಯನ್ನು ಕನ್ಸೆಂಟ್ ಅವಾರ್ಡಿನ ಮೂಲಕ ಒಂದೇ ಹಂತದಲ್ಲಿ ರೈತರ ಭೂಮಿಯನ್ನು ಭೂಸ್ವಾಧೀನಪಡಿಸಿಕೊಳ್ಳಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
"ಮಹದಾಯಿ ಯೋಜನೆಯನ್ನು ನಾವು ಶೀಘ್ರವಾಗಿ ಅನುಷ್ಠಾನ ಮಾಡಲು ಉದ್ದೇಶಿದ್ದೇವೆ. ಆದರೆ ಕೇಂದ್ರದ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ಈ ಯೋಜನೆಗೆ ಒಪ್ಪಿಗೆ ನೀಡದೆ ಸತಾಯಿಸುತ್ತಿದೆ. ಆದ್ದರಿಂದ, ಕೇಂದ್ರ ಸರ್ಕಾರವು ಈ ಕೂಡಲೇ ಒಪ್ಪಿಗೆ ನೀಡಬೇಕೆಂದು ಈ ಸದನದ ಪರವಾಗಿ ನಾನು ಒತ್ತಾಯಿಸುತ್ತೇನೆ," ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಮುಂತಾದ ಕಾರಣಗಳಿಂದ ಹಾನಿಯಾಗಿರುವ ರಸ್ತೆಗಳ ಅಭಿವೃದ್ಧಿಯ ಕುರಿತು ಕ್ರಮವಹಿಸಲಾಗುವುದು. ಈ ಭಾಗದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದರು.
ಶ್ಲಾಘನೆ
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ 49 ಜನ ಸದಸ್ಯರು 13 ಗಂಟೆ 11 ನಿಮಿಷಗಳ ಕಾಲ ಮಾತನಾಡಿದ್ದಾರೆ. ಕಾಂಗ್ರೆಸ್ಸಿನಿಂದ 26, ಬಿಜೆಪಿಯಿಂದ 19 ಮತ್ತು ಜೆಡಿಎಸ್ ನಿಂದ 4 ಜನ ಸದಸ್ಯರು ಮಾತನಾಡಿದ್ದಾರೆ. ಮಾತನಾಡಿದ ಎಲ್ಲರೂ ಉತ್ತರ ಕರ್ನಾಟಕದ ನೀರಾವರಿ, ಕೈಗಾರಿಕೆ, ಕೃಷಿ, ಶಿಕ್ಷಣ, ಆರೋಗ್ಯ , ಮೂಲಭೂತ ಸೌಕರ್ಯ ಮುಂತಾದವುಗಳ ಬಗ್ಗೆಯೇ ಮಾತನಾಡಿರುತ್ತಾರೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
"ಉತ್ತರ ಕರ್ನಾಟಕದ ಜನರ ಬಗ್ಗೆ ನಮ್ಮ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಈ ಭಾಗದ ಜನರ ಬಗ್ಗೆ ನನಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿದೆ. ಉತ್ತರ ಕರ್ನಾಟಕದ ಜನ ಕರ್ನಾಟಕವನ್ನು ಕಟ್ಟುವುದರಲ್ಲಿ ವಿಶೇಷವಾದ ಪಾತ್ರವನ್ನು ವಹಿಸಿದ್ದಾರೆ. ಕಪ್ಪು ಮಣ್ಣಿನ ಈ ಭೂಮಿಯಲ್ಲಿ ಕರ್ನಾಟಕದ ನಾಗರಿಕತೆ, ಸಂಸ್ಕೃತಿಗಳು ವಿಕಾಸವಾಗಿವೆ. ಹದವಾದ ಮಳೆ, ಬಿಸಿಲುಗಳಿದ್ದರೆ ಚಿನ್ನವನ್ನೆ ದೇಶಕ್ಕಾಗಿ ಬೆಳೆದು ಕೊಡುತ್ತೇವೆ ಎಂಬ ಉತ್ಸಾಹ ಈ ಭಾಗದ ಜನರಿಗಿದೆ. ಈ ನೆಲದ ಕೂಡು ಬಾಳುವೆಯ ಸಂಸ್ಕೃತಿಯನ್ನು ನಾನು ಗೌರವಿಸುತ್ತೇನೆ. ನಾವು ಯಾವುದೇ ಬೆಲೆ ತೆತ್ತಾದರೂ ಇದನ್ನು ಉಳಿಸಿಕೊಳ್ಳಬೇಕಾಗಿದೆ," ಎಂದು ಹೇಳಿದರು.
"ನಾವು ಚುನಾವಣೆಗೆ ಮೊದಲು ಏನನ್ನು ಹೇಳಿದ್ದೆವೋ ಅದನ್ನು ಈಗಾಗಲೇ ಅನುಷ್ಠಾನಕ್ಕೆ ತಂದಿದ್ದೇವೆ. ಹಾಗೂ ಉಳಿದವನ್ನು ತರುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಕಳೆದ ಬಾರಿಯ ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರ್ಕಾರದ ವತಿಯಿಂದ ಕೆಲವು ಘೋಷಣೆಗಳನ್ನು ಮಾಡಿದ್ದೆವು. ಮಧ್ಯಮಾವಧಿ, ದೀರ್ಘಾವಧಿ ಅಸಲು ಕಟ್ಟಿದರೆ ರೈತರ ಸಂಪೂರ್ಣ ಬಡ್ಡಿ ಮನ್ನಾ ಮಾಡಲಾಗುವುದೆಂದು ಘೋಷಿಸಿದ್ದೆವು. ಅದನ್ನು ಸಂಪೂರ್ಣ ಅನುಷ್ಠಾನ ಮಾಡಿದ್ದೇವೆ. ಮಾರ್ಚ್- 2024 ರವರೆಗೆ 36,146 ರೈತರಿಗೆ ರೂ.239.28 ಕೋಟಿಗಳ ಬಡ್ಡಿಯನ್ನು ಮನ್ನಾ ಮಾಡಿದ್ದೇವೆ," ಎಂದು ಸಿದ್ದರಾಮಯ್ಯ ವಿವರಿಸಿದರು.