ಆಳಂದದ ಲಾಡ್ಲೇ ಮಶಾಕ್ ದರ್ಗಾದಲ್ಲಿ ನಾಳೆ ಶಿವರಾತ್ರಿ ಪೂಜೆ; ಹೈಕೋರ್ಟ್ ಅನುಮತಿ
ಕಲಬುರಗಿ ಜಿಲ್ಲೆಯ ಆಳಂದದ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಬುಧವಾರ (ನಾಳೆ) ನಡೆಯಲಿರುವ ಶಿವರಾತ್ರಿಯಂದು ಪೂಜೆ ಸಲ್ಲಿಸುವ ಸಂಬಂಧ ವಿವಾದ ಮತ್ತೆ ಭುಗಿಲೆದ್ದಿದೆ. ಈ ನಡುವೆ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಶಿವರಾತ್ರಿಯಂದು ಹಿಂದೂಗಳು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮಹಾಶಿವರಾತ್ರಿಯಂದು ಲಾಡ್ಲೇ ಮಶಾಕ್ ದರ್ಗಾದ ಆವರಣದಲ್ಲಿನ ರಾಘವ ಚೈತನ್ಯ ಶಿವಲಿಂಗ ಪೂಜೆಗೆ ಹಿಂದೂ ಸಂಘಟನೆಗಳು ಪಟ್ಟುಹಿಡಿದಿದ್ದವು. ವಿವಿಧ ಮಠಾಧೀಶರ ಜತೆಗೂಡಿದ ಹಿಂದೂಪರ ಸಂಘಟನೆಗಳು ಪೂಜೆಗೆ ಅವಕಾಶ ನೀಡಬೇಕು ಹಾಗೂ ಈ ಬಾರಿ 500 ಜನರಿಗೆ ಪೂಜೆಗೆ ಅವಕಾಶ ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಕಳೆದ ವರ್ಷ 15 ಮಂದಿಗೆ ಪೂಜೆಗೆ ಹೈಕೋರ್ಟ್ ಅವಕಾಶ ನೀಡಿತ್ತು. ಆದರೆ, ಈ ಬಾರಿ ಹೆಚ್ಚು ಜನರು ಪೂಜೆಯಲ್ಲಿ ಭಾಗವಹಿಸಲು ಅವಕಾಶ ನೀಡಬೇಕೆಂಬ ಮನವಿಯನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ತಿರಸ್ಕರಿಸಿದ್ದರು.
ಈ ಸಂಬಂಧ ಸಂಘಟನೆಗಳು ಕಲಬುರಗಿ ಹೈಕೋರ್ಟ್ ಪೀಠದ ಮೊರೆ ಹೋಗಿದ್ದರು.
ಆದರೆ, ಹೈಕೋರ್ಟ್ ಪೀಠ, ಮಂಗಳವಾರ ಈ ಬಗ್ಗೆ ವಿಚಾರಣೆ ನಡೆಸಿ ಶಿವರಾತ್ರಿಯಂದು ಮಧ್ಯಾಹ್ನ 2 ರಿಂದ ಸಂಜೆ 6ರ ವರೆಗೆ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಆದರೆ, ಶ್ರೀರಾಮಸೇನೆಯ ಪದಾಧಿಕಾರಿ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಹೊರತುಪಡಿಸಿ ಉಳಿದವರಿಗೆ ಪೂಜೆಗೆ ಅವಕಾಶ ನೀಡಬಹುದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಕಳೆದ ಬಾರಿ ನ್ಯಾಯಾಲಯ ಎರಡು ಸಮುದಾಯದ 15 ಜನರಿಗೆ ಪೂಜೆ ಮತ್ತು ಪ್ರಾರ್ಥನೆಗೆ ಅವಕಾಶ ನೀಡಿತ್ತು. ಪೊಲೀಸ್ ಭದ್ರತೆಯೊಂದಿಗೆ ಹಿಂದೂ ಮತ್ತು ಮುಸ್ಲಿಮರು ಶಾಂತಿಯುತವಾಗಿ ಶಿವರಾತ್ರಿ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದರು.
ಹಿನ್ನೆಲೆ
2022 ರಲ್ಲಿ ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ರಾಘವ ಚೈತನ್ಯ ಶಿವಲಿಂಗಕ್ಕೆ ಅವಮಾನ ಮಾಡುವ ಯತ್ನ ನಡೆದಿತ್ತು. ಆ ಕಾರಣಕ್ಕೆ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ಧೀಕರಣಕ್ಕೆ ತೆರಳಿದ ಕಾರಣಕ್ಕೆ ಕೋಮು ಗಲಭೆ ಉಂಟಾಗಿತ್ತು. ಹಾಗಾಗಿ ಶಿವರಾತ್ರಿಗಿಂತ ಮುಂಚೆ ಹಿಂದೂ ಸಂಘಟನೆಗಳು ಅದೇ ಸ್ಥಳದಲ್ಲಿ ರಾಘವ ಚೈತನ್ಯ ರಥಯಾತ್ರೆ ಹಮ್ಮಿಕೊಳ್ಳುತ್ತಿದ್ದು, ಹೈಕೋರ್ಟ್ ಕಳೆದ ಬಾರಿ ಷರತ್ತುಬದ್ಧ ಅನುಮತಿ ನೀಡಿತ್ತು.
ಈ ನಡುವೆ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶ್ರೀ ರಾಘವ ಚೈತನ್ಯ ದೇಗುಲ ನಿರ್ಮಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಜತೆಗೆ ಶಿವರಾತ್ರಿಯಂದು ದರ್ಗಾದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ವಕ್ಫ್ ಬೋರ್ಡ್‌ಗೂ ಅರ್ಜಿ ಸಲ್ಲಿಸಲಾಗಿತ್ತು.
ಹದಿನಾಲ್ಕನೇ ಶತಮಾನದಲ್ಲಿ ಕೋಮುಸೌಹಾರ್ದಕ್ಕೆ ಹೆಸರಾಗಿದ್ದ ಲಾಡ್ಲೆ ಮಶಾಕ್ ದರ್ಗಾವು ಆಳಂದ ಪಟ್ಟಣದಲ್ಲಿದೆ. ದರ್ಗಾದ ಆವರಣದಲ್ಲಿ ಶಿವಾಜಿ ಮಹಾರಾಜನ ಗುರು ಸಮರ್ಥ ರಾಮದಾಸ ರಾಘವ ಚೈತನ್ಯ ಅವರ ಸಮಾಧಿಯೂ ಇದ್ದು, ಸಮಾದಿಯ ಮೇಲೆ ಶಿವಲಿಂಗವಿದೆ. ದರ್ಗಾಕ್ಕೆ ಹೋಗುತ್ತಿದ್ದ ಹಿಂದೂಗಳು ರಾಘವ ಚೈತನ್ಯರ ಸಮಾದಿ ಮತ್ತು ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿದ್ದರು ಹಾಗೂ ಇದು ಉಭಯ ಧರ್ಮಗಳ ಸಹಿಷ್ಣುತೆಗೆ ದ್ಯೋತಕವಾಗಿತ್ತು.