ಶಕ್ತಿ ಯೋಜನೆ ಪರಿಷ್ಕರಣೆ ಪ್ರಸ್ತಾವ ಸರ್ಕಾರದ ಮುಂದಿಲ್ಲ: ಸಿಎಂ ಸ್ಪಷ್ಟನೆ

ವಕ್ಫ್‌ ಆಸ್ತಿ ನೋಟಿಸ್‌ ವಿರೋಧಿಸಿ ನ.4ರಂದು ಬಿಜೆಪಿ ಪ್ರತಿಭಟನೆಗೆ ಕರೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ಅವರ ಆಡಳಿತದ ಅವಧಿಯಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 200 ಕ್ಕೂ ಹೆಚ್ಚು ನೋಟಿಸ್‌ ನೀಡಿದ್ದರು. ಅವರು ನೋಟಿಸ್‌ ಕೊಟ್ಟಿದ್ದು ಏಕೆ? ಎಂದು ಪ್ರಶ್ನಿಸಿದರು.

Update: 2024-10-31 08:05 GMT

ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಖಾತರಿ ಒದಗಿಸುವ ʼಶಕ್ತಿ ಯೋಜನೆʼಯನ್ನು ಪರಿಷ್ಕರಿಸುವ ಯಾವುದೇ ಪರಿಸ್ಥಿತಿ ಹಾಗೂ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಒಂದು. ಯೋಜನೆಯನ್ನು ಮರುಪರಿಶೀಲನೆ ಮಾಡುವ ಕುರಿತು ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆಯಲ್ಲಿ ನನ್ನ ಪಾತ್ರ ಇಲ್ಲ. ಆದರೆ, ಯೋಜನೆ ಪರಿಷ್ಕರಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ವಕ್ಫ್‌ ಆಸ್ತಿ ನೋಟಿಸ್‌ ವಿರೋಧಿಸಿ ನ.4ರಂದು ಬಿಜೆಪಿ ಪ್ರತಿಭಟನೆಗೆ ಕರೆ ನೀಡಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ರಾಜಕೀಯಕ್ಕಾಗಿ ವಿವಾದ ಸೃಷ್ಟಿಸುತ್ತಿದ್ದಾರೆ. ಅವರ ಆಡಳಿತದ ಅವಧಿಯಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 200 ಕ್ಕೂ ಹೆಚ್ಚು ನೋಟಿಸ್‌ ನೀಡಿದ್ದರು. ಅವರು ನೋಟಿಸ್‌ ಕೊಟ್ಟಿದ್ದು ಏಕೆ? ಎಂದು ಪ್ರಶ್ನಿಸಿದರು.

ಬಿಜೆಪಿಯಿಂದ ಇಬ್ಭಗೆಯ ರಾಜಕಾರಣ

ವಕ್ಫ್‌ ನೋಟಿಸ್‌ ವಾಪಸ್‌ ಪಡೆಯುವುದಾಗಿ ಹೇಳಿದ್ದೇವೆ. ರೈತರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸುವುದಿಲ್ಲ ಎಂದು ಭರವಸೆ ನೀಡಿದ್ದರೂ ಅನಗತ್ಯ ಗೊಂದಲ ಸೃಷ್ಟಿಸುವ ಮೂಲಕ ಬಿಜೆಪಿ ಇಬ್ಭಗೆಯ ರಾಜಕಾರಣ ಮಾಡುತ್ತಿದೆ ಎಂದು ಸಿಂ ಆರೋಪಿಸಿದರು.

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಹಾಗೂ ಮಹಾರಾಷ್ಟ್ರ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯವರು ವಿವಾದ ಸೃಷ್ಟಿಸುತ್ತಿದ್ದು, ಪ್ರತಿಭಟನೆಗೆ ಕರೆ ನೀಡಿದ್ದಾರೆ. ನೋಟಿಸ್‌ ಕೊಟ್ಟಿದ್ದರೆ ವಾಪಸ್‌ ಪಡೆಯುವುದಾಗಿ ಸರ್ಕಾರ ಹೇಳಿರುವಾಗ ವಿವಾದ ಎಲ್ಲಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಹಾಗೂ ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಇಲ್ಲಿಯವರೆಗೆ ಯಾವುದಾದರೂ ಒಂದು ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದಾರಾ ಎಂದು ವಾಗ್ದಾಳಿ ನಡೆಸಿದರು.

ನ.4 ರಿಂದ 11 ರವರೆಗೆ ಮೂರು ಕ್ಷೇತ್ರಗಳ ಉಪಚುನಾವಣೆ ಪ್ರಚಾರಕ್ಕೆ ತೆರಳುತ್ತೇನೆ. ಶಿಗ್ಗಾವಿ, ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ ಎಂದು ಹೇಳಿದರು.

Tags:    

Similar News