ಕರ್ನಾಟಕದ ಗಿಗ್ ಕಾರ್ಮಿಕರ ಬದುಕಿಗೆ ಭದ್ರ ಬುನಾದಿ: ಸಮಗ್ರ ಆರೋಗ್ಯ, ಭದ್ರತೆ ಮತ್ತು ಕಲ್ಯಾಣ ಕಾಯ್ದೆ ಜಾರಿ

ಈ ಕಾನೂನಿನ ಅಡಿಯಲ್ಲಿ, ರಾಜ್ಯ ಸರ್ಕಾರವು ಗಿಗ್ ಕಾರ್ಮಿಕರಿಗೆ 2 ಲಕ್ಷ ರೂ. ಜೀವ ವಿಮೆ ಮತ್ತು 2 ಲಕ್ಷ ರೂ. ಅಪಘಾತ ವಿಮೆ ಸೇರಿದಂತೆ ಒಟ್ಟು 4 ಲಕ್ಷದ ಸಮಗ್ರ ವಿಮಾ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ.;

Update: 2025-08-25 04:33 GMT

ಟ್ರಾಫಿಕ್‌ನ ನಡುವೆ, ಅಕ್ಷರಶಃ ಜೀವ ಕೈಯಲ್ಲಿ ಹಿಡಿದು ದಿನವಿಡೀ ದುಡಿಯುವ ಗಿಗ್ ಕಾರ್ಮಿಕರ ಬಹುದಿನಗಳ ಕನಸು ಕೊನೆಗೂ ನನಸಾಗಿದೆ. ಸ್ವಿಗ್ಗಿ, ಜೊಮಾಟೊ, ಉಬರ್, ಅಮೆಜಾನ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಬೆನ್ನೆಲುಬಾಗಿ ನಿಂತಿರುವ ಲಕ್ಷಾಂತರ ಕಾರ್ಮಿಕರ ಹಕ್ಕು ಮತ್ತು ಹಿತರಕ್ಷಣೆಗಾಗಿ ಕರ್ನಾಟಕ ಸರ್ಕಾರವು "ಕರ್ನಾಟಕ ವೇದಿಕೆ ಆಧಾರಿತ ಗಿಗ್ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ) ವಿಧೇಯಕ-2025" ಅನ್ನು ವಿಧಾನಮಂಡಲದಲ್ಲಿ ಅಂಗೀಕರಿಸುವ ಮೂಲಕ ದೇಶದಲ್ಲೇ ಐತಿಹಾಸಿಕ ಹೆಜ್ಜೆಯಿಟ್ಟಿದೆ.

ಈ ಮಸೂದೆಯು ಅಸಂಘಟಿತ ವಲಯದ ಈ ಕಾರ್ಮಿಕ ಸಮುದಾಯದ ಬದುಕಿಗೆ ಭದ್ರತೆ, ಆರೋಗ್ಯ ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸುವ ಸಮಗ್ರ ಕವಚವಾಗಿದೆ.

ದಿನಕ್ಕೆ 10-12 ಗಂಟೆಗಳ ಕಾಲ ರಸ್ತೆಯಲ್ಲಿ ದೂಳು, ಹೊಗೆ ಮತ್ತು ಸಂಚಾರ ಒತ್ತಡದ ನಡುವೆ ಕೆಲಸ ಮಾಡುವ ಗಿಗ್ ಕಾರ್ಮಿಕರು ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ನಿರಂತರ ಬೈಕ್ ಚಾಲನೆಯಿಂದ ಬೆನ್ನು ನೋವು, ಕುತ್ತಿಗೆ ನೋವು ಮತ್ತು ಚರ್ಮದ ಸಮಸ್ಯೆಗಳಂತಹ ದೈಹಿಕ ಸವಾಲುಗಳು ಅವರನ್ನು ಕಾಡಿದರೆ, ನಿಗದಿತ ಸಮಯದಲ್ಲಿ ಡೆಲಿವರಿ ಮಾಡುವ ಒತ್ತಡ, ಕಡಿಮೆಯಾಗುತ್ತಿರುವ ಆದಾಯ ಮತ್ತು ಕೆಲಸದ ಅನಿಶ್ಚಿತತೆಯಿಂದಾಗಿ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳು ಅವರನ್ನು ಮತ್ತಷ್ಟು ಕಂಗೆಡಿಸುತ್ತಿವೆ. ಈ ಎಲ್ಲಾ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಈ ಹೊಸ ಮಸೂದೆಯ ಮೂಲಕ ಗಿಗ್ ಕಾರ್ಮಿಕರಿಗೆ ಹೊಸ ಚೈತನ್ಯ ನೀಡಲು ಮುಂದಾಗಿದೆ.

4 ಲಕ್ಷ ರೂಪಾಯಿ ಸಮಗ್ರ ವಿಮೆ

ಈ ಕಾನೂನಿನ ಅಡಿಯಲ್ಲಿ, ರಾಜ್ಯ ಸರ್ಕಾರವು ಗಿಗ್ ಕಾರ್ಮಿಕರಿಗೆ 2 ಲಕ್ಷ ರೂ. ಜೀವ ವಿಮೆ ಮತ್ತು 2 ಲಕ್ಷ ರೂ. ಅಪಘಾತ ವಿಮೆ ಸೇರಿದಂತೆ ಒಟ್ಟು 4 ಲಕ್ಷದ ಸಮಗ್ರ ವಿಮಾ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದೆ. ಇದು ಗಿಗ್ ಕಾರ್ಮಿಕರ ಕುಟುಂಬಗಳಿಗೆ ಭದ್ರತೆಯ ಭಾವನೆಯನ್ನು ನೀಡಿದೆ.

ಗಿಗ್‌ ಕಾರ್ಮಿಕರ ಆರೋಗ್ಯ ಸಮಸ್ಯೆಗಳ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಹಿರಿಯ ತಜ್ಞೆ ಡಾ.ಬಿ.ಎಸ್‌.ತ್ರೀವೇಣಿ, ಗಿಗ್‌ ಕಾರ್ಮಿಕರು ಪ್ರತಿನಿತ್ಯ 10 ಗಂಟೆಗೂ ಹೆಚ್ಚು ಕಾಲ ರಸ್ತೆಗಳಲ್ಲಿ ದುಡಿಯುತ್ತಾರೆ. ಇವರಿಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ವಾಹನಗಳಿಂದ ಹೊರಬರುವ ಹೊಗೆಯನ್ನು ಸೇವಿಸುತ್ತಾರೆ. ಇದು ಅಸ್ತಮಾ ಸಮಸ್ಯೆಗೆ ಕಾರಣವಾಗಲಿದೆ. ಅಲ್ಲದೇ, ಸುಧೀರ್ಘ ಕಾಲದವರೆಗೆ ಬೈಕ್‌ಗಳಲ್ಲಿ ಇರುವುದರಿಂದ ಬೆನ್ನು ನೋವು ಸಹ ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವು ಮಂದಿ ಸಿಗರೇಟು, ತಂಬಾಕು ಸೇವನೆ ಮಾಡುವುದರಿಂದ ಸಹಜವಾಗಿ ಕಾನ್ಸರ್‌ ಸಮಸ್ಯೆ ಎದುರಿಸಬೇಕಾಗುತ್ತದೆ. ಸರ್ಕಾರವು ಗಿಗ್‌ ಕಾರ್ಮಿಕರಿಗಾಗಿ ಹೊಸ ವಿಧೇಯಕಯನ್ನು ಅಂಗೀಕರಿಸಿದೆ. ಇದು ಸ್ವಾಗತಾರ್ಹವಾಗಿದ್ದು, ಅನುಷ್ಠಾನವು ಸಮರ್ಪಕವಾಗಿ ಆಗಬೇಕು. ವಿಧೇಯಕದಲ್ಲಿನ ಪ್ರಯೋಜನಗಳು ಗಿಗ್‌ ಕಾರ್ಮಿಕರಿಗೆ ತಲುಪುವಂತೆ ನೋಡಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಈ ವಲಯವು ಅಸಂಘಟಿತವಾಗಿರುವುದರಿಂದ ನೋಂದಣಿ ಕಾರ್ಯಕ್ಕೆ ಹೆಚ್ಚಿನ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಡಾ. ರವಿ ಮಾತನಾಡಿ, ಗಿಗ್‌ ಕಾರ್ಮಿಕರು ಬೈಕ್‌ನಲ್ಲಿ ಓಡಾಡುವುದರಿಂದ ಬೆನ್ನಿನ ಸಮಸ್ಯೆ ಜತೆಗೆ ಚಿಕ್ಕ ವಯಸ್ಸಿನಲ್ಲಿಯೇ ಮೊಣಕಾಲಿನ ನೋವು ಸಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚಾಗಿ ಬೈಕ್‌ನಲ್ಲಿ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇರುವ ಕಾರಣ ಓಡಾಟ ತೀರಾ ಕಡಿಮೆ ಇರಲಿದೆ. ಹೀಗಾಗಿ ಗಿಗ್‌ ಕಾರ್ಮಿಕರು ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸಬೇಕಿದೆ. ಇದಲ್ಲದೇ, ಬಿಸಿಲಿಗೂ ಮೈವೊಡ್ಡುವುದರಿಂದ ಚರ್ಮದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದೆಡೆ ನಿರಂತರವಾಗಿ ಕುಳಿತು ಕೆಲಸ ಮಾಡುವವರಿಗೆ ಕಾಡುವ ಆರೋಗ್ಯ ಸಮಸ್ಯೆಗಳಂತೆ ಬೈಕ್‌ನಲ್ಲಿ ಹೆಚ್ಚು ಕಾಲ ಕುಳಿತು ಓಡಾಡುವವರಿಗೂ ಸಮಸ್ಯೆಗಳು ಎದುರಾಗುತ್ತವೆ. ಅತಿಯಾಗಿ ಬೈಕ್‌ಗಳನ್ನು ಓಡಿಸುವವರಿಗೆ ಕೆಲಸದ ಅವಧಿ ನಿಗದಿ ಮಾಡುವುದು ಸೂಕ್ತ ಎಂದು ತಿಳಿಸಿದರು.

ಕಲ್ಯಾಣ ಮಂಡಳಿ ಮತ್ತು ನಿಧಿಯ ಸಂಗ್ರಹ

ಈ ಮಸೂದೆಯ ಪ್ರಮುಖ ಅಂಶವೆಂದರೆ, ಗಿಗ್ ಕಾರ್ಮಿಕರ ಹಿತರಕ್ಷಣೆಗಾಗಿಯೇ ಒಂದು ವಿಶೇಷ "ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ" ಸ್ಥಾಪನೆ ಮಾಡುವುದು. ಈ ಮಂಡಳಿಯು ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದಲ್ಲದೆ, ಅವರ ಕಲ್ಯಾಣ ಕಾರ್ಯಕ್ರಮಗಳ ಜಾರಿಯನ್ನು ನಿರ್ವಹಿಸುತ್ತದೆ. ಇದರ ಜೊತೆಗೆ, ಕಾರ್ಮಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಅಧಿಕಾರವನ್ನು ಇದು ಹೊಂದಿರುತ್ತದೆ.

ಈ ಮಹತ್ವಾಕಾಂಕ್ಷಿ ಯೋಜನೆಗೆ ಹಣಕಾಸಿನ ಸಂಪನ್ಮೂಲಕ್ಕಾಗಿ, ಸ್ವಿಗ್ಗಿ, ಜೊಮಾಟೊ, ಊಬರ್‌, ಅಮೆಜಾನ್‌ನಂತಹ ಅಗ್ರಿಗೇಟರ್ ಕಂಪನಿಗಳು ತಮ್ಮ ಪ್ರತಿ ವಹಿವಾಟಿನ ಮೇಲೆ ನಿರ್ದಿಷ್ಟ ಮೊತ್ತವನ್ನು ಕಲ್ಯಾಣ ನಿಧಿಗೆ ಸೆಸ್ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಈ ಮೂಲಕ ಸಂಗ್ರಹವಾಗುವ ಹಣವನ್ನು ಸಂಪೂರ್ಣವಾಗಿ ಕಾರ್ಮಿಕರ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಗಾಗಿ ಮಾತ್ರ ಬಳಸಲು ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

"ಇದು ನಿಜಕ್ಕೂ ಮಹತ್ವದ ಹೆಜ್ಜೆ. ಆದರೆ ಇದರ ಯಶಸ್ಸು ಕಾಯ್ದೆಯ ಸಮರ್ಪಕ ಅನುಷ್ಠಾನದ ಮೇಲೆ ನಿಂತಿದೆ. ಗಿಗ್ ಕಾರ್ಮಿಕರು ಅಸಂಘಟಿತ ವಲಯದಲ್ಲಿ ಇರುವುದರಿಂದ, ನೋಂದಣಿ ಪ್ರಕ್ರಿಯೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲು," ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನೀತಿ ಆಯೋಗದ ಅಂದಾಜಿನಂತೆ, ಕರ್ನಾಟಕದಲ್ಲಿ ಸುಮಾರು 4 ಲಕ್ಷಕ್ಕೂ ಹೆಚ್ಚು ಗಿಗ್ ಕಾರ್ಮಿಕರಿದ್ದು, ಈ ಕಾಯ್ದೆಯು ಅವರ ಬದುಕಿನಲ್ಲಿ ಹೊಸ ಭರವಸೆಯ ಬೆಳಕನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ದೇಶದ ಇತರೆ ರಾಜ್ಯಗಳಿಗೂ ಈ ಕಾಯ್ದೆ ಮಾದರಿಯಾಗಿ ನಿಲ್ಲಲಿದೆ ಎಂದು ನಿರೀಕ್ಷಿಸಲಾಗಿದೆ. 

Tags:    

Similar News