ಮರ ಗಂಥಿ ಕಪ್ಪೆ | ರಾಜ್ಯ ಕಪ್ಪೆ ಘೋಷಿಸಲು ವಿಜ್ಞಾನಿ ಡಾ ಕೆ ವಿ ಗುರುರಾಜ್ ಪ್ರಸ್ತಾಪ

ಅಪರೂಪದ ಮರ ಗಂಥಿ ಕಪ್ಪೆ (ಮಲಬಾರ್ ಟ್ರೇಟೋಡ್)ಯನ್ನು ರಾಜ್ಯ ಕಪ್ಪೆಯಾಗಿ ಘೋಷಿಸಲು ಕಪ್ಪೆ ವಿಜ್ಞಾನಿ ಡಾಕ್ಟರ್ ಕೆ.ವಿ.ಗುರುರಾಜ್‌ ಅವರು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.;

Update: 2024-07-18 10:57 GMT
ಮರ ಗಂಥಿ ಕಪ್ಪೆ
Click the Play button to listen to article

ಪಶ್ವಿಮಘಟ್ಟದ ವಿಶೇಷ ಜೀವಸಂಕುಲಗಳಲ್ಲಿ ಒಂದಾದ, ಅಳಿವಿನಂಚಿನಲ್ಲಿರುವ ಮಲೆನಾಡಿನ ಮರ ಗಂಥಿ ಕಪ್ಪೆ (ಮಲಬಾರ್ ಟ್ರೀ ಟೋಡ್)ಯನ್ನು, ರಾಜ್ಯ ಕಪ್ಪೆಯಾಗಿ ಘೋಷಿಸಲು ಖ್ಯಾತ ಕಪ್ಪೆ ವಿಜ್ಞಾನಿ ಡಾ. ಕೆ.ವಿ.ಗುರುರಾಜ್‌ ಅವರು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.

ಮಳೆನಾಡಿನ ಅಪರೂಪದ ಮರವಾಸಿ ಮರಗಂಥಿ ಕಪ್ಪೆ (ಮಲಬಾರ್ ಟ್ರೀ ಟೋಡ್) ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಇತ್ತೀಚೆಗೆ ಮತ್ತೆ ಪತ್ತೆಯಾಗಿದೆ. ಯಲ್ಲಾಪುರ ತಾಲೂಕು ಬಾರೆಗ್ರಾಮದ ಕಪ್ಪೆತಳಿ ಸಂಶೋಧಕ ಗೋಪಾಲಕೃಷ್ಣ ಹೆಗಡೆ ಮಲಬಾರ್ ಟ್ರೀ ಟೋಡ್‌ ಇರುವಿಕೆಯನ್ನು ಪತ್ತೆಹಚ್ಚಿದ್ದಾರೆ. ಇದೀಗ ಈ ಕಪ್ಪೆಯನ್ನು ರಾಜ್ಯ ಕಪ್ಪೆಯಾಗಿ ಘೋಷಿಸಲು ಕೆ.ವಿ. ಗುರುರಾಜ್‌ ಅವರು ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ.

ಈ ಕುರಿತು ʼದ ಫೆಡರಲ್‌ ಕರ್ನಾಟಕʼಕ್ಕೆ ಮಾಹಿತಿ ನೀಡಿರುವ ಕೆ.ವಿ.ಗುರುರಾಜ್‌ ಅವರು, ಪಶ್ವಿಮ ಘಟ್ಟಗಳು ಜೀವವೈವಿಧ್ಯಗಳ ತಾಣವಾಗಿವೆ. ಅದರಲ್ಲೂ ಇಲ್ಲಿ ಕಂಡು ಬರುವ ಕಪ್ಪೆಗಳು ಬಹಳ ವಿಶಿಷ್ಟ. ಅಂತಹ ಒಂದು ಕಪ್ಪೆ ಮಲೆನಾಡಿನ ಮರಗಂಥಿ ಕಪ್ಪೆಗಳು. ವೈಜ್ಞಾನಿಕವಾಗಿ ಇವುಗಳನ್ನು ಮಲಬಾರ್ ಟ್ರೀ ಟೋಡ್ ಎಂದು ಕರೆಯಲಾಗುತ್ತದೆ. ಗುಂಝರ್ ಎಂಬ ವಿಜ್ಞಾನಿ ಇದನ್ನು 1875 ನೇ ಇಸವಿಯಲ್ಲಿ ಮಲಬಾರ್‌ ಪ್ರದೇಶದಲ್ಲಿ ಮೊದಲು ಪತ್ತೆ ಹಚ್ಚಿದ್ದರು. ಮುಂದಿನ ನೂರೈದು ವರ್ಷಗಳಲ್ಲಿ ಇದನ್ನು ಯಾರೂ ಕಂಡಿರಲಿಲ್ಲ. 1980ರಲ್ಲಿ ಎರಡನೇ ಬಾರಿಗೆ ಈ ಕಪ್ಪೆ ಕೇರಳದಲ್ಲಿ ಮತ್ತೊಮ್ಮೆ ಕಾಣಲು ಸಿಕ್ಕಿತ್ತು. ಹೀಗೆ ಅಪರೂಪವಾಗಿ ಕಾಣಿಸಿದ್ದರಿಂದ 2004ರಲ್ಲಿ ನಡೆದ ಜಾಗತಿಕ ಉಭಯಜೀವಿ ಅಧ್ಯಯನದಲ್ಲಿ ಈ ಕಪ್ಪೆಗಳನ್ನು ವಿನಾಶದ ಅಂಚಿನಲ್ಲಿರುವ ಕಪ್ಪೆ ಎಂದು ಘೋಷಿಸಲಾಯಿತು. ಈಗ ಕಪ್ಪೆಗಳು ಶರಾವತಿ ನದಿ ತೀರದಲ್ಲಿ ಕಂಡು ಬರುತ್ತಿದ್ದು, ಇವುಗಳನ್ನು ರಾಜ್ಯ ಕಪ್ಪೆಯಾಗಿ ಘೋಷಿಸುವಂತೆ ಈಶ್ವರ ಖಂಡ್ರೆ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಶ್ಚಿಮ ಘಟ್ಟದಲ್ಲಿ 115 ಕಪ್ಪೆ ಪ್ರಭೇದ

ರಾಜ್ಯದಲ್ಲಿ 115 ಪ್ರಭೇದಗಳ ಕಪ್ಪೆಗಳಿದ್ದು, ಮಲಬಾರ್ ಟ್ರೇಟೋಡ್ ಅತ್ಯಂತ ವಿಶೇಷ. ಮಾರ್ಚ್‌ನಲ್ಲಿ ಮರದ ಮೇಲೆ ಕುಳಿತು ಹೆಣ್ಣು ಕಪ್ಪೆಯನ್ನು ಆಕರ್ಷಿಸಲು ಕೂಗಲಾರಂಭಿಸುತ್ತವೆ. ಜೂನ್‌ನಲ್ಲಿ ಹೆಣ್ಣು ಕಪ್ಪೆ ಗಂಡು ಕಪ್ಪೆಯೊಂದಿಗೆ ಕೂಡುತ್ತದೆ. ಸಣ್ಣದಾಗಿ ಹರಿಯುವ ನೀರಿನಲ್ಲಿ ಮೊಟ್ಟೆಗಳನ್ನಿಟ್ಟು ಹೋಗುತ್ತವೆ. ಅವು ಗೊಜಮೊಟ್ಟೆಗಳಾಗಿ ಕಪ್ಪೆಗಳಾಗುತ್ತವೆ. ಮೊಟ್ಟೆ ಇಟ್ಟ ಬಳಿಕ ನಾಪತ್ತೆಯಾಗುವ ಈ ಕಪ್ಪೆ, ಆನಂತರ ಯಾರ ಕಣ್ಣಿಗೂ ಕಾಣಿಸುವುದಿಲ್ಲ. ಮೊಟ್ಟೆ ಇಟ್ಟ ಬಳಿಕ ಈ ಕಪ್ಪೆ ಮತ್ತೆ ವಾಪಸು ಮರದ ಮೇಲೆ ಹೋಗುತ್ತದೆಯೇ ಅಥವಾ ಬೇರೆ ಎಲ್ಲಿಯಾದರೂ ಬಚ್ಚಿಟ್ಟುಕೊಳ್ಳುತ್ತದೆಯೇ ಎಂಬುದು ಈವರೆಗೆ ತಿಳಿದುಬಂದಿಲ್ಲ. ಈ ನಿಗೂಢತೆ ಬಗ್ಗೆ ಈಗ ಅಧ್ಯಯನ ನಡೆಯುತ್ತಿದೆ ಎಂದು ಗುರುರಾಜ್‌ ಅವರು ಮಾಹಿತಿ ನೀಡಿದರು.

Tags:    

Similar News