ಮಂಡ್ಯದಲ್ಲಿ ಶಾಲಾ ಶುಲ್ಕ ಕಟ್ಟುವಂತೆ ಕಿರುಕುಳ; ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿ ಆತ್ಮಹತ್ಯೆ

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಅನಿಕೇತನ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಹೆಚ್.ಎಲ್. ಮಿಲನಾ ಎಂದು ಗುರುತಿಸಲಾಗಿದೆ. ಇವರು ಲಕ್ಷ್ಮಿ ಪ್ರಸಾದ್ ಮತ್ತು ಹೆಚ್.ಎಸ್. ರಶ್ಮಿ ದಂಪತಿಯ ಪುತ್ರಿ.;

Update: 2025-07-06 04:15 GMT

ಮಂಡ್ಯ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಶಾಲಾ ಆಡಳಿತ ಮಂಡಳಿಯ ಕಿರುಕುಳಕ್ಕೆ ಬೇಸತ್ತ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶಾಲಾ ಶುಲ್ಕ ಪಾವತಿಸದ ಕಾರಣಕ್ಕೆ ಶಿಕ್ಷಕರು ಮತ್ತು ಆಡಳಿತ ಮಂಡಳಿ ವಿದ್ಯಾರ್ಥಿನಿಗೆ ಬಹಿರಂಗವಾಗಿ ಅವಮಾನ ಮಾಡಿದೆ ಎಂದು ಆರೋಪಿಸಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಈ ದುರಂತ ಘಟನೆ ವರದಿಯಾಗಿದೆ.

ಪೋಷಕರ ಆಕ್ರೋಶ: "ಶಿಕ್ಷಣ ಹಕ್ಕು ಕಾಯ್ದೆಯಡಿ ಬಂದರೂ ಕಿರುಕುಳ!"

ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿಯನ್ನು ಅನಿಕೇತನ ವಿದ್ಯಾಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಹೆಚ್.ಎಲ್. ಮಿಲನಾ ಎಂದು ಗುರುತಿಸಲಾಗಿದೆ. ಇವರು ಲಕ್ಷ್ಮಿ ಪ್ರಸಾದ್ ಮತ್ತು ಹೆಚ್.ಎಸ್. ರಶ್ಮಿ ದಂಪತಿಯ ಪುತ್ರಿ. ಮಿಲನಾ 'ಶಿಕ್ಷಣ ಹಕ್ಕು ಕಾಯ್ದೆ' (RTE) ಅಡಿಯಲ್ಲಿ ಶಾಲೆಗೆ ಆಯ್ಕೆಯಾಗಿದ್ದರೂ, ಶಾಲಾ ಆಡಳಿತ ಮಂಡಳಿ, ಮುಖ್ಯಶಿಕ್ಷಕಿ ಶೈಲಜಾ ಸೇರಿದಂತೆ ಮೂವರು ಶಿಕ್ಷಕರು ಶಾಲಾ ಶುಲ್ಕ ಪಾವತಿಸುವಂತೆ ಮಿಲನಾಗೆ ನಿರಂತರವಾಗಿ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.

ಪೋಷಕರ ಆರೋಪದ ಪ್ರಕಾರ, ಪ್ರಾರ್ಥನಾ ಸಮಯದಲ್ಲಿ ಭಾಗವಹಿಸಲು ಸಹ ಮಿಲನಾಗೆ ಅವಕಾಶ ನೀಡದೆ ಬಹಿಷ್ಕಾರ ಹಾಕಲಾಗಿತ್ತು. ಶನಿವಾರದಂದು ಕೂಡ ಶಾಲೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಇದರಿಂದ ತೀವ್ರವಾಗಿ ಮನನೊಂದ ಮಿಲನಾ ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೋಷಕರು ದೂರು ನೀಡಿದ್ದಾರೆ. ಈ ಸಂಬಂಧ ಮದ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸಮವಸ್ತ್ರಕ್ಕಾಗಿ ಬಾಲಕಿ ಆತ್ಮಹತ್ಯೆ

ಇದೇ ರೀತಿಯ ಮತ್ತೊಂದು ಹೃದಯವಿದ್ರಾವಕ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ಇಲ್ಲಿ 13 ವರ್ಷದ ನಿವೇದಿತಾ ಎಂಬ ಬಾಲಕಿ ಸಮವಸ್ತ್ರದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಾಲಾ ಶಿಕ್ಷಕರು ನಿವೇದಿತಾಗೆ ಹೊಸ ಸಮವಸ್ತ್ರವನ್ನು ನೀಡಿದ್ದು, ಸೋಮವಾರದಿಂದ ಕಡ್ಡಾಯವಾಗಿ ಸಮವಸ್ತ್ರ ಧರಿಸಿ ಶಾಲೆಗೆ ಬರುವಂತೆ ಸೂಚಿಸಿದ್ದರು. ಪೋಷಕರು ಸಮವಸ್ತ್ರ ಹೊಲಿಯಲು ಟೈಲರ್‌ಗೆ ನೀಡಿದ್ದರೂ, ಅದು ಸಮಯಕ್ಕೆ ಸರಿಯಾಗಿ ಸಿದ್ಧವಾಗಿರಲಿಲ್ಲ. "ಸಮವಸ್ತ್ರ ಧರಿಸದೆ ಹೋದರೆ ಶಿಕ್ಷಕರು ಬೈತಾರೆ" ಎಂದು ಹೆದರಿದ ನಿವೇದಿತಾ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .  

Tags:    

Similar News