ಪಬ್ಲಿಕ್‌ ಪರೀಕ್ಷೆ ಗೊಂದಲ | ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್‌ ತಡೆ

ಸರ್ಕಾರಿ ಶಾಲೆಗಳಲ್ಲಿ ಮಾತ್ರ ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲಾಗಿತ್ತು. ಅಂಕಗಳ ವಿವರ ಒಳಗೊಂಡ ಅಂಕಪಟ್ಟಿಯನ್ನು ನೀಡದೆ, ಕೇವಲ ಪಾಸ್‌ ಎಂಬ ಒಂದು ಸಾಲಿನ ಮಾಹಿತಿಯನ್ನು ಮಕ್ಕಳು ಮತ್ತು ಪೋಷಕರಿಗೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಹಲವು ಪೋಷಕರು ಇಂತಹ ಫಲಿತಾಂಶದ ಕುರಿತು ಆಕ್ಷೇಪವೆತ್ತಿದ್ದರು. ಈ ನಡುವೆ, ಸೋಮವಾರ ಬೆಳಿಗ್ಗೆ ಸುಪ್ರೀಂಕೋರ್ಟ್‌ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ.;

Update: 2024-04-08 06:56 GMT

ಕರ್ನಾಟಕದ ರಾಜ್ಯ ಪಠ್ಯಕ್ರಮದ 5, 8 ಮತ್ತು 9 ನೇ  ತರಗತಿಯ ಬೋರ್ಡ್‌ ಪರೀಕ್ಷೆ(ಪಬ್ಲಿಕ್‌ ಪರೀಕ್ಷೆ)ಯ ಫಲಿತಾಂಶ ಪ್ರಕಟಿಸದಂತೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿದೆ.

ಪರೀಕ್ಷೆ ಬೇಕೆ? ಬೇಡವೇ? ಎಂಬಲ್ಲಿಂದ ಹಿಡಿದು ಪರೀಕ್ಷೆ ದಿನಾಂಕ, ಮೌಲ್ಯಮಾಪನ, ಫಲಿತಾಂಶ ಪ್ರಕಟಣೆಯವರೆಗೆ ತಿಂಗಳುಗಳಿಂದ ಸಂಪೂರ್ಣ ಗೊಂದಲ ಮತ್ತು ಅವ್ಯವಸ್ಥೆಯ ಆಗರವಾಗಿರುವ ಫಲಿತಾಂಶವನ್ನು ರಾಜ್ಯ ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸೋಮವಾರ ಬೆಳಿಗ್ಗೆ ಪ್ರಕಟಿಸಿತ್ತು. ಆದರೆ, ಮೌಲ್ಯಮಾಪನದಲ್ಲಿ ಗಂಭೀರ ಲೋಪಗಳಾಗಿವೆ ಎಂದು ಆಕ್ಷೇಪವೆತ್ತಿದ್ದ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್)‌ ಫಲಿತಾಂಶವನ್ನು ಪ್ರಕಟಿಸಿರಲಿಲ್ಲ.  

ಸರ್ಕಾರಿ ಶಾಲೆಗಳಲ್ಲಿ ಮಾತ್ರ ತರಾತುರಿಯಲ್ಲಿ ಫಲಿತಾಂಶ ಪ್ರಕಟಿಸಲಾಗಿತ್ತು. ಅಂಕಗಳ ವಿವರ ಒಳಗೊಂಡ ಅಂಕಪಟ್ಟಿಯನ್ನು ನೀಡದೆ, ಕೇವಲ ಪಾಸ್‌ ಎಂಬ ಒಂದು ಸಾಲಿನ ಮಾಹಿತಿಯನ್ನು ಮಕ್ಕಳು ಮತ್ತು ಪೋಷಕರಿಗೆ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಹಲವು ಪೋಷಕರು ಇಂತಹ ಫಲಿತಾಂಶದ ಕುರಿತು ಆಕ್ಷೇಪವೆತ್ತಿದ್ದರು.

ಈ ನಡುವೆ, ಸೋಮವಾರ ಬೆಳಿಗ್ಗೆ ಸುಪ್ರೀಂಕೋರ್ಟ್‌ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ.

ಬೋರ್ಡ್‌ ಪರೀಕ್ಷೆ ನಡೆಸುವುದು ಕಡ್ಡಾಯ ಶಿಕ್ಷಣ ಕಾಯ್ದೆಯ ಮತ್ತು ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ರುಪ್ಸಾ(ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ) ಮತ್ತು ʼಅವರ್‌ ಸ್ಕೂಲ್‌ʼ ಸಂಘಟನೆಗಳು ಕೋರ್ಟ್‌ ಮೆಟ್ಟಿಲೇರಿದ್ದವು. ಪ್ರಕರಣ ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳ ನಡುವೆ ವಿಚಾರಣೆ ನಡೆದು, ಅಂತಿಮವಾಗಿ ರಾಜ್ಯ ಹೈಕೋರ್ಟ್‌ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು. ಮಾರ್ಚ್‌ 28 ರಂದು ಅಂತಿಮವಾಗಿ ಇಲಾಖೆ ಪರೀಕ್ಷೆ ಮುಗಿಸಿತ್ತು. ಬಳಿಕ ಮೌಲ್ಯಮಾಪನ ನಡೆದು ನಿಗದಿಯಂತೆ ಏ. 10 ರಂದು ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಫಲಿತಾಂಶ ಘೋಷಿಸಲು ಇಲಾಖೆ ವೇಳಾಪಟ್ಟಿ ಬಿಡುಗಡೆ ಮಾಡಿತ್ತು.

ಆದರೆ, ಈ ನಡುವೆ ಕಳೆದ ಶನಿವಾರ ದಿಢೀರನೇ ಶೈಕ್ಷಣಿಕ ವೇಳಾಪಟ್ಟಿಗೆ ವಿರುದ್ಧವಾಗಿ ನಿಗದಿತ ದಿನಕ್ಕೂ ಎರಡು ದಿನ ಮುನ್ನ, ಅಂದರೆ ಏ. 8 ರ ಸೋಮವಾರ ಬೆಳಿಗ್ಗೆ 9 ಗಂಟೆ ಒಳಗೇ ಫಲಿತಾಂಶ ಪ್ರಕಟಿಸುವಂತೆ ಶಿಕ್ಷಣ ಇಲಾಖೆ ಎಲ್ಲಾ ಶೈಕ್ಷಣಿಕ ಜಿಲ್ಲೆಗಳ ಉಪ ನಿರ್ದೇಶಕರು ಮತ್ತು ಶಾಲಾ ಮುಖ್ಯಸ್ಥರಿಗೆ ಸುತ್ತೋಲೆ ಕಳಿಸಿತ್ತು. ತರಾತುರಿಯಲ್ಲಿ ಆದೇಶ ಕಳಿಸಿದ ಇಲಾಖೆಯ ಕ್ರಮ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.

ಅಲ್ಲದೆ, ಸೋಮವಾರ ಬೆಳಿಗ್ಗೆ ಕೋರ್ಟ್‌ ಆದೇಶದ ಮುನ್ನವೇ ಫಲಿತಾಂಶ ಪ್ರಕಟಿಸಿ ಕೈತೊಳೆದುಕೊಳ್ಳುವ ಜಾಣತನವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ತೋರಿದ್ದಾರೆ. ಆದರೆ, ಶಾಲೆಗಳಿಗೆ ಯಾವುದೇ ರೀತಿಯ ಅಂಕಪಟ್ಟಿಯಾಗಲೀ, ವಿಷಯವಾರು ಅಥವಾ ಪಡೆದ ಒಟ್ಟಾರೆ ಅಂಕದ ಮಾಹಿತಿಯಾಗಲೀ ತಲುಪಿಲ್ಲ. ಬದಲಾಗಿ ಕೇವಲ ಮಕ್ಕಳ ಹೆಸರಿನ ಮುಂದೆ ಪಾಸ್‌ ಎಂದು ಪ್ರಕಟಿಸಲಾಗಿದೆ. ಇಂತಹ ಅಪೂರ್ಣ, ಅವ್ಯವಸ್ಥಿತ ಫಲಿತಾಂಶ ನೀಡುವ ಮೂಲಕ ಇಲಾಖೆ ಮಕ್ಕಳು ಮತ್ತು ಪೋಷಕರನ್ನು ವಂಚಿಸುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿತ್ತು.

ಈ ನಡುವೆ ರುಪ್ಸಾ ಮತ್ತು ಅವರ್‌ ಸ್ಕೂಲ್ಸ್‌ ಸಂಘಟನೆಗಳ ಮೇಲ್ಮನವಿ ವಿಚಾರಣೆಗೆ ಕೈಗೆತ್ತಿಕೊಂಡು ಸುಪ್ರೀಂಕೋರ್ಟ್‌, ಸೋಮವಾರ ಬೆಳಿಗ್ಗೆ 11.30 ರ ಹೊತ್ತಿಗೆ ಪಬ್ಲಿಕ್‌ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ. ಯಾವುದೇ ರೀತಿಯಲ್ಲೂ ಫಲಿತಾಂಶ ಪ್ರಕಟಿಸಬಾರದು. ಯಾವುದೇ ಮಾಧ್ಯಮದ ಮೂಲಕವೂ ಫಲಿತಾಂಶದ ಕುರಿತು ಮಕ್ಕಳಿಗೆ ಮತ್ತು ಪೋಷಕರಿಗೆ ಮಾಹಿತಿ ನೀಡಬಾರದು ಎಂದು ಕೋರ್ಟ್‌ ಸ್ಪಷ್ಟ ಆದೇಶ ನೀಡಿದೆ.

ಬೋರ್ಡ್‌ ಪರೀಕ್ಷೆ ನಡೆಸಬಹುದು ಎಂಬ ರಾಜ್ಯ ಹೈಕೋರ್ಟ್‌ ಆದೇಶ ದೋಷಪೂರಿತವಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟಿನ ನ್ಯಾ. ಬೆಲಾ ತ್ರಿವೇದಿ ಹಾಗೂ ಪಂಕಜ್‌ ಮಿತ್ತಲ್‌ ಅವರನ್ನೊಳಗೊಂಡ ನ್ಯಾಯಪೀಠ, ಪರೀಕ್ಷೆಯ ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕ್ರಿಯೆಗಳಿಗೆ ಸಂಪೂರ್ಣ ತಡೆ ನೀಡಿದೆ. ಪೋಷಕರಿಗೆ ಯಾವುದೇ ರೀತಿಯಲ್ಲೂ ಫಲಿತಾಂಶದ ಮಾಹಿತಿ ನೀಡಬಾರದು ಎಂದೂ ಹೇಳಿದೆ.

ರುಪ್ಸಾ ಮತ್ತು ಅವರ್‌ ಸ್ಕೂಲ್‌ ಪರವಾಗಿ ಹಿರಿಯ ನ್ಯಾಯವಾದಿಗಳಾದ ಕೆ ವಿ ಧನಂಜಯ್‌, ಎ ವೇಲನ್‌, ಡಿ ಎಂ ಸಾಯಿನಾಥ್‌, ಅನನ್ಯ ಕೃಷ್ಣ ಮತ್ತು ಎಸ್‌ ಜೆ ಧೀರಜ್‌ ವಾದ ಮಂಡಿಸಿದ್ದರು.

ಈ ನಡುವೆ, ಕೋರ್ಟ್‌ ಆದೇಶ ಹೊರಬೀಳುವ ಮುನ್ನವೇ ಬಹುತೇಕ ಶಾಲೆಗಳಲ್ಲಿ ಕೇವಲ ʼಪಾಸ್‌ʼ ಎಂಬ ಷರಾದೊಂದಿಗೆ ವಿದ್ಯಾರ್ಥಿಗಳ ಪಟ್ಟಿಯೊಂದಿಗೆ ಫಲಿತಾಂಶ ಪ್ರಕಟಿಸಲಾಗಿದೆ.

Tags:    

Similar News