ಎಸ್‌ಸಿ,ಎಸ್‌ಟಿ ಆರೋಗ್ಯ ವೆಚ್ಚ | 17 ದುಬಾರಿ ಕಾಯಿಲೆಗಳ ಚಿಕಿತ್ಸೆಗೆ ನೆರವು; ರಾಜ್ಯ ಸರ್ಕಾರ ಆದೇಶ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಅಡಿಯಲ್ಲಿ ಪ್ರಸ್ತುತ ಲಭ್ಯ ಇರುವ 47 ರೂ ಕೋಟಿ ಮೊತ್ತದಲ್ಲಿ ಕಾರ್ಪಸ್ ಫಂಡ್ ಸೃಜಿಸಿ ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ.

Update: 2024-12-23 06:19 GMT
Click the Play button to listen to article

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದ ಜನರಿಗೆ ಅಪರೂಪದ ಮತ್ತು ದುಬಾರಿ ವೆಚ್ಚದ 17 ಕಾಯಿಲೆಗಳ ಚಿಕಿತ್ಸಾ ವೆಚ್ಚವನ್ನು 'ಕಾರ್ಪಸ್ ಫಂಡ್' ಸ್ಥಾಪಿಸಿ ಭರಿಸುವ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆ (ಎಸ್‌ಸಿಎಸ್‌ಪಿ, ಟಿಎಸ್‌ಪಿ) ಅಡಿಯಲ್ಲಿ ಪ್ರಸ್ತುತ ಲಭ್ಯ ಇರುವ 47 ರೂ ಕೋಟಿ ಮೊತ್ತದಲ್ಲಿ ಕಾರ್ಪಸ್ ಫಂಡ್ ಸೃಜಿಸಿ ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ.

ವಿರಳ ಮತ್ತು ದುಬಾರಿ ವೆಚ್ಚದ ಒಟ್ಟು 33 ಕಾಯಿಲೆಗಳಲ್ಲಿ 16 ಕಾಯಿಲೆಗಳಿಗೆ ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ, ಜೀವ ಸಾರ್ಥಕತೆ ಮುಂತಾದ ಯೋಜನೆಗಳಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಉಳಿದ 17 ಕಾಯಿಲೆಗಳ ಚಿಕಿತ್ಸಾ ವಿಧಾನಗಳ ವೆಚ್ಚವನ್ನು ಬಡ್ಡಿ ಮೊತ್ತದಲ್ಲಿ ಭರಿಸಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರ ಯಾವುದಾದರೂ ಯೋಜನೆಗಳಲ್ಲಿ ಎಲ್ಲ ಸಮುದಾಯಗಳ ಜನಸಂಖ್ಯೆಗೆ ಅನ್ವಯವಾಗುವಂತೆ ಪ್ರಸ್ತಾಪಿತ 17 ಚಿಕಿತ್ಸಾ ವಿಧಾನಗಳಲ್ಲಿ ಯಾವುದಾದರೂ ಒಂದನ್ನು ಸೇರಿಸಿದರೆ, ಅವುಗಳನ್ನು ಈ ಯೋಜನೆಯಿಂದ ಕೈಬಿಡಲಾಗುವುದು ಎಂದೂ ಇಲಾಖೆ ಸ್ಪಷ್ಟಪಡಿಸಿದೆ. 

ಡಿ. 6ರಂದು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ 17 ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತ್ತು. 7 ಲಕ್ಷ ಚಿಕಿತ್ಸಾ ವೆಚ್ಚ ತಗಲುವ ಅಸ್ಥಿ ಮಜ್ಜೆ ಕಸಿ (ಬೋನ್ ಮ್ಯಾರೊ) ಕಾಯಿಲೆ, 3.25 ರೂ ಲಕ್ಷ ವೆಚ್ಚ ತಗಲುವ ಆಂಜಿಯೋ ಪ್ಲಾಸ್ಟಿ, 4 ಲಕ್ಷಕ್ಕೂ ಹೆಚ್ಚು ವೆಚ್ಚ ತಗಲುವ ಹೃದಯ ಸಂಬಂಧಿ ಕಾಯಿಲೆಗಳು ಈ 17 ಕಾಯಿಲೆಗಳ ಚಿಕಿತ್ಸಾ ಪಟ್ಟಿಯಲ್ಲಿವೆ.

Tags:    

Similar News