ರಾಜ್ಯದಲ್ಲಿ ಎಸ್‌ಸಿ ಒಳಮೀಸಲಾತಿ ಜಾರಿ: 101 ಜಾತಿಗಳಿಗೆ 3 ಪ್ರವರ್ಗಗಳಲ್ಲಿ ಹಂಚಿಕೆ, ಸರ್ಕಾರದಿಂದ ಅಧಿಕೃತ ಅಧಿಸೂಚನೆ
ಈ ಹಿಂದೆ ಆಯೋಗವು ಐದು ಪ್ರವರ್ಗಗಳಾಗಿ ವಿಂಗಡಿಸಲು ಶಿಫಾರಸು ಮಾಡಿತ್ತು, ಆದರೆ ಸರ್ಕಾರವು ಅದನ್ನು ಪ್ರವರ್ಗ-ಎ, ಪ್ರವರ್ಗ-ಬಿ, ಮತ್ತು ಪ್ರವರ್ಗ-ಸಿ ಎಂದು ಮೂರು ಗುಂಪುಗಳಿಗೆ ಸೀಮಿತಗೊಳಿಸಿದೆ.;
ಶಕ್ತಿಕೇಂದ್ರ ವಿಧಾನಸೌಧ
ರಾಜ್ಯದಲ್ಲಿ ದಶಕಗಳಿಂದ ಉಳಿದುಕೊಂಡಿದ್ದ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಸಚಿವ ಸಂಪುಟದ ತೀರ್ಮಾನದ ಬೆನ್ನಲ್ಲೇ, ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಏಕಸದಸ್ಯ ಆಯೋಗದ ಶಿಫಾರಸುಗಳನ್ನು ಆಧರಿಸಿ, ಕೆಲವು ಮಾರ್ಪಾಡುಗಳೊಂದಿಗೆ ಒಳಮೀಸಲಾತಿ ಹಂಚಿಕೆ ಮಾಡಿ ಸೋಮವಾರ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಈ ಹೊಸ ವ್ಯವಸ್ಥೆಯು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳನ್ನು ಮೂರು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಈ ಹಿಂದೆ ಆಯೋಗವು ಐದು ಪ್ರವರ್ಗಗಳಾಗಿ ವಿಂಗಡಿಸಲು ಶಿಫಾರಸು ಮಾಡಿತ್ತು, ಆದರೆ ಸರ್ಕಾರವು ಅದನ್ನು ಪ್ರವರ್ಗ-ಎ, ಪ್ರವರ್ಗ-ಬಿ, ಮತ್ತು ಪ್ರವರ್ಗ-ಸಿ ಎಂದು ಮೂರು ಗುಂಪುಗಳಿಗೆ ಸೀಮಿತಗೊಳಿಸಿದೆ.
ಸರ್ಕಾರದ ಆದೇಶದ ಪ್ರಕಾರ, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪ್ರಸ್ತುತ ಇರುವ ಶೇ. 17ರಷ್ಟು ಮೀಸಲಾತಿಯನ್ನು ಈ ಪ್ರವರ್ಗಗಳಿಗೆ ಹಂಚಿಕೆ ಮಾಡಲಾಗಿದೆ. ಪ್ರವರ್ಗ-ಎ (ಎಡಗೈ ಸಂಬಂಧಿತ) ಮತ್ತು ಪ್ರವರ್ಗ-ಬಿ (ಬಲಗೈ ಸಂಬಂಧಿತ) ಸಮುದಾಯಗಳಿಗೆ ತಲಾ ಶೇ. 6ರಷ್ಟು ಮೀಸಲಾತಿ ನಿಗದಿಪಡಿಸಲಾಗಿದೆ. ಉಳಿದಂತೆ, ಸ್ಪೃಶ್ಯ ಮತ್ತು ಇತರೆ ಸಮುದಾಯಗಳನ್ನು ಒಳಗೊಂಡ ಪ್ರವರ್ಗ-ಸಿಗೆ ಶೇ. 5ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಲಾಗಿದೆ.
ನೇಮತ ತಕ್ಷಣ ಆರಂಭ
ಒಳಮೀಸಲಾತಿ ಜಾರಿಯಿಂದಾಗಿ ತಡೆಹಿಡಿಯಲಾಗಿದ್ದ ನೇರ ನೇಮಕಾತಿ ಪ್ರಕ್ರಿಯೆಗಳನ್ನು ಕೂಡಲೇ ಆರಂಭಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸರ್ಕಾರ ಸ್ಪಷ್ಟ ಸೂಚನೆ ನೀಡಿದೆ. ಜೊತೆಗೆ, ಎಲ್ಲಾ ಸರ್ಕಾರಿ ಇಲಾಖೆಗಳು, ನಿಗಮ-ಮಂಡಳಿಗಳು ಮತ್ತು ಸಂಸ್ಥೆಗಳಲ್ಲಿ ಮುಂಬಡ್ತಿ ಪ್ರಕ್ರಿಯೆಯನ್ನು ಸಹ ಮುಂದುವರಿಸಲು ಆದೇಶದಲ್ಲಿ ತಿಳಿಸಲಾಗಿದೆ.
ತಮ್ಮ ಮೂಲ ಜಾತಿಯನ್ನು ತಿಳಿಸದ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಸಮುದಾಯಗಳು, ಪ್ರವರ್ಗ-ಎ ಅಥವಾ ಪ್ರವರ್ಗ-ಬಿಯಲ್ಲಿ ಮೀಸಲಾತಿ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿರುವುದು ಈ ಆದೇಶದ ಮತ್ತೊಂದು ಮಹತ್ವದ ಅಂಶವಾಗಿದೆ.