Save Netravati River| ಜೀವನದಿ ಒಡಲಿನ ʼಉಳಿಯ ದ್ವೀಪʼ ಬಗೆಯುತ್ತಿರುವ ಮರಳುಧಂಧೆ

ಮರಳು ದಂಧೆ ಕಾರಣಕ್ಕಾಗಿ ಪಶ್ಚಿಮ ಘಟ್ಟ- ಕರಾವಳಿಯನ್ನು ಬೆಸೆದ ಅರಬ್ಬೀ ಸಮುದ್ರ ಸೇರುವ ಜೀವನದಿ ನೇತ್ರಾವತಿ ಒಡಲಿನ ದ್ವೀಪಗಳೇ ಇಲ್ಲವಾಗುವ ಆತಂಕದ ಸುದ್ದಿಯೊಂದು ಬಂದಿದೆ. ರೋಸಿ ಹೋದ ಜನ ಕೊನೆಗೂ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದಿದ್ದಾರೆ.;

Update: 2024-10-01 03:20 GMT

ಮರಳುದಂಧೆ ಕೇವಲ ನದಿ ಅಥವಾ ಒಂದು ಪ್ರದೇಶದ ಪರಿಸರ ವ್ಯವಸ್ಥೆಯನ್ನು ಕೆಡಿಸುತ್ತದೆ ಎಂದು ಭಾವಿಸಬೇಕಾಗಿಲ್ಲ. ನಾಡಿನಾದ್ಯಂತ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ಮನುಷ್ಯರ ನೆಲೆ ಮತ್ತು ಜೀವಗಳಿಗೆ, ಜೀವನೋಪಾಯಕ್ಕೂ ಕುತ್ತು ತಂದಿದೆ. ರಾಜ್ಯದ ತುಂಗಭದ್ರಾ, ಕಾವೇರಿ ಸಹಿತ ಜೀವನದಿಗಳ ಒಡಲು ಬಗೆದು ಮರಳುಗಾರಿಕೆ ಮಾಡಿದ ಪರಿಣಾಮಗಳು ಒಂದೆರಡಲ್ಲ.

ಇದೀಗ ಪಶ್ಚಿಮ ಘಟ್ಟ- ಕರಾವಳಿಯನ್ನು ಬೆಸೆದ ಅರಬ್ಬೀ ಸಮುದ್ರ ಸೇರುವ ಜೀವನದಿ ನೇತ್ರಾವತಿವ ಒಡಲಿನ ದ್ವೀಪಗಳೇ ಇಲ್ಲವಾಗುವ ಆತಂಕದ ಸುದ್ದಿಯೊಂದು ಬಂದಿದೆ. ರೋಸಿ ಹೋದ ಜನ ಕೊನೆಗೂ ವ್ಯವಸ್ಥೆಯ ವಿರುದ್ಧ ತಿರುಗಿಬಿದ್ದಿದ್ದಾರೆ.

ನಿಸರ್ಗವನ್ನೇ ಬಗೆದು ಈಗ ನಾಗರಿಕ ನೆಲೆಯನ್ನೇ ಕಿತ್ತುಕೊಳ್ಳಲು ಹೊರಟವರ ವಿರುದ್ಧ ಉಳಿಯ, ಪಾವೂರು, ರಾಣಿಪುರ, ಉಳ್ಳಾಲ ಹೊಯ್ಗೆ (ಅರಬ್ಬೀ ಸಮುದ್ರದ ಅಳಿವೆ ಬಾಗಿಲು) ಸುತ್ತಮುತ್ತಲಿನ ಜನ ಸಿಡಿದೆದ್ದಿದ್ದಾರೆ. ನೇತ್ರಾವತಿ ನದಿ ಆವರಿಸಿರುವ ನಡುಗಡ್ಡೆ ಪ್ರದೇಶವು ಮರಳುಗಳ್ಳರ ಹಾವಳಿಯಿಂದ ನಲುಗಿದೆ. ಸುಮಾರು 80ರಿಂದ 100 ಎಕರೆಗಳಷ್ಟಿದ್ದ ದ್ವೀಪಗಳ ಪ್ರದೇಶ ಮರಳು ದಂಧೆಯ ಪರಿಣಾಮ ಅರ್ಧಕ್ಕಿಳಿದಿದೆ.

ಈ ಮೊದಲು ಮಾಧ್ಯಮಗಳಲ್ಲಿ ಕ್ಷೀಣ ಧ್ವನಿಯಲ್ಲಿ ಕೇಳಿಬಂದ ಇಲ್ಲಿನ ಅಳಲು ಇತ್ತೀಚೆಗೆ ಮಂಗಳೂರಿನಲ್ಲಿ ಆಕ್ರೋಶದ ಧ್ವನಿಯಾಗಿ ಸ್ಫೋಟಗೊಂಡಿತು. ಈ ಧ್ವನಿಗೆ ಮಂಗಳೂರಿನ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಸಾಥ್ ನೀಡಿದರು.

ಈ ಅಳಲಿನ ಜಾಡು ಹಿಡಿದು ಹೋದಾಗ ಹಲವು ಹೊಸ ಹೊಳಹುಗಳು ತೆರೆದುಕೊಂಡವು.

ದ್ವೀಪವೇ ಇರಲಿಲ್ಲ!

ಉಳಿಯ ದ್ವೀಪ ನೇತ್ರಾವತಿ ನದಿದಂಡೆಯ ಮೇಲಿದೆ. ಮಂಗಳೂರಿನಿಂದ ದಕ್ಷಿಣಕ್ಕೆ. ಸುಮಾರು 250 ವರ್ಷಗಳಿಗೂ ಹಿಂದೆ ಇದೊಂದು ನದಿ ಪಾತ್ರದ ಸ್ವಲ್ಪ ಎತ್ತರದ ಪ್ರದೇಶವಾಗಿತ್ತು. ಅಂದಾಜು ಸುಮಾರು 100 ಎಕರೆಗೂ ಮೇಲ್ಪಟ್ಟಿತ್ತು.

ದಿಣ್ಣೆಯೊಂದು ದ್ವೀಪವಾದದ್ದು

1960ರ ದಶಕದಲ್ಲಿ ಬಂದ ಭಾರೀ ಪ್ರಮಾಣದ ನೆರೆಯಿಂದಾಗಿ ನೇತ್ರಾವತಿಯ ರಭಸದ ಹರಿವು ಉಳಿಯ ಪಾವೂರು ಪ್ರದೇಶವನ್ನು ನಡುಗಡ್ಡೆಯಾಗಿಸಿತು. ಆ ಮೇಲೆ ಪ್ರತಿ ವರ್ಷ ಭೂ ಸವೆತ ಉಂಟಾಗಿ ನದಿ ದಂಡೆಗೂ ಈ ದ್ವೀಪಕ್ಕೂ ಅಂತರ ಹೆಚ್ಚುತ್ತಲೇ ಹೋಯಿತು. ಈಗ ಸುಮಾರು 900 ಅಡಿಗಳಷ್ಟು ಅಂತರವಿದೆ ಎನ್ನುತ್ತಾರೆ ಇಲ್ಲಿ ಬಾಲಯೇಸು ಚರ್ಚ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಫಾ. ಜೆರಾಲ್ಡ್ ಲೋಬೋ.

ಜೆರಾಲ್ಡ್ ಲೋಬೋ ಅವರು ಇಲ್ಲಿನ ಇತಿಹಾಸವನ್ನು ಅಧ್ಯಯನ ಮಾಡಿದವರು. 1974ರಲ್ಲಿ ಬಂದ ಮಹಾ ನೆರೆ ಈ ದ್ವೀಪವನ್ನು ದಡದಿಂದ ಮತ್ತಷ್ಟು ದೂರ ಮಾಡಿತು. ಸುತ್ತ ನದಿ, ನಡುವಿನ ಭೂ ಪ್ರದೇಶ ನೈಸರ್ಗಿಕವಾಗಿ ದ್ವೀಪ ಸೃಷ್ಟಿಗೆ ಕಾರಣವಾಯಿತು. ಅಂದು ಸುಮಾರು 200 ಕುಟುಂಬಗಳು ಈ ದ್ವೀಪದಲ್ಲಿ ನೆಲೆಸಿದ್ದವು. ಈಗ ಸುಮಾರು 40 ಕುಟುಂಬಗಳು ಈ ದ್ವೀಪದಲ್ಲಿ ನೆಲೆಯಾಗಿದ್ದು, ಆತಂಕದಿಂದಲೇ ದಿನ ಕಳೆಯುತ್ತಿವೆ.

ನಡುರಾತ್ರಿಯಲ್ಲಿ ಗುರುಗುಡುವ ಬೋಟ್‌ಗಳು

ಸುಮಾರು 20 ವರ್ಷಗಳಿಂದ ನೇತ್ರಾವತಿ ನದಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮರಳುಗಾರಿಕೆ ಮೇಲೆ ಹೇಳಿದ ಮೂರೂ ದ್ವೀಪ ಪ್ರದೇಶಗಳ ಭೂಮಿ, ಜನಜೀವನ ಮತ್ತು ಪರಿಸರ ವ್ಯವಸ್ಥೆ ಅಲ್ಲೋಲಕಲ್ಲೋಲವಾಯಿತು ಎನ್ನುತ್ತಾರೆ. ಫಾ.ಲೋಬೋ ಮತ್ತು ಉಳ್ಳಾಲ ಹೊಯ್ಗೆ ಪ್ರದೇಶದ ನಿವಾಸಿ ಪ್ರೇಮ್ ಪ್ರಕಾಶ್ ಡಿಸೋಜಾ.

ಹಣಬಲ ತೋಳ್ಬಲದ ಮುಂದೆ ನಾವೇನೂ ಅಲ್ಲ!

‘ಕೆಲಕಾಲ ಹಗಲು ಹೊತ್ತಿನಲ್ಲಷ್ಟೇ ಬರುತ್ತಿದ್ದ ಮರಳು ದಂಧೆಯವರು ಈಗ ರಾತ್ರಿ ವೇಳೆಯಲ್ಲೂ ಬರುತ್ತಿದ್ದಾರೆ. ಒಂದೊಂದು ಬೋಟ್ನಲ್ಲಿ ಮೂರು ಯೂನಿಟ್ಗಳಷ್ಟು (ಸರಾಸರಿ ಒಂದು ದೊಡ್ಡ ಟಿಪ್ಪರ್ನಲ್ಲಿ ತುಂಬುವಷ್ಟು) ಮರಳನ್ನು ದ್ವೀಪ ಪ್ರದೇಶದಿಂದ ಕೊರೆದು ತೆಗೆಯುತ್ತಿದ್ದಾರೆ. ಬಿಹಾರ, ಒಡಿಶಾ ಕಡೆಯ ಕಾರ್ಮಿಕರು ಇದ್ದಾರೆ. ಅವರಿಗೆ ಭಾಷೆಯೂ ಬರುವುದಿಲ್ಲ. ನಡುರಾತ್ರಿ ಕಾದು ಅವರನ್ನು ಎದುರಿಸುವ ಸಾಮರ್ಥ್ಯವೂ ನಮ್ಮಲ್ಲಿಲ್ಲ. ಪೊಲೀಸರು ಹಗಲು ವೇಳೆ ಬಂದು ಸುಮ್ಮನೆ ನೋಡಿ ಹೋಗುತ್ತಿದ್ದಾರೆ ಅಷ್ಟೇ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು ಅವರು.

ತಿರುಗಿಬಿದ್ದ ಜನರು

ಇತ್ತೀಚೆಗೆ ಮಂಗಳೂರಿನಲ್ಲಿ ಕಥೋಲಿಕ್ ಸಭಾ ನೇತೃತ್ವದಲ್ಲಿ ಸಮಾನ ಮನಸ್ಕ ಸಂಘಟನೆಗಳು ತಾಲೂಕುಮಟ್ಟದ ಬೃಹತ್ ಹೋರಾಟ ನಡೆಸಿದವು. ಸಾವಿರಾರು ಜನ ಭಾಗಿಯಾಗಿದ್ದ ಈ ಸಮಾವೇಶದಲ್ಲಿ ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಯಿತು. ನೇತ್ರಾವತಿಯಲ್ಲಿ ಈಗ ಹರಿಯುತ್ತಿರುವುದು ನೀರಲ್ಲ. ಜನರ ಕಣ್ಣೀರು ಎಂದೇ ಹೋರಾಟಗಾರರು ಭಾವುಕರಾಗಿ ಅಳಿಯುತ್ತಿರುವ ದ್ವೀಪಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಈ ಹೋರಾಟಕ್ಕೂ ಮುನ್ನ ನದಿಯಲ್ಲಿ ಇಳಿದು ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದರು.

‘ಇಲ್ಲಿನ ಪರಿಸ್ಥಿತಿಯ ಬಗ್ಗೆ ನೇತ್ರಾವತಿ ಹರಿವಿನ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದೇವೆ. ಗಣಿ ಮತ್ತು ಭೂವಿಜ್ಞಾನ ಇಲಾಖೆಯವರಿಗೂ ದೂರು ನೀಡಿದ್ದೇವೆ. ಆದರೂ ಇನ್ನೂ ಸಮಸ್ಯೆ ಬಗೆಹರಿದಿಲ್ಲವೆಂದರೆ ಇವರೆಲ್ಲರೂ ಶಾಮೀಲಾಗಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ’ ಎಂದು ಆರೋಪಿಸಿದರು ಈ ದ್ವೀಪದ ನಿವಾಸಿಗಳು.

‘ಹೆಸರು ಉಲ್ಲೇಖಿಸಲು ಹಿಂದೇಟು ಹಾಕಿದ ದ್ವೀಪ ನಿವಾಸಿಗಳು, ಇಲ್ಲಿ ಸೊಲ್ಲೆತ್ತಿದರೆ ನಮ್ಮನ್ನೇ ಗುರಿ ಮಾಡುತ್ತಾರೆ. ಒಂದೆಡೆ ಆಡಳಿತ ವ್ಯವಸ್ಥೆ ಮತ್ತೊಂದೆಡೆ ಮರಳು ದಂಧೆಕೋರರು ಎರಡೂ ಕಡೆಗಳಿಂದ ಆತಂಕ ಎದುರಿಸಬೇಕಾಗುತ್ತದೆ’ ಎಂದು ಅವರು ಹೇಳಿದರು.

ಸರ್ವ ಪಕ್ಷ ಕಾರಣ

ಹೋರಾಟದ ಸಭೆಯಲ್ಲಿ ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಹೇಳುವಂತೆ, ‘ಮರಳು ಮಾಫಿಯಾದಲ್ಲಿ ಎಲ್ಲ ಪಕ್ಷಗಳ ಮುಖಂಡರ ಹಿಂಬಾಲಕರು ಇದ್ದಾರೆ. ಇವರಿಗೆ ಮತದಾರರು ಬೇಕೋ ಅಥವಾ ಮರಳು ದಂಧೆಕೋರರು ಬೇಕೋ ಎಂಬುದು ನಮ್ಮ ಪ್ರಶ್ನೆ. ಹಾಗಾಗಿ ಜನರೇ ಆಡಳಿತದ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದಾರೆ’.

‘ನದಿ ತಟದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಆದರೆ ದಂಧೆಯ ಸಂದರ್ಭ ಮರಳು ಸಾಗಾಟ ವಾಹನಗಳ ಗುರುತು ಸಿಗದಂತೆ ನಂಬರ್ ಪ್ಲೇಟ್ಗೆ ಕೆಸರು ಎರಚುವುದು. ಅಥವಾ ಕ್ಯಾಮೆರಾವನ್ನೇ ಹಾಳುಗೆಡವುದು ನಡೆಯುತ್ತದೆ. ಹೀಗಾಗಿ ಇಲ್ಲಿ ಯಾವ ದಾಖಲೆಗಳೂ ಉಳಿಯುವುದಿಲ್ಲ’ ಎನ್ನುತ್ತಾರೆ ಮುನೀರ್.

ಮರಳುಗಳ್ಳರ ದೋಣಿಯಲ್ಲೇ ‘ಸಮೀಕ್ಷೆ’

ಜನರ ಹೋರಾಟ ತೀವ್ರವಾದಾಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ದ್ವೀಪ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿದರು. ಈ ಸಮೀಕ್ಷೆಗೆ ಮರಳು ದಂಧೆಕೋರರ ದೋಣಿಗಳಲ್ಲೇ ಹೋಗಿ ‘ಸಮೀಕ್ಷೆ’ ನಡೆಸಿ ಬಂದು ಅಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ ಎಂದು ವರದಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು ಇಲ್ಲಿನ ನಿವಾಸಿಗಳು.

ಮಾಧ್ಯಮ ವರದಿ ಮರೆಮಾಚುವ ಯತ್ನ

ಮಾಧ್ಯಮಗಳ ನಿಯೋಗವೊಂದು ಉಳಿಯ ಪಾವೂರು ದ್ವೀಪಕ್ಕೆ ಭೇಟಿ ನೀಡಿದಾಗ ಈ ವಾಸ್ತವ ಅರಿವಾಗಿದೆ. ಆದರೆ, ಈ ದೃಶ್ಯಗಳು ಪ್ರಸಾರವಾದಾಗ ಈ ಸುದ್ದಿಯೇ ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೇಳಿದ್ದೂ ನಡೆದಿದೆ. ಆದರೆ ಜಿಲ್ಲಾಡಳಿತವು ಸುರತ್ಕಲ್ನ ರಾಷ್ಟ್ರೀಯ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಯ (ಎನ್ಐಟಿಕೆ) ಪರಿಣತರ ನೇತೃತ್ವದಲ್ಲಿ ಪರಿಶೀಲನೆಗೆ ಸೂಚಿಸಿದೆ. ಅದರಂತೆ ಪರಿಣತರ ತಂಡ ವರದಿ ನೀಡಿದೆ. ‘ವಾಸ್ತವ ಸ್ಥಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದು ಎನ್ಐಟಿಕೆ ಮೂಲಗಳು ಹೇಳಿವೆ.

ಮರುವಾಯಿ ಜೀವಜಾಲಕ್ಕೇ ಕುತ್ತು

ಇಲ್ಲಿನ ಮೂರು ದ್ವೀಪಗಳಲ್ಲಿರುವುದು ಕ್ರೈಸ್ತರು, ಕೆಲವೇ ಮುಸ್ಲಿಂ ಮತ್ತು ಹಿಂದೂ ಕುಟುಂಬಗಳಿವೆ. ಆದರೆ, ಎಲ್ಲರ ಕಸುಬು ಮೀನುಗಾರಿಕೆ. ನದಿಯಲ್ಲಿಳಿದು ಮರುವಾಯಿ (Shellfish) ಹಿಡಿದು ಮಾರಾಟ ಮಾಡಿ ಬದುಕು ಕಟ್ಟಿಕೊಂಡವರು. ಆದರೆ, ಮರಳುಗಾರಿಕೆಯಿಂದ ಮರುವಾಯಿ ಜೀವಜಾಲಕ್ಕೇ ಕುತ್ತು ಬಂದಿದೆ. ಏಕೆಂದರೆ ನದಿಯ ಮಧ್ಯ ಭಾಗದಲ್ಲಿ ಆಳ ಕೊರೆದು ಮರಳು ಸಂಗ್ರಹಿ

ಸುತ್ತಾರೆ. ಹೀಗೆ ಮಾಡುವಾಗ ಮರುವಾಯಿ ಜೀವಜಾಲದ ಬೇರುಗಳೇ ಹಾನಿಗೊಳಗಾಗುತ್ತದೆ. ಮೊಟ್ಟೆಗಳು ಮರಳಿನೊಂದಿಗೆ ಹೋಗಿಬಿಡುತ್ತವೆ. ನದಿಗರ್ಭದ ಆಳ ಹೆಚ್ಚುವುದರಿಂದ ನಮಗೆ ನೀರಿಗಿಳಿದು ಮರುವಾಯಿ ಹೆಕ್ಕಲು ಆಗುವುದಿಲ್ಲ. ಹಾಗಾಗಿ ಮರುವಾಯಿ ಸಂಗ್ರಹವೇ ಅಸಾಧ್ಯವಾಗುತ್ತದೆ ಎನ್ನುತ್ತಾರೆ ಉಳ್ಳಾಲ ಹೊಯಿಗೆಯ ನಿವಾಸಿ, ಹೋರಾಟಗಾರ ಪ್ರೇಮ್ ಪ್ರಕಾಶ್ ಡಿಸೋಜಾ.

ನೆರೆ ಬಂದಾಗ ನದಿಯೊಳಗಿನ ಭೂ ವ್ಯವಸ್ಥೆಯನ್ನು ಸರಿಪಡಿಸುವ ಕೆಲಸವನ್ನು ಪ್ರಕೃತಿ ಮಾಡುತ್ತದೆ. ಆದರೆ ವಿಪರೀತ ಆಳವಾದ ಪ್ರದೇಶದಲ್ಲಿ ನದಿ ತನ್ನ ಹರಿವನ್ನೇ ಬದಲಿಸಿಕೊಂಡು ಹೋಗುತ್ತದೆ. ಇತ್ತ ನದಿಯ ವಿನ್ಯಾಸವೂ ಹಾಳಾಗುತ್ತದೆ. ದ್ವೀಪ, ನದಿ ದಂಡೆ ಪ್ರದೇಶಗಳೂ ನೆರೆಯ ಸಂದರ್ಭ ಕೊರೆತಕ್ಕೊಳಗಾಗುತ್ತವೆ ಎಂದರು ಪ್ರೇಮ್ ಪ್ರಕಾಶ್.

ಅಳಿವೆ ಬಾಗಿಲಲ್ಲಿ ಅಲೆಗಳ ತಡೆಭೂಮಿಯೇ ಮಾಯ

‘ಉಳ್ಳಾಲ ಹೊಯ್ಗೆ ಅಳಿವೆ ಭಾಗದಲ್ಲಿ ಸುಮಾರು 20 ಎಕರೆಗಳಷ್ಟು ಭೂ ಪ್ರದೇಶ ಇತ್ತು. ಇದು ಸಮುದ್ರದ ಅಲೆಗಳು ನೇರವಾಗಿ ನಮ್ಮ ದ್ವೀಪಗಳಿಗೆ ಬಡಿಯುವುದನ್ನು ತಪ್ಪಿಸುತ್ತಿತ್ತು. ತೆಂಗಿನ ಮರಗಳು, ಕುರುಚಲು ಗಿಡಗಳು ಅಲೆಗಳ ರಭಸ, ಹೊಡೆತವನ್ನು ತಡೆಯುತ್ತವೆ. ಅಳಿವೆ ಬಾಗಿಲಿನಲ್ಲಿ ದ್ವೀಪ ಮರಳುದಂಧೆಗೆ ಬಲಿಯಾಗಿ ಸಂಪೂರ್ಣ ಇಲ್ಲವಾಗಿದೆ. ಅಲೆಗಳು ನೇರವಾಗಿ ನಮ್ಮ ಮನೆಗಳಿರುವ ಪ್ರದೇಶಗಳಿಗೇ ಬಡಿಯುತ್ತಿದೆ. ಹೀಗಾಗಿ ನಾವು ಕೂಡಾ ಆತಂಕದಿಂದಲೇ ದಿನ ದೂಡುತ್ತಿದ್ದೇವೆ’ ಎಂದರು ಪ್ರೇಮ್ ಪ್ರಕಾಶ್.

ಪುಟ್ಟ ಸೇತುವೆ ಕಟ್ಟಿದ ಬಗೆ

ಫಾ. ಲೋಬೋ ಅವರ ಅವಧಿಯಲ್ಲಿ, ಅವರದೇ ನೇತೃತ್ವದಲ್ಲಿ 2014ರ ಆಸುಪಾಸಿನಲ್ಲಿ ಉಳಿಯ ಪಾವೂರಿಗೆ ಅರೆಕಾಲಿಕ ಸೇತುವೆ ಕಟ್ಟಲಾಯಿತು. ಸುಮಾರು 2 ಇಂಚು ವ್ಯಾಸದ ಪೈಪ್ಗಳನ್ನು ಕಂಬಿಗಳಂತೆ ಜೋಡಿಸಿ ಉಳಿಯ ಪಾವೂರು ಮತ್ತು ನದಿ ದಂಡೆಗೆ ಸಂಪರ್ಕ ಕಲ್ಪಿಸಲಾಯಿತು. ಪ್ರತಿ ವರ್ಷ ಸೆಪ್ಟೆಂಬರ್ ಅಂತ್ಯದಲ್ಲಿ ಈ ಸೇತುವೆ ಕಟ್ಟಲಾಗುತ್ತದೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಈ ಸೇತುವೆಯ ಸಾಮಗ್ರಿಗಳನ್ನು ಕಳಚಿಡಲಾಗುತ್ತದೆ. ದ್ವೀಪ ನಿವಾಸಿಗಳೇ ಇಲ್ಲಿ ಶ್ರಮದಾನದ ಮೂಲಕ ಸೇತುವೆ ಕಟ್ಟುತ್ತಾರೆ. ಈ ಸೇತುವೆ ನಿರ್ಮಾಣವಾದ ಬಳಿಕ ಈ ದ್ವೀಪ ಪ್ರವಾಸಿಗರನ್ನು ಸೆಳೆಯುತ್ತಿದೆ. ಈ ದ್ವೀಪಕ್ಕೆ ಸೇತುವೆ ನಿರ್ಮಿಸಬೇಕು ಎಂಬ ಕೂಗು ಹತ್ತಾರು ವರ್ಷಗಳಿಂದ ಇದೆ. ಆದರೆ, ಅದು ಭರವಸೆಗಷ್ಟೇ ಸೀಮಿತವಾಗಿದೆ.

‘ಜಿಲ್ಲಾಧಿಕಾರಿ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಈ ಪ್ರದೇಶದಲ್ಲಿ ಮರಳುಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಹೋರಾಟ ನಡೆದ ಮರುದಿನವೇ ರಾತ್ರಿ ವೇಳೆ ದೋಣಿಗಳಲ್ಲಿ ಮರಳುಗಾರಿಕೆ ನಡೆದಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದರೂ ದಂಧೆಯಂತೂ ನಿರಾತಂಕವಾಗಿ ಮುಂದುವರಿದಿದೆ’ ಎಂದು ವಿಷಾದಿಸಿದರು ಉಳಿಯ ಪಾವೂರಿನ ಮಂದಿ.

ರಾಜ್ಯದಲ್ಲಿ ಮರಳು ದಂಧೆ; ಇಂದು ಪಕ್ಷಿ ನೋಟ

ಒಂದೆಡೆ ಉತ್ತರ ಭಾರತದ ಕಾರ್ಮಿಕರು ಕರಾವಳಿ ಭಾಗದ ನದಿಗಳಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ನೀರಿನಲ್ಲಿ ಮುಳುಗಿ, ಮರಳು ತುಂಬಿದ ದೋಣಿ ಮಗುಚಿ ಸಾವನ್ನಪ್ಪಿದ ಘಟನೆಗಳು ಅನೇಕ. ಅಕ್ರಮ ಮರಳುಗಾರಿಕೆ ಬಗ್ಗೆ ದೂರು ನೀಡಿದ ಶರತ್ ಮಡಿವಾಳ ಹತ್ಯೆಯು ಕರಾವಳಿಯಲ್ಲಿ ಮತೀಯ ಸಂಘರ್ಷದ ಬಣ್ಣ ಪಡೆದುಕೊಂಡಿತು. ಮರಳು ಮಾಫಿಯಾದ ಕರಾಳ ಮುಖ ಮರೆಗೆ ಸರಿಯಿತು.

ಕೊಪ್ಪಳ ಜಿಲ್ಲೆ ಭಾಗ್ಯನಗರ ಸಮೀಪ ಹಿರೇಹಳ್ಳದಲ್ಲಿ ಸುರಂಗ ತೋಡಿ ಮರಳು ತೆಗೆದದ್ದು, ಹಳ್ಳದೊಳಗೊಂದು ಟೊಳ್ಳು ಭೂಭಾಗವನ್ನೇ ಸೃಷ್ಟಿಸಿತ್ತು. ಇದೇ ಜಿಲ್ಲೆಯ ಅಳವಂಡಿಯಲ್ಲಿ ಮರಳುಗಾರಿಕೆ ಸಂದರ್ಭ ಮೃತಪಟ್ಟ ಕಾರ್ಮಿಕನ ಮೃತದೇಹವನ್ನು ಮರಳು ಸಾಗಿಸುವ ಟ್ರ್ಯಾಕ್ಟರ್ನಲ್ಲಿ ಹಾಕಿ ಮೇಲೆ ಮರಳು ತುಂಬಿ ವಿಲೇವಾರಿ ಮಾಡಲು ಪ್ರಯತ್ನಿಸಲಾಗಿತ್ತು. ದಾವಣಗೆರೆ ಜಿಲ್ಲೆ ಹರಿಹರ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಸಮೀಪ ಹಲುವಾಗಲು ಆಸುಪಾಸಿನಲ್ಲಿ ತುಂಗಭದ್ರಾ ತಟದ ಮರಳು ತೆಗೆಯುವವರು ಮತ್ತು ಹೋರಾಟಗಾರರ ನಡುವಿನ ಸಂಘರ್ಷ ನಿತ್ಯದ ಸುದ್ದಿ. ಇತ್ತ ಕಾವೇರಿ ನದಿ ಪಾತ್ರವೇನೂ ಕಡಿಮೆಯಿಲ್ಲ. ಇಲ್ಲಿ ಮರಳು ಮತ್ತು ಕಲ್ಲು ಗಣಿಗಾರಿಕೆ ಬಹುದೊಡ್ಡ ಮಾಫಿಯಾ ಸ್ವರೂಪ ಪಡೆದಿದೆ. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ನೀಲವಂಜಿ ಗ್ರಾಮದ ಹೊಲವೊಂದರಲ್ಲಿ ಮಲಗಿದ್ದ ಮೂವರು ಕಾರ್ಮಿಕರ ಮೇಲೆ ಮರಳುಗಾರಿಕೆಯ ಜೆಸಿಬಿ ಹರಿದು ಮೂವರೂ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕಳೆದ ವರ್ಷ ನಡೆದಿತ್ತು.

Tags:    

Similar News