ಅಂಬೇಡ್ಕರ್‌ ಸೋಲಿಗೆ ಸಾವರ್ಕರ್‌ ಕಾರಣವಲ್ಲ; ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ: ಛಲವಾದಿ ಸವಾಲು

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿ ಕಾಂಗ್ರೆಸ್‌ ನಾಯಕರು ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌ ಅಲ್ಲ. ಆರ್‌ಎಸ್‌ಎಸ್‌ನ ಸಾವರ್ಕರ್‌ ಎಂದು ಸುಳ್ಳು ಹೇಳುತ್ತಿದ್ದಾರೆ. ಸಾಬೀತು ಮಾಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.;

Update: 2025-05-04 09:26 GMT

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಸಾವರ್ಕರ್ ಅವರೇ ಎಂಬುದನ್ನು ಕಾಂಗ್ರೆಸ್‌ ನಾಯಕರು ಸಾಬೀತುಪಡಿಸಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಜೊತೆಗೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು  ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಭಾನುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಕಾಂಗ್ರೆಸ್‌ ಪ್ರಮುಖ ನಾಯಕರು ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌ ಅಲ್ಲ. ಆರ್‌ಎಸ್‌ಎಸ್‌ನ ಸಾವರ್ಕರ್‌ ಎಂದು ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ಜಯರಾಂ ರಮೇಶ್ ಅವರು ಇದನ್ನು ಸಾಬೀತು ಮಾಡಿದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಒಂದು ವೇಳೆ ಸಾಬೀತು ಮಾಡಲಾಗದಿದ್ದರೆ ಈ ನಾಲ್ವರು ನಾಯಕರೂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

1,00001 ರೂ.ಬಹುಮಾನ ಘೋಷಣೆ

ಅಂಬೇಡ್ಕರ್‌ ಅವರನ್ನು ಸೋಲಿಸಿದ್ದು ಕಾಂಗ್ರೆಸ್‌ ಅಲ್ಲ, ಸಾವರ್ಕರ್‌ ಎಂಬುದನ್ನು ಸಾಬೀತುಪಡಿಸಿದಲ್ಲಿ ನನ್ನ ಸ್ವಂತ ಹಣದಿಂದ 1,00001ರೂ. ಬಹುಮಾನ ಸಹ ನೀಡಲಾಗುವುದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ನನ್ನ ಸ್ವಂತ ದುಡಿಮೆಯ ಹಣದಲ್ಲಿ ಬಹುಮಾನ ನೀಡುತ್ತೇನೆ. ನಾನು ಯಾರದ್ದೋ ನಿವೇಶನ, ಭೂಮಿ ಲಪಟಾಯಿಸಿದ್ದರಿಂದ ದುಡಿದ ದುಡ್ಡಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪುತ್ರ, ಸಚಿವ ಪ್ರಿಯಾಂಕ ಖರ್ಗೆ ʼಡಬಲ್ ಎಂಜಿನ್ʼ ಸುಳ್ಳುಗಾರರು. ಇವರು ಸುಳ್ಳು ಹಬ್ಬಿಸುವುದರಲ್ಲಿ ನಿಪುಣರಾಗಿದ್ದಾರೆ ಎಂದಿದ್ದಾರೆ.

Tags:    

Similar News