ಮಣ್ಣಲ್ಲಿ ಮರೆಯಾದ ಅಭಿನಯ ಸರಸ್ವತಿ; ಹುಟ್ಟೂರು ದಶವಾರದಲ್ಲಿ ಅಂತ್ಯಕ್ರಿಯೆ
ನಟಿ ಬಿ. ಸರೋಜಾದೇವಿ ಅವರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಮೂರು ಸುತ್ತು ಗುಂಡು ಹಾರಿಸಿ ನಮನ ಸಲ್ಲಿಸಲಾಯಿತು.;
ಹಿರಿಯ ನಟಿ, ಅಭಿನಯ ಸರಸ್ವತಿ, ಬಿ. ಸರೋಜಾದೇವಿ ಅವರ ಅಂತ್ಯಸಂಸ್ಕಾರ ಹುಟ್ಟೂರು ಚನ್ನಪಟ್ಟಣ ತಾಲೂಕಿನ ದಶವಾರ ಗ್ರಾಮದ ಅವರ ತೆಂಗಿನ ತೋಟದಲ್ಲಿರುವ ತಾಯಿ ರುದ್ರಮ್ಮ ಅವರ ಸಮಾಧಿ ಪಕ್ಕದಲ್ಲಿ ನೆರವೇರಿತು.
ಹೂವಿನ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಗೋವಿಂದ...ಗೋವಿಂದ ಎಂದು ಸ್ಮರಿಸಿ ಕುಟುಂಬಸ್ಥರು ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿಗಳನ್ನು ನೆರವೇರಿಸಿದರು. ನಟಿ ಬಿ. ಸರೋಜಾದೇವಿ ಅವರಿಗೆ ಸರ್ಕಾರಿ ಗೌರವದೊಂದಿಗೆ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ಅಂತ್ಯಕ್ರಿಯೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಸಿ.ಪಿ. ಯೋಗೇಶ್ವರ್, ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು. ನಟ ಸುಂದರ್ ರಾಜ್, ಜಯಮಾಲಾ, ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಿ.ಸರೋಜಾದೇವಿ ಅವರ ನಿಧನದಿಂದಾಗಿ ಹುಟ್ಟೂರು ದಶವಾರದಲ್ಲಿ ನೀರವಮೌನ ಆವರಿಸಿತ್ತು. ಗ್ರಾಮದ ಅರಳಿಕಟ್ಟೆ ವೃತ್ತದ ಎದುರಿಗಿರುವ ಅವರ ಮನೆ 'ಬಿ. ಸರೋಜಾದೇವಿ ನಿಲಯ'ದ ಎದುರು ಗ್ರಾಮಸ್ಥರು ಹಾಗೂ ಅಭಿಮಾನಿಗಳು ಜಮಾಯಿಸಿದರು. ಮನೆ ಎದುರು ಅವರ ಫೋಟೊ ಹಾಕಿ ಶ್ರದ್ದಾಂಜಲಿ ಸಲ್ಲಿಸಿದರು.
1955 ರಲ್ಲಿ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸರೋಜಾ ದೇವಿ ಅವರ ಅಭಿನಯದ ಮೊದಲ ಚಿತ್ರವೇ ರಾಷ್ಟ್ರ ಪ್ರಶಸ್ತಿಗೆ ಭಾಜನವಾಗಿತ್ತು. 1955 ರಲ್ಲಿ ಸರೋಜದೇವಿ ಶ್ರೀರಾಮ ಪೂಜ ಎಂಬ ಚಿತ್ರದಲ್ಲಿ ಕಾಣಿಸಿದ್ದರು.
ಕನ್ನಡದಲ್ಲಿ ಡಾ.ರಾಜ್‌ಕುಮಾರ್ ಹಾಗೂ ಸರೋಜಾ ದೇವಿ ಜೋಡಿ ಅಭಿಮಾನಿಗಳ ಅಚ್ಚುಮೆಚ್ಚಿನ ಜೋಡಿಯಾಗಿತ್ತು. ಅಂದಿನ ಕಾಲದಲ್ಲಿ ತಮಿಳು ಚಿತ್ರರಂಗದ ಅಗ್ರ ತಾರೆಯರಾದ ಎಂಜಿಆರ್, ಶಿವಾಜಿ ಗಣೇಶನ್ ಮತ್ತು ಜೆಮಿನಿ ಗಣೇಶನ್ ಅವರೊಂದಿಗೆ ನಟಿಸಿದ್ದ ನಟಿ ಎಂದರೆ ಅದು ಸರೋಜಾ ದೇವಿ ಮಾತ್ರ ಎಂಬುದು ವಿಶೇಷ.
ಸರೋಜ ದೇವಿ ಅವರು ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ನಟ ಪುನೀತ್ ರಾಜ್‌ಕುಮಾರ್ ಅವರ ನಟ ಸಾರ್ವಭೌಮ ಸಿನಿಮಾದಲ್ಲಿ ಕೊಲೆಯಾದಾಗ ಬಿ ಸರೋಜದೇವಿ ನಟಿಸಿದ್ದರು. ತಮ್ಮ ದೇಹವನ್ನು ಹೂತಿಡಬೇಕೆಂದು ಹೇಳಿದ್ದರಿಂದ ಅವರ ಇಚ್ಛೆಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಅವರ ಪುತ್ರ ಗೌತಮ್ ತಿಳಿಸಿದರು.