Sarigama Viji| ಕನ್ನಡದ ಹಿರಿಯ ನಟ ʻಸರಿಗಮ ವಿಜಿʼ ಇನ್ನಿಲ್ಲ
Sarigama Viji| 'ಸಂಸಾರದಲ್ಲಿ ಸರಿಗಮ' ಬರೆದು ನಿರ್ದೇಶಿಸಿ ಗೆದ್ದಿದ್ದರು. ಇದರಿಂದಾಗಿ ಮುಂದೆ ಸರಿಗಮ ವಿಜಿ ಎಂದೇ ಹೆಸರಾದರು.;
ಕನ್ನಡದ ಹಿರಿಯ ನಟ ಸರಿಗಮ ವಿಜಿ ವಿಧಿವಶರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಕಳೆದ 4 ದಿನಗಳಿಂದ ಯಶವಂತಪುರದ ಬಳಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ 9:45ರ ನಿಧನ ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಸರಿಗಮ ವಿಜಿ ಅವರ ಪೂರ್ಣ ಹೆಸರು ವಿಜಯ್ ಕುಮಾರ್. ನಗರದ ಎಚ್‌ಎಎಲ್ ಬಳಿಯ ವಿಮಾನಪುರದಲ್ಲಿ ಅವರು ಹುಟ್ಟಿದ್ದರು. ತಂದೆ ರಾಮಯ್ಯ ಹೆಚ್‌ಎಎಲ್ ಉದ್ಯೋಗಿಯಾಗಿದ್ದರು. ಒಟ್ಟು ಐವರು ಮಕ್ಕಳಲ್ಲಿ ವಿಜಯ್ ಕುಮಾರ್ ಕೊನೆಯವರು. 'ಸಂಸಾರದಲ್ಲಿ ಸರಿಗಮ' ಬರೆದು ನಿರ್ದೇಶಿಸಿದ ಕಾರಣ ಮುಂದೆ ಸರಿಗಮ ವಿಜಿ ಎಂದೇ ಹೆಸರಾಗಿದ್ದರು. ನೂರಾರು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಿಂದ ಮೋಡಿ ಮಾಡಿರುವ ಸರಿಗಮ ವಿಜಿ ಅವರು 250ಕ್ಕೂ ಹೆಚ್ಚು ಸಿನಿಮಾಗಳು, ಹಲವಾರು ಧಾರಾವಾಹಿ ಹಾಗೂ ನಾಟಕಗಳಲ್ಲಿ ನಟಿಸಿದ್ದಾರೆ. 80ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.
ವಿಜಿ ಅವರು ಸಿನಿಮಾಗಳಲ್ಲಿ ನಟಿಸುವ ಮುಂಚೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ನಟಿಸಿದ್ದ ‘ಸಂಸಾರದಲ್ಲಿ ಸರಿಗಮ’ ನಾಟಕ ಬಹಳ ಜನಪ್ರಿಯತೆ ಗಳಿಸಿತ್ತು. ಕರ್ನಾಟಕದ ಹಲವು ಜಿಲ್ಲೆಗಳು ಸೇರಿದಂತೆ, ಹೈದರಾಬಾದ್, ಚೆನ್ನೈ, ದೆಹಲಿಗಳಲ್ಲಿಯೂ ಆ ನಾಟಕ ಪ್ರದರ್ಶನವಾಗಿತ್ತು. ಸುಮಾರು 1390 ಪ್ರದರ್ಶನ ಕಂಡಿತ್ತು.
ಶಂಕರ್‌ನಾಗ್, ಕಲ್ಯಾಣ್‌ಕುಮಾರ್, ಅನಂತನಾಗ್, ಅಂಬರೀಶ್, ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ದೇವರಾಜ್, ದರ್ಶನ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಮುಂತಾದ ನಟರ ಜೊತೆ ವಿಜಯಕುಮಾರ್ ತೆರೆಹಂಚಿಕೊಂಡಿದ್ದಾರೆ. ಹಲವು ಧಾರಾವಾಹಿಗಳಿಗೂ ಅವರು ಬಣ್ಣಹಚ್ಚಿದ್ದಾರೆ. ಅವರ ನಟನಾ ಕ್ಷೇತ್ರದ ಸಾಧನೆಗಾಗಿ ತೆಲುಗು ವಿಜ್ಞಾನ ಸಮಿತಿ ನೀಡುವ ‘ಶ್ರೀಕೃಷ್ಣದೇವರಾಯ ಪುರಸ್ಕಾರ’, ರಾಜ್ಯೋತ್ಸವ ಪ್ರಶಸ್ತಿ ಅರಸಿ ಬಂದಿದೆ.
ವಿಜಿ ಅವರ ಕೊನೆಯ ಸಿನಿಮಾ ‘ಡಕೋಟಾ ಪಿಕ್ಚರ್’. ಸರಿಗಮ ಹಲವು ಗಂಭೀರ ಪಾತ್ರಗಳಲ್ಲಿಯೂ ನಟಿಸಿದ್ದರು. ಪೋಷಕ ಪಾತ್ರ, ವಿಲನ್ ಪಾತ್ರಗಳಲ್ಲಿಯೂ ವಿಜಿ ಅವರು ನಟನೆ ಮಾಡಿದ್ದರು.
ವಿಜಿ ನಿಧನಕ್ಕೆ ಚಿತ್ರರಂಗದ ಹಾಗೂ ಇನ್ನಿತರ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ಬುಧವಾರ ಮಧ್ಯಾಹ್ನ1 ಗಂಟೆಯಿಂದ ನಾಳೆ ಬೆಳಗ್ಗೆ 10 ಗಂಟೆವರೆಗೂ ಮಹಾಲಕ್ಷ್ಮೀ ಪುರಂನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಂತರ ಚಾಮರಾಜಪೇಟೆ ಸ್ಮಶಾನದಲ್ಲಿ ಅಂತ್ಯಕ್ರಿಯೆಯಲ್ಲಿ ನಡೆಯಲಿದೆ.