Contractor suicide | ಸಿಐಡಿ ಕಸ್ಟಡಿಗೆ ಸಚಿನ್ ಆತ್ಮಹತ್ಯೆ ಪ್ರಕರಣದ ಆರೋಪಿಗಳು
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದ ಐವರು ಆರೋಪಿಗಳನ್ನು ಜೆಎಂಎಫ್‌ಸಿ ನ್ಯಾಯಾಲಯ 5 ದಿನಗಳವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ. ಉಳಿದ ಮೂವರಿಗಾಗಿ ಸಿಐಡಿ ಶೋಧ ಕೈಗೊಂಡಿದೆ.;
ಬೀದರ್‌ನಲ್ಲಿ ಯುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಾದ ರಾಜು ಕಪನೂರ ಸೇರಿದಂತೆ ಐವರು ಆರೋಪಿಗಳನ್ನು ಸಿಐಡಿ ಬಂಧಿಸಿದ್ದು, ಐದು ದಿನ ಕಸ್ಟಡಿಗೆ ಪಡೆದಿದೆ.
ಗುತ್ತಿಗೆದಾರ ಸಚಿನ್ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದ ಎಂಟೂ ಮಂದಿ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ತನಿಖಾಧಿಕಾರಿಗಳು ಜ.6 ರಂದು ನೋಟಿಸ್ ನೀಡಿದ್ದರು. ಅದರಂತೆ ಶುಕ್ರವಾರ ವಿಚಾರಣೆಗೆ ಹಾಜರಾದ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋರಖನಾಥ ಸಜ್ಜನ್, ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಂದಕುಮಾರ ನಾಗಭುಜಂಗೆ, ಕಲಬುರಗಿಯ ಪ್ರಥಮ ದರ್ಜೆ ಗುತ್ತಿಗೆದಾರ ರಾಮನಗೌಡ ಪಾಟೀಲ ಹಾಗೂ ಸತೀಶ ರತ್ನಾಕರ ದುಬಲಗುಂಡಿ ಅವರನ್ನು ಬಂಧಿಸಿ, ನಗರದ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ಎದುರು ಹಾಜರುಪಡಿಸಿದರು.
ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಧೀಶ ರಾಮಮೂರ್ತಿ ಅವರು ಆರೋಪಿಗಳನ್ನು 5 ದಿನಗಳವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿದರು. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.
2024 ಡಿಸೆಂಬರ್ 26 ರಂದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದ ಗುತ್ತಿಗೆದಾರ ಸಚಿನ್ ಮಾನಪ್ಪ ಪಾಂಚಾಲ್ ಅವರು ಬಸವೇಶ್ವರ ವೃತ್ತದ ರೈಲು ಹಳಿಯ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಏಳು ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು.
ಆತ್ಮಹತ್ಯೆ ಪ್ರಕರಣ ಸಂಬಂಧ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿತ್ತು. ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು.
ಸಿಐಡಿ ಡಿವೈಎಸ್‌ಪಿ ಸುಲೇಮಾನ್ ತಹಶಿಲ್ದಾರ್ ನೇತೃತ್ವದ ಅಧಿಕಾರಿಗಳ ತಂಡ ಬೀದರ್‌ನಲ್ಲಿ ಬೀಡು ಬಿಟ್ಟಿದ್ದು, ಎಲ್ಲ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸುತ್ತಿದೆ.
ವಿಚಾರಣೆಗಾಗಿ ಬೆಂಗಳೂರಿಗೆ ರವಾನೆ
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ತೆರೆದಿರುವ ಸಿಐಡಿಯ ತಾತ್ಕಾಲಿಕ ಕಚೇರಿಗೆ ಆರೋಪಿಗಳನ್ನು ಕರೆತಂದು ಡಿಐಜಿಪಿ ಶಾಂತನು ಎದುರು ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಆರೋಪಿಗಳನ್ನು ಕಸ್ಟಡಿಗೆ ಪಡೆದ ನಂತರ ಹೆಚ್ಚಿನ ವಿಚಾರಣೆಗಾಗಿ ಸಿಐಡಿ ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ. ಗುತ್ತಿಗೆದಾರ ಸಚಿನ್ ಹಾಗೂ ರಾಜು ಕಪನೂರ ಮಧ್ಯೆ ಹಣಕಾಸು ವ್ಯವಹಾರ, ಪ್ರಾಣ ಬೆದರಿಕೆ ಹಾಕಿದ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.