ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಗೆ ಎಸ್.ಎಂ. ಕೃಷ್ಣ ಹೆಸರು
ಇತ್ತೀಚೆಗೆ ನಿಧನರಾದ ಮಾಜಿ ಮಖ್ಯಮಂತ್ರಿ, ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಶ್ರದ್ದಾಂಜಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಭೆ ಬೆಂಗಳೂರಿನಲ್ಲಿ ನಡೆಸಲಾಯಿತು.;
ಇತ್ತೀಚೆಗೆ ನಿಧನರಾದ ಮಾಜಿ ಮಖ್ಯಮಂತ್ರಿ, ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶ್ರದ್ದಾಂಜಲಿ ಸಭೆಯನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಈ ವೇಳೆ ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದ ವೇದಿಕೆಗೆ ಎಸ್ ಎಂ ಕೃಷ್ಣ ಹೆಸರಿಡುವುದಾಗಿ ಮಹೇಶ್ ಜೋಶಿ ಹೇಳಿದರು.
ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಮಾತನಾಡಿ,87ನೇ ಸಾಹಿತ್ಯ ಸಮ್ಮೇಳನ ನಡೆಯಲಿರುವ ನೆಲದಿಂದ ಬಂದಿದ್ದ ಎಸ್.ಎಂ. ಕೃಷ್ಣ ಅವರನ್ನು ಸಮ್ಮೇಳನಕ್ಕೆ ಕರೆತರಬೇಕೆಂದು ಸಾಕಷ್ಟು ಪ್ರಯತ್ನಿ ಸಿದ್ದೆ. ಇದಕ್ಕೆ ಸಕಾರಾತ್ಮಕ ಸ್ಪಂದನೆ ದೊರಕಿತ್ತು. ಆದರೆ ಇದೀಗ ಅವರು ನಮ್ಮೊಂದಿಗೆ ಇಲ್ಲ. ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಸ್.ಎಂ.ಕೃಷ್ಣ ಅವರ ಉಪಸ್ಥಿತಿ ಸಮ್ಮೇಳನದ ಮೆರಗು ಹೆಚ್ಚಿಸುತ್ತಿತ್ತು. ಆದರೆ, ಈಗ ಅವರ ಹೆಸರನ್ನು ವೇದಿಕೆಗೆ ಇಡುವಂತಹ ಸಂದರ್ಭ ಬಂದಿರುವುದು ನಿಜಕ್ಕೂ ವಿಷಾದಕರ ಎಂದು ಅವರು ತಿಳಿಸಿದರು.
ಎಸ್.ಎಂ.ಕೃಷ್ಣ ಅವರು ಸಮ್ಮೇಳನ ಘೋಷಣೆಯಾದ ದಿನದಿಂದಲೂ ಉತ್ಸಾಹ ತೋರಿದ್ದರು. ಹಲವು ಉಪಯುಕ್ತ ಸಲಹೆಗಳನ್ನು ನೀಡಿದ್ದರು. ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ಯನ್ನೂ ನೀಡಿದ್ದರು. ಈಗ ಅವರ ನಿಧನ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದರು.
'ಸುಸಂಸ್ಕೃತ ರಾಜಕಾರಣಿಯಾಗಿದ್ದ ಅವರು, ಕಲೆ ಮತ್ತು ಸಾಹಿತ್ಯದ ಬಗ್ಗೆ ಅಪಾರ ಪ್ರೇಮ ಇಟ್ಟುಕೊಂಡಿದ್ದರು. ಹಲವು ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನ ನಡೆಸಿದ್ದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಾಲ್ಕು ಸಾಹಿತ್ಯ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದವು' ಎಂದು ಸ್ಮರಿಸಿಕೊಂಡರು.
ಸಂಶೋಧಕ ತಲಕಾಡು ಚಿಕ್ಕರಂಗೇಗೌಡ, 'ಎಸ್.ಎಂ.ಕೃಷ್ಣ ಅವರು ಉತ್ತಮ ತಬಲಾ ವಾದಕರೂ, ಹವ್ಯಾಸಿ ರಂಗಭೂಮಿ ನಟರೂ ಆಗಿದ್ದರು' ಎಂದು ಹೇಳಿ, ಜೀವನಶೈಲಿ, ಉಡುಗೆ ತೊಡುಗೆಗಳಲ್ಲಿ ಅವರಿಗಿದ್ದ ಅಭಿರುಚಿಯನ್ನು ವಿವರಿಸಿದರು. ಕಸಾಪ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಪದ್ಮನಿ ನಾಗರಾಜು, ಗೌರವ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು ಉಪಸ್ಥಿತರಿದ್ದರು.