ಮೀಸಲಾತಿ ಹೇಳಿಕೆ | ರಾಹುಲ್‌ ಗಾಂಧಿ ವಿರುದ್ಧ ರಾಜ್ಯ ಬಿಜೆಪಿ ಪೊಲೀಸ್‌ ದೂರು

ಮೀಸಲಾತಿ ಕುರಿತು ಅಮೆರಿಕದಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ರಾಜ್ಯ ಬಿಜೆಪಿ ದೂರು ನೀಡಿದೆ.;

Update: 2024-09-21 07:43 GMT

ಮೀಸಲಾತಿ ಮತ್ತು ಸಿಖ್‌ ಸಮುದಾಯದ ಕುರಿತು ಅಮೆರಿಕದಲ್ಲಿ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ರಾಜ್ಯ ಬಿಜೆಪಿ ದೂರು ನೀಡಿದೆ.

ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜಕುಮಾರ್ ಪಾಟೀಲ್, ಪಕ್ಷದ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತಕುಮಾರ್ ಮತ್ತಿತರ ಬಿಜೆಪಿ ನಾಯಕರು ಈ ದೂರು ನೀಡಿದ್ದಾರೆ.

ಇತ್ತೀಚೆಗೆ ಅಮೆರಿಕ ಪ್ರವಾಸದ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯನ್ನು ರದ್ದುಪಡಿಸುವ ಕುರಿತು ಕಾಂಗ್ರೆಸ್ ಪಕ್ಷ ಚಿಂತಿಸಲಿದೆ’ ಎಂದು ಹೇಳಿದ್ದರು. ನಂತರದ ಮಾಧ್ಯಮ ಸಂವಾದದಲ್ಲಿ, ‘ನಾನು ಮೀಸಲಾತಿಗೆ ವಿರುದ್ಧವಾಗಿ ಇದ್ದೇನೆ ಎಂಬಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ.50 ಮೀರಿ ವಿಸ್ತರಿಸಲಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದರು.

ಮೀಸಲಾತಿ ರದ್ದುಪಡಿಸುವುದಾಗಿ ರಾಹುಲ್ ಹೇಳಿದ್ದಾರೆ ಎಂದು ಬಿಜೆಪಿ ದೇಶವ್ಯಾಪಿ ಹೋರಾಟ ನಡೆಸಿತ್ತು. ರಾಹುಲ್ ಗಾಂಧಿ ನಿಲುವು ಸಂವಿಧಾನ ವಿರೋಧಿ ಎಂದು ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು ಟೀಕಿಸಿದ್ದರು. ಅಷ್ಟೇ ಅಲ್ಲದೆ, ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸುವ ವ್ಯಕ್ತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಹೇಳಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆಯ ಕುರಿತು ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ಬೆಂಕಿಯುಗುಳುತ್ತಿರುವ ನಡುವೆಯೇ ರಾಜ್ಯ ಬಿಜೆಪಿಯ ಪ್ರಮುಖರು ಆ ಹೇಳಿಕೆಯ ಹಿನ್ನೆಲೆಯಲ್ಲಿ ಪೊಲೀಸ್ ದೂರು ದಾಖಲಿಸಿದ್ದಾರೆ.

Tags:    

Similar News