ಚನ್ನರಾಯಪಟ್ಟಣದ ಮಡಬದಲ್ಲಿ 15 ಕೋಟಿ ರೂ. ಮೌಲ್ಯದ ಅರಣ್ಯ ಒತ್ತುವರಿ ತೆರವು

ಅರಣ್ಯ ಇಲಾಖೆಯು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಇಂದು ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ತೆರಳಿ ಒತ್ತುವರಿಯನ್ನು ತೆರವುಗೊಳಿಸಿದೆ. ಅಲ್ಲದೆ, ಸ್ಥಳದಲ್ಲಿ ಸ್ಥಳೀಯ ಪ್ರಭೇದದ ಸಸಿಗಳನ್ನು ನೆಟ್ಟು ನಾಮಫಲಕವನ್ನು ಅಳವಡಿಸಲಾಗಿದೆ.;

Update: 2025-05-18 08:24 GMT

ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದ ಮೇರೆಗೆ, ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ಮಡಬ ಗ್ರಾಮದಲ್ಲಿ ಇಂದು ಅರಣ್ಯಾಧಿಕಾರಿಗಳು ಸುಮಾರು 15 ಕೋಟಿ ರೂಪಾಯಿ ಮೌಲ್ಯದ 27 ಎಕರೆ ಅರಣ್ಯ ಭೂಮಿಯನ್ನು ತೆರವುಗೊಳಿಸಿದ್ದಾರೆ. 

ಮಡಬ ಗ್ರಾಮದ ಸರ್ವೆ ನಂ. 27ರಲ್ಲಿ 26 ಎಕರೆ 33 ಗುಂಟೆ ಮೀಸಲು ಅರಣ್ಯ ಜಮೀನನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಅಲ್ಲಿದ್ದ ಮರಗಳನ್ನು ಕಡಿದು ತೋಟವನ್ನಾಗಿ ಪರಿವರ್ತಿಸಿದ್ದರು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು ಕಳೆದ ಅಕ್ಟೋಬರ್ 23ರಂದು ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಅರಣ್ಯ ಇಲಾಖೆಯು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಇಂದು ಜೆಸಿಬಿ ಯಂತ್ರಗಳೊಂದಿಗೆ ಸ್ಥಳಕ್ಕೆ ತೆರಳಿ ಒತ್ತುವರಿಯನ್ನು ತೆರವುಗೊಳಿಸಿದೆ. ಅಲ್ಲದೆ, ಸ್ಥಳದಲ್ಲಿ ಸ್ಥಳೀಯ ಪ್ರಭೇದದ ಸಸಿಗಳನ್ನು ನೆಟ್ಟು ನಾಮಫಲಕವನ್ನು ಅಳವಡಿಸಲಾಗಿದೆ.

 

ಖಂಡ್ರೆ ಅವರ ಈ ಕ್ರಮಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಕೆಲವರು ಶುಂಠಿ ಬೆಳೆಯುವ ನೆಪದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅರಣ್ಯ ಭೂಮಿಯನ್ನು ಕಬಳಿಸುತ್ತಿದ್ದರು ಮತ್ತು ಬೆಲೆಬಾಳುವ ಮರಗಳನ್ನು ಕಡಿದು ತೋಟಗಳನ್ನು ಮಾಡುತ್ತಿದ್ದರು. ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅರಣ್ಯ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡುತ್ತಿದ್ದರು. ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ನಂತರ ಇಂತಹ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮಡಬ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆಯು ಅರಣ್ಯ ಭೂಮಿಯನ್ನು ಮನಸ್ಸೋಇಚ್ಛೆ ಒತ್ತುವರಿ ಮಾಡಿಕೊಂಡು ತೆಂಗು, ಕಾಫಿ ಮತ್ತು ಅಡಿಕೆ ತೋಟಗಳನ್ನು ಮಾಡುತ್ತಿದ್ದವರಿಗೆ ಎಚ್ಚರಿಕೆಯ ಗಂಟೆಯಾಗಿದೆ. ಇಂದಿನ ಕಾರ್ಯಾಚರಣೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

Tags:    

Similar News