ರೀಲ್ಸ್​ಗಾಗಿ ಮಚ್ಚು ಹಿಡಿದ ರಜತ್ ಕಿಶನ್ ಮತ್ತು ವಿನಯ್ ಗೌಡಗೆ ಜಾಮೀನು

ಪೊಲೀಸ್ ಉಪ-ಆಯುಕ್ತ (ಪಶ್ಚಿಮ) ಎಸ್. ಗಿರೀಶ್ ಅವರ ಪ್ರಕಾರ, ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ಶಸ್ತ್ರಾಸ್ತ್ರ ಕಾಯಿದೆ 1959 (ಸೆಕ್ಷನ್ 25(1B)(B)) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) 2023 (ಸೆಕ್ಷನ್ 270, ಜೊತೆಗೆ 3(5)) ಅಡಿಯಲ್ಲಿ ಬಂಧಿಸಲಾಗಿತ್ತು.;

Update: 2025-03-28 11:37 GMT

ಬಿಗ್ ಬಾಸ್ ಕನ್ನಡ ಖ್ಯಾತಿಯ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರಿಗೆ ಶಸ್ತ್ರಾಸ್ತ್ರ ಕಾಯಿದೆ ಪ್ರಕರಣದಲ್ಲಿ ಬೆಂಗಳೂರಿನ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಈ ಇಬ್ಬರು ರಿಯಾಲಿಟಿ ಶೋ ತಾರೆಯರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ರೀಲ್ಸ್​ನಲ್ಲಿ ಮುಚ್ಚು ಹಿಡಿದಿದ್ದರು. ವಿಡಿಯೊ ವೈರಲ್ ಆದ ಬಳಿಕ ದೂರು ದಾಖಲಾಗಿತ್ತು.

ರಜತ್ ಕಿಶನ್ ಮತ್ತು ವಿನಯ್ ಗೌಡ ಅವರು 'ಬಾಯ್ಸ್ ವರ್ಸಸ್ ಗರ್ಲ್ಸ್' ಎಂಬ ರಿಯಾಲಿಟಿ ಶೋಗಾಗಿ ಒಂದು 18 ಸೆಕೆಂಡ್‌ಗಳ ರೀಲ್ ವಿಡಿಯೊ ಚಿತ್ರೀಕರಿಸಿದ್ದರು. ಈ ವಿಡಿಯೊದಲ್ಲಿ ಮಚ್ಚು ಹಿಡಿದು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿರುವ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಿತು. ಈ ವಿಡಿಯೊ ಮಾರ್ಚ್ 18, 2025 ರಂದು ರಜತ್ ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ "bujjjjii" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಆಗಿತ್ತು. ಇದು ಸುಮಾರು 52,600 ಲೈಕ್‌ಗಳು, 1,061 ಕಾಮೆಂಟ್‌ಗಳು ಮತ್ತು 5,520 ಶೇರ್‌ಗಳನ್ನು ಪಡೆದು ವೈರಲ್ ಆಗಿತ್ತು. ಆದರೆ, ಈ ವಿಡಿಯೊದಲ್ಲಿ ಆಯುಧವನ್ನು ಪ್ರದರ್ಶಿಸಿದ್ದರಿಂದ ಬಸವೇಶ್ವರನಗರ ಪೊಲೀಸರು ಮಾರ್ಚ್ 20, 2025 ರಂದು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿದರು.

ಕಾನೂನು ಪ್ರಕ್ರಿಯೆ ಯಾಕೆ?

ಪೊಲೀಸ್ ಉಪ-ಆಯುಕ್ತ (ಪಶ್ಚಿಮ) ಎಸ್. ಗಿರೀಶ್ ಅವರ ಪ್ರಕಾರ, ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ಶಸ್ತ್ರಾಸ್ತ್ರ ಕಾಯಿದೆ 1959 (ಸೆಕ್ಷನ್ 25(1B)(B)) ಮತ್ತು ಭಾರತೀಯ ನ್ಯಾಯ ಸಂಹಿತೆ (BNS) 2023 (ಸೆಕ್ಷನ್ 270, ಜೊತೆಗೆ 3(5)) ಅಡಿಯಲ್ಲಿ ಬಂಧಿಸಲಾಗಿತ್ತು. ಆರಂಭದಲ್ಲಿ ಅವರು ಫೈಬರ್‌ನಿಂದ ಮಾಡಿದ ಆಯುಧ ಒಪ್ಪಿಸಿ ಬಿಡುಗಡೆಯಾಗಿದ್ದರು. ಆದರೆ, ಪೊಲೀಸರು ಇದು ವಿಡಿಯೊದಲ್ಲಿ ತೋರಿಸಿದ ಮೂಲ ಆಯುಧವಲ್ಲ ಎಂದು ಶಂಕಿಸಿ, ಸಾಕ್ಷ್ಯ ನಾಶದ ಆರೋಪದಡಿ ಮತ್ತೆ ಬಂಧಿಸಿದ್ದಾರೆ. ಮಾರ್ಚ್ 25 ರ ರಾತ್ರಿ ಇವರನ್ನು 24ನೇ ಎಸಿಜೆಎಂ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ, ಮಾರ್ಚ್ 26 ರಂದು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು, ಇದು ಮಾರ್ಚ್ 28 ರವರೆಗೆ ಮುಂದುವರೆದಿತ್ತು.

ಜಾಮೀನು ಮಂಜೂರು

ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ, ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇವರ ವಕೀಲರು, ವಿಡಿಯೊದಲ್ಲಿ ಬಳಸಿದ ಆಯುಧವು ನಕಲಿ (ಪ್ರಾಪ್) ಆಗಿದ್ದು, ಯಾವುದೇ ಸಾರ್ವಜನಿಕ ಹಾನಿ ಉದ್ದೇಶಿಸಿರಲಿಲ್ಲ ಎಂದು ವಾದಿಸಿದ್ದಾರೆ. ವಾದ ಪರಿಗಣಿಸಿದ ನ್ಯಾಯಾಲಯವು ಜಾಮೀನು ನೀಡಿದೆ.

Tags:    

Similar News